Site icon Vistara News

ITR Filing: ಐಟಿ ರಿಟರ್ನ್ಸ್‌ ಗಡುವು ವಿಸ್ತರಣೆ ಇಲ್ಲ, ಕೊನೇ ಕ್ಷಣದಲ್ಲಿ ಪೋರ್ಟಲ್‌ ಕ್ರ್ಯಾಶ್;‌ ಇನ್ಫೋಸಿಸ್‌ ವಿರುದ್ಧ ಆಕ್ರೋಶ!

ITR Filing

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್‌ (ITR Filing) ಸಲ್ಲಿಸದವರು ಕುತೂಹಲದಿಂದ ಕಾಯುತ್ತಿದ್ದ ದಿನವು ಮುಕ್ತಾಯಗೊಂಡಿದ್ದು, ಐಟಿಆರ್‌ ಸಲ್ಲಿಕೆಯ ಗಡುವನ್ನು ವಿಸ್ತರಣೆ ಮಾಡದ ಹಿನ್ನೆಲೆಯಲ್ಲಿ ಅವರಿಗೆ ನಿರಾಸೆಯಾಗಿದೆ. ಬುಧವಾರ (ಜುಲೈ 31) ಸಂಜೆಯಾದರೂ ಕೇಂದ್ರ ಹಣಕಾಸು ಸಚಿವಾಲಯವು ಐಟಿಆರ್‌ ಸಲ್ಲಿಕೆಯ ಗಡುವು (ITR Filing Deadline) ವಿಸ್ತರಣೆ ಮಾಡದ ಕಾರಣ ಜನರಿಗೆ ನಿರಾಸೆಯಾಯಿತು. ಇನ್ನು, ಐಟಿಆರ್‌ಗೆ ಬುಧವಾರವೇ ಕೊನೇ ದಿನವಾದ ಕಾರಣ ಹೆಚ್ಚಿನ ಜನರು ಐಟಿಆರ್‌ ಸಲ್ಲಿಕೆಗೆ (Income Tax Returns) ಮುಂದಾಗಿದ್ದು, ವೆಬ್‌ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಜನರು, ಲೆಕ್ಕಪರಿಶೋಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋರ್ಟಲ್‌ನಲ್ಲಿ ಏನು ದೋಷ?

ಸಿಎ ನಿಖಿತಾ ಕೋಲ್ತೆ-ಗೋರೆ ಎಂಬುವರು ಐಟಿಆರ್‌ ಸಲ್ಲಿಕೆಯ ವೆಬ್‌ ಪೋರ್ಟಲ್‌ನಲ್ಲಿ ಸಮಸ್ಯೆಯಾಗಿದ್ದನ್ನು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಐಟಿಆರ್‌ ಸಲ್ಲಿಕೆಯ ಕೊನೆಯ ದಿನದಂದು ಪೋರ್ಟಲ್‌ನಲ್ಲಿ ಲೋಡಿಂಗ್‌ ಸಮಸ್ಯೆಯಾಗುತ್ತಿದೆ. ವೆಬ್‌ ಪೋರ್ಟಲ್‌ನಲ್ಲಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಮುಂದಿನ ವರ್ಷವಾದರೂ ತೆರಿಗೆ ಪಾವತಿದಾರರು ಸುಲಭವಾಗಿ ಐಟಿಆರ್‌ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಬೇಕು” ಎಂದಿದ್ದಾರೆ. ಇವರು ವೆಬ್‌ ಪೋರ್ಟಲ್‌ ಅಭಿವೃದ್ಧಿ ಪಡಿಸಿರುವ ಇನ್ಫೋಸಿಸ್‌ಅನ್ನೂ ಟ್ಯಾಗ್‌ ಮಾಡಿದ್ದಾರೆ.

ಇನ್ಫೋಸಿಸ್‌ ವಿರುದ್ಧ ಆಕ್ರೋಶ

“ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಪ್ರತಿಬಾರಿ ಪ್ರಯತ್ನಿಸಿದಾಗಲೂ ‘Something Went Wrong’ ಎಂಬ ಪ್ರತಿಕ್ರಿಯೆ ಬರುತ್ತಿದೆ. ಐಟಿಆರ್‌ ಸಲ್ಲಿಕೆಯ ಪೋರ್ಟಲ್‌ಗಾಗಿ ಇನ್ಫೋಸಿಸ್‌ಗೆ 4,200 ಕೋಟಿ ರೂ. ನೀಡುತ್ತಿರುವುದು ನಿಜವಾಗಿಯೂ ವೇಸ್ಟ್”‌ ಎಂದು ಸಿಎ ಅನಂತ್‌ ಸೆಖ್ಸಾರಿಯಾ ತಿಳಿಸಿದ್ದಾರೆ.

6.5 ಕೋಟಿ ಐಟಿಆರ್‌ ಸಲ್ಲಿಕೆ

ಜುಲೈ 31ರವರೆಗೆ 6.5 ಕೋಟಿ ಐಟಿಆರ್‌ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. 2023-24ನೇ ಸಾಲಿನಲ್ಲಿ ಜುಲೈ 30ರವರೆಗೆ ಸಲ್ಲಿಕೆಯಾದ ಐಟಿಆರ್‌ಗಳಿಗಿಂತ ಶೇ.7.5ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಎಷ್ಟು ದಂಡ?

ಜುಲೈ 31ರ ಗಡುವಿನ ನಂತರ ಐಟಿಆರ್ ಸಲ್ಲಿಸುವವರು ದಂಡ ಪಾವತಿಸಬೇಕಾಗುತ್ತದೆ. ನಿವ್ವಳ ತೆರಿಗೆಯ ಆದಾಯವು 5 ಲಕ್ಷ ರೂ. ವರೆಗೆ ಇದ್ದರೆ ತಡವಾಗಿ ತೆರಿಗೆ ರಿಟರ್ನ್‌ಗೆ ಗರಿಷ್ಠ ದಂಡ 1,000 ರೂ ಆಗಿದೆ. 5 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಾದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

Exit mobile version