ಬೆಂಗಳೂರು: ರಾಜ್ಯದಲ್ಲಿ ಉದ್ಯಮ ಸಂಬಂಧಿತ ಹೂಡಿಕೆಯ ಪ್ರಸ್ತಾಪಗಳ ಅನುಷ್ಠಾನದಲ್ಲಿ (Invest Karnataka 2022 ) ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದಿನ ಜಿಮ್ ಸಮಾವೇಶಕ್ಕಿಂತಲೂ ಹೆಚ್ಚು ಪ್ರಗತಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಮೊದಲ ಜಿಮ್ ಸಮಾವೇಶ 2000 ನೇ ಇಸವಿಯಲ್ಲಿ ನಡೆಯಿತು. ಈ ಸಮಾವೇಶದಲ್ಲಿ 27,057 ಕೋಟಿ ಒಪ್ಪಂದ ಪ್ರಸ್ತಾಪವಾಯಿತು. ಈ ಪೈಕಿ 12 ಸಾವಿರ ಕೋಟಿ ರೂ. ಹೂಡಿಕೆಯ ಅನುಷ್ಠಾನವಾಗಿದೆ. ಅಂದರೆ ಶೇ.೪೪% ಅನುಷ್ಠಾನವಾಗಿದೆ. 2010 ರಲ್ಲಿ 3,94,768 ಕೋಟಿ ಒಡಂಬಡಿಕೆಯಾಗಿದೆ. 14% ಮಾತ್ರ ಅನುಷ್ಠಾನವಾಗಿತ್ತು. 2012 ರಲ್ಲಿ 6,77,168 ಕೋಟಿ ಒಡಂಬಡಿಕೆಯಾಗಿತ್ತು. ಕೇವಲ 8% ಮಾತ್ರ ಕಾರ್ಯಗತವಾಗಿತ್ತು.
2016 ರಲ್ಲಿ 3 ಲಕ್ಷದ 5 ಸಾವಿರ ಕೋಟಿ ಒಡಂಬಡಿಕೆಯಾಗಿದೆ. ಶೇಕಡಾ 15% ಮಾತ್ರ ಕಾರ್ಯರೂಪಕ್ಕೆ ಬಂದಿದೆ. ಈ ರೀತಿ ಪುನಾರವರ್ತನೆಯಾಗಬಾರದು. ಈ ಬಾರಿ 9.08 ಲಕ್ಷ ಕೋಟಿ ಒಡಂಬಡಿಕೆಯಾಗಿದೆ. ಅದರಲ್ಲಿ ಈಗಾಗಲೇ 2.83 ಲಕ್ಷ ಕೋಟಿ ಹೂಡಿಕೆಯ ಒಡಂಬಡಿಕೆಗೆ ಅನುಮೋದನೆ ಸಿಕ್ಕಿದೆ. ಅಂದರೆ ಶೇ.19% ಗೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.