Site icon Vistara News

ವಿಸ್ತಾರ Explainer| ಸಣ್ಣ ಉಳಿತಾಯಗಳ ಬಡ್ಡಿ ದರ ಯಥಾಸ್ಥಿತಿ, ಹೂಡಿಕೆದಾರರಿಗೆ ದೊಡ್ಡ ಹೊಡೆತ

savings

ದೇಶದಲ್ಲಿ ಕೋಟ್ಯಂತರ ಸಣ್ಣ ಉಳಿತಾಯಗಾರರು ಮತ್ತು ಪಿಂಚಣಿದಾರರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಏಕೆಂದರೆ ಸರ್ಕಾರ ೨೦೨೨ರ ಜುಲೈ-ಸೆಪ್ಟೆಂಬರ್‌ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಹಣದುಬ್ಬರ ಏರುಗತಿಯಲ್ಲಿ ಇರುವುದರಿಂದ ಹಾಗೂ ಬ್ಯಾಂಕ್‌ಗಳೂ ಇತ್ತೀಚೆಗೆ ನಿಶ್ಚಿತ ಠೇವಣಿಯ ಬಡ್ಡಿ ದರಗಳನ್ನು ಏರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಏರಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಕಳೆದ ೨೦೨೦-೨೧ರ ಮೊದಲ ತ್ರೈಮಾಸಿಕದಿಂದಲೂ (ಏಪ್ರಿಲ್-ಜೂನ್)‌ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪರಿಷ್ಕರಣೆಯಾಗಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಇವುಗಳ ಬಡ್ಡಿ ದರ ಪರಾಮರ್ಶೆ ನಡೆಸುತ್ತದೆ.

ಸಣ್ಣ ಉಳಿತಾಯಗಾರರ ಸಂಕಷ್ಟ ಹಲವು

ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಸಣ್ಣ ಉಳಿತಾಯಗಾರರಿಗೆ ಸುರಕ್ಷಿತ ಆದಾಯದ ಮೂಲಗಳಾಗಿವೆ. ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಳಿತಗಳು ಸಂಭವಿಸುತ್ತಿರುವಾಗ ಹಿರಿಯ ನಾಗರಿಕರು ತಮ್ಮ ಉಳಿತಾಯದ ಹೂಡಿಕೆಯನ್ನು ಸುರಕ್ಷಿತ ಹಣಕಾಸು ಸಾಧನಗಳಲ್ಲಿ ಠೇವಣಿ ಇಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಜನಪ್ರಿಯವಾಗಿವೆ. ಇದರಲ್ಲಿ ಮಾಸಿಕ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪಿಪಿಎಫ್‌ ಸೇರಿದೆ. ಇವುಗಳ ಬಡ್ಡಿ ದರಗಳನ್ನು ಸರ್ಕಾರ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಜೂನ್‌ ೩೦ಕ್ಕೆ ಇವುಗಳ ಬಡ್ಡಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆ ಇದೆ. ಕಳೆದ ಕೆಲ ತ್ರೈಮಾಸಿಕಗಳಿಂದ ಸರ್ಕಾರ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿತ್ತು.

ಹುಸಿಯಾದ ಬಡ್ಡಿ ದರ ಏರಿಕೆಯ ನಿರೀಕ್ಷೆ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ದೇಶದಲ್ಲಿ ಹಣದುಬ್ಬರವನ್ನು ಹತ್ತಿಕ್ಕಲು ತನ್ನ ರೆಪೊದರದಲ್ಲಿ ಎರಡು ಹಂತಗಳಲ್ಲಿ ಒಟ್ಟು ೦.೯೦% ಏರಿಕೆ ಮಾಡಿದೆ. ಹೀಗಾಗಿ ಸಾಲಗಾರರು ಹೆಚ್ಚು ಹಣವನ್ನು ನೀಡಬೇಕಾಗುತ್ತದೆ. ಇದರ ಪರಿಣಾಮ ಹೂಡಿಕೆದಾರರ ಆದಾಯ ಹೆಚ್ಚಲಿದೆ. ಈಗಾಗಲೇ ಹಲವು ಬ್ಯಾಂಕ್‌ಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿ ದರ ಏರಿಸಿವೆ. ಹೀಗಾಗಿ ಸರ್ಕಾರ ಕೂಡ ಜುಲೈ-ಸೆಪ್ಟೆಂಬರ್‌ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೂಡ ಏರಿಸುವ ಸಾಧ್ಯತೆ ಉಂಟಾಗಿತ್ತು.

ಪ್ರಸ್ತುತ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಇಂತಿವೆ

ಅಧಿಕ ಹಣದುಬ್ಬರದ ಪರಿಣಾಮವೇನು?

ದೇಶದಲ್ಲಿ ಕಳೆದ ಮೇನಲ್ಲಿ ಚಿಲ್ಲರೆ ಹಣದುಬ್ಬರ ೭.೦೪% ಇತ್ತು. ಚಿಲ್ಲರೆ ಹಣದುಬ್ಬರ ಶೇಕಡಾ ೭ರ ಗಡಿ ದಾಟಿರುವುದರಿಂದ ಸಾರ್ವನಿಕ ಭವಿಷ್ಯನಿಧಿ (ಪಿಪಿಎಫ್)‌ ಮತ್ತು ಸುಕನ್ಯಾ ಸಮೃದ್ಧಿ ಹೊರತುಪಡಿಸಿ ಉಳಿದ ಎಲ್ಲ ಸಣ್ಣ ಉಳಿತಾಯ ಯೋಜನೆಗಳು ಹೂಡಿಕೆದಾರರಿಗೆ ಋಣಾತ್ಮಕ ಆದಾಯವನ್ನು (Negative real return) ನೀಡುತ್ತವೆ. ಏಕೆಂದರೆ ಈ ಯೋಜನೆಗಳ ಬಡ್ಡಿ ದರಗಳು ೭%ಕ್ಕಿಂತಲೂ ಕಡಿಮೆಯಿದ್ದು, ಹೂಡಿಕೆದಾರರಿಗೆ ನಿಜವಾಗಿಯೂ ಸಿಗುವ ಆದಾಯ ನೆಗೆಟಿವ್‌ ಆಗಿದೆ. ಇದರಿಂದ ಹೂಡಿಕೆಯ ಮೌಲ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಹಣದುಬ್ಬರಕ್ಕಿಂತಲೂ ಹೆಚ್ಚಿನ ಬಡ್ಡಿ ಸಿಕ್ಕಿದರೆ ಮಾತ್ರ ಪ್ರಯೋಜನವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ೭%ಗಿಂತ ಮೇಲಿನ ಬಡ್ಡಿ ದರ ಸಿಕ್ಕಿದರೆ ಮಾತ್ರ ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಇಡುವ ದುಡ್ಡು ಬೆಳೆಯುತ್ತದೆ. ಇಲ್ಲದಿದ್ದರೆ ಅದರ ಮೌಲ್ಯ ಸವಕಳಿಯಾಗುತ್ತದೆ.

” ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊದರದಲ್ಲಿ ೦.೯೦% ಏರಿಸಿದ್ದರೂ, ಅದರ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಿಲ್ಲ. ಡಿಸೆಂಬರ್‌ ವೇಳೆಗೆ ಆರ್‌ಬಿಐ ರೆಪೊ ದರದಲ್ಲಿ ಮತ್ತೆ ಒಂದು ಪರ್ಸೆಂಟ್‌ ಏರಿಕೆ ಮಾಡುವ ನಿರೀಕ್ಷೆಯೂ ಇದೆ. ಹೀಗಾಗಿ ಬ್ಯಾಂಕ್‌ಗಳು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಜತೆಗೆ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಸಬೇಕು. ಹಣದುಬ್ಬರವನ್ನು ಎದುರಿಸಲು ಸಹಕರಿಸಬೇಕು. ಏಕೆಂದರೆ ಸಣ್ಣ ಉಳಿತಾಯ ದೇಶದ ಬೆನ್ನೆಲೆಬುʼʼ ಎನ್ನುತ್ತಾರೆ ಆರ್ಥಿಕ ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ.

ಹಣದುಬ್ಬರ ಇದ್ದಾಗ ವಸ್ತುಗಳು ಮತ್ತು ಸೇವೆಗಳ ಬೆಲೆಗಳು ಜಿಗಿಯುತ್ತವೆ. ಎಷ್ಟು ಹಣ ಇದ್ದರೂ ಸಾಲದು ಎಂಬ ಪರಿಸ್ಥಿತಿ ಉಂಟಾಗುತ್ತದೆ. ಕೈಯಲ್ಲಿರುವ ಹಣದ ಬೆಲೆ ಕಡಿಮೆಯಾಗುತ್ತದೆ. ಅಂಥ ಸಂದರ್ಭದಲ್ಲಿ ಸಣ್ಣ ಉಳಿತಾಯಗಾರರಿಗೆ ಹೆಚ್ಚು ಬಡ್ಡಿ ಆದಾಯವಾದರೂ ಸಿಕ್ಕಿದರೆ ಪ್ರಯೋಜನವಾಗುತ್ತದೆ.

ಆರ್‌ಬಿಐ ತನ್ನ ರೆಪೊ ದರವನ್ನು ಏರಿಸಿದಾಗ ಬ್ಯಾಂಕ್‌ಗಳು ತಮ್ಮ ಸಾಲದ ಬಡ್ಡಿ ದರಗಳನ್ನೂ ಏರಿಸುತ್ತವೆ. ಇದರಿಂದ ಸಾಲಗಾರರಿಗೆ ಇಎಂಐ ಹೆಚ್ಚುತ್ತದೆ. ಜತೆಗೆ ಬ್ಯಾಂಕ್‌ಗಳು ಠೇವಣಿಗಳ ಬಡ್ಡಿ ದರಗಳನ್ನೂ ಏರಿಸುತ್ತವೆ. ಆದರೆ ಇತ್ತೀಚಿಗೆ ಬ್ಯಾಂಕ್‌ಗಳು ಆರ್‌ಬಿಐ ರೆಪೊ ದರ ಏರಿಸಿರುವುದರ ಹೊರತಾಗಿಯೂ ಠೇವಣಿ ದರಗಳನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿವೆಯಷ್ಟೇ. ಆದರೆ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿಯೇ ಮುಂದುವರಿಸುವ ಮೂಲಕ ಸಣ್ಣ ಉಳಿತಾಯಗಾರರಿಗೆ ಭಾರಿ ಹಿನ್ನಡೆಯಾಗಿದೆ ಎನ್ನುತ್ತಾರೆ ಹಣಕಾಸು ತಜ್ಞರು.

ಸಣ್ಣ ಉಳಿತಾಯಗಾರರು ಏನು ಮಾಡಬಹುದು?

ಖರ್ಚು ವೆಚ್ಚಗಳನ್ನು ನಿಯಂತ್ರಿಸುವ ಮೂಲಕ, ಆದ್ಯತೆಯ ಅನುಸಾರ ಖರ್ಚುಗಳನ್ನು ಮಾಡಿದಾಗ ಹಣದುಬ್ಬರ ಎದುರಿಸಬಹುದು. ಆದ್ಯತೆಯ ಅನುಸಾರ ಖರ್ಚು ಮಾಡುವುದು ಎಂದರೆ, ತೀರ ಅವಶ್ಯಕ ಖರ್ಚುಗಳನ್ನು ಮಾತ್ರ ಮಾಡುವುದು. ಅನವಶ್ಯಕ ಎನ್ನಿಸಿದ್ದನ್ನು ಮುಂದೂಡುವುದು.

ಎರಡನೆಯ ಉಪಾಯ ಏನೆಂದರೆ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚು ಆದಾಯವನ್ನು ಗಳಿಸಬಹುದು. ಮ್ಯೂಚುವಲ್‌ ಫಂಡ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ( ಎಸ್‌ಐಪಿ) ಮೂಲಕ ಹಣದುಬ್ಬರವನ್ನು ಎದುರಿಸಬಹುದು ಎನ್ನುತ್ತಾರೆ ತಜ್ಞರು.

Exit mobile version