ಸ್ಯಾನ್ ಫ್ರಾನ್ಸಿಸ್ಕೊ: ಇ-ಕಾಮರ್ಸ್ ದಿಗ್ಗಜ ಅಮೆಜಾನ್‌ನಲ್ಲಿ 2023ರಲ್ಲೂ (Amazon layoff) ಉದ್ಯೋಗ ಕಡಿತ ಮುಂದುವರಿಯಲಿದೆ ಎಂದು ಕಂಪನಿಯ ಸಿಇಒ ಆಂಡಿ ಜಾಸ್ಸಿ ತಿಳಿಸಿದ್ದಾರೆ.
ಅಮೆಜಾನ್ ಈ ವಾರ ತನ್ನ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದೆ. ಡಿವೈಸ್ ಮತ್ತು ಪುಸ್ತಕ ಮಾರಾಟ ವಿಭಾಗದಲ್ಲಿ ಸಿಬ್ಬಂದಿಯನ್ನು ವಜಾಗೊಳಿಸುತ್ತಿರುವ ಬಗ್ಗೆ ಬುಧವಾರ ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ನಾನು ಈ ಹುದ್ದೆಯಲ್ಲಿ ಈಗ ಮತ್ತು ಇನ್ನು ಸುಮಾರು ಒಂದೂವರೆ ವರ್ಷ ಇರಲಿದ್ದು, ಇದು ಅತ್ಯಂತ ಕಠಿಣ ಸಂದರ್ಭವಾಗಿದೆ. ಅನ್ಯ ಮಾರ್ಗ ಇಲ್ಲವಾಗಿದೆ ಎಂದು ಸಾಮೂಹಿಕ ಉದ್ಯೋಗ ಕಡಿತದ ಬಗ್ಗೆ ಅವರು ವಿವರಿಸಿದ್ದಾರೆ.
ಅಮೆಜಾನ್ ಕಳೆದ ಕೆಲ ತಿಂಗಳುಗಳಿಂದ ವೆಚ್ಚ ಕಡಿತದ ಬಗ್ಗೆ ಪ್ಲಾನ್ ಮಾಡುತ್ತಿದೆ. ಹೆಚ್ಚು ಹಣ ಉಳಿತಾಯ ಮಾಡುವುದು ಹೇಗೆ ಎಂದು ಪರಿಶೀಲಿಸುತ್ತಿದೆ. ಎಷ್ಟು ಉದ್ಯೋಗಗಳ ಮೇಲೆ ಪರಿಣಾಮ ಬೀರಬಹುದು ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ ಎಂದು ಸಿಇಒ ಜಾಸ್ಸಿ ತಿಳಿಸಿದ್ದಾರೆ. ಜಾಗತಿಕವಾಗಿ ಕಂಪನಿ 15 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.