Site icon Vistara News

Karnataka budget 2023 : ರಾಜ್ಯದ ತಲಾ ಆದಾಯ ಮೊದಲ ಬಾರಿಗೆ 3 ಲಕ್ಷ ರೂ.ಗೆ ಏರಿಕೆ

cash

ಬೆಂಗಳೂರು: 2022-23 ನೇ ಸಾಲಿನಲ್ಲಿ ಕರ್ನಾಟಕದ ತಲಾ ಆದಾಯವು 3,01,673 ರೂಪಾಯಿಗಳಷ್ಟಿದ್ದು ಇದು ರಾಷ್ಟ್ರೀಯ ತಲಾ ಆದಾಯ ರೂ 1,70,620 ಕ್ಕಿಂತಲೂ ಶೇ. 77 ರಷ್ಟು ಹೆಚ್ಚಳವಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. (Karnataka budget 2023) ರಾಜ್ಯದ ಒಟ್ಟು ಆದಾಯವನ್ನು ಜನಸಂಖ್ಯೆಯಿಂದ ಭಾಗಿಸಿದಾಗ ತಲಾ ಆದಾಯ ಸಿಗುತ್ತದೆ. 2021-22ನೇ ಸಾಲಿನಲ್ಲಿ ತಲಾ ಆದಾಯವು 2,65,623 ರೂ. ಇತ್ತು. ಈ ಸಲ ಶೇ.13.6ರ ಬೆಳವಣಿಗೆ ದಾಖಲಿಸಿದೆ.

2021-22ನೇ ಸಾಲಿನಲ್ಲಿ ಕೃಷಿ ವಲಯದ ಬೆಳವಣಿಗೆ ದರ ಶೇ.8.7ರಷ್ಟಿತ್ತು. 2022-23ನೇ ಸಾಲಿಗೆ ಶೇ.5.5 ಬೆಳವಣಿಗೆ ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ. ಕೋವಿಡ್‌-19ರ ಪರಿಣಾಮ, ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಕಾರ್ಮಿಕರ ವಲಸೆ ಮತ್ತು ಕೃಷಿ ಪದಾರ್ಥಗಳ ಮೌಲ್ಯವರ್ಧನೆಯ ಸರಪಳಿಯ ಬಲವರ್ಧನೆಯಿಂದಾಗಿ ಕೃಷಿ ವಲಯದ ಬೆಳವಣಿಗೆ ದರ 2020-21ನೇ ಸಾಲಿನಲ್ಲಿ ಶೇ.15.2ಕ್ಕೆ ಏರಿತ್ತು. ಮೀನುಗಾರಿಕೆ ವಲಯದ ಶೇ.16.6 ಹಾಗೂ ಜಾನುವಾರು ವಲಯದ ಶೇ.10ರ ಬೆಳವಣಿಗೆಯು ಪ್ರಸಕ್ತ ವರ್ಷದ ಕೃಷಿ ವಲಯದ ಬೆಳವಣಿಗೆಗೆ ಸಹಕರಿಸಿದೆ.

ಕೈಗಾರಿಕಾ ವಲಯದ ಬೆಳವಣಿಗೆ ದರ 2021-22ರಲ್ಲಿ ಶೇ.10.3 ರಷ್ಟಿದ್ದು, 2022-23ನೇ ಸಾಲಿನಲ್ಲಿ ಶೇ.5.1 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದು 2020-21ನೇ ಸಾಲಿನಲ್ಲಿ ಶೇ.(-)3.4 ರಷ್ಟಿತ್ತು. ಇದು ಕೋವಿಡ್‌ ನಂತರದ ಕೈಗಾರಿಕೆಗಳ ಚೇತರಿಕೆಯನ್ನು ಬಿಂಬಿಸುತ್ತದೆ. ನಿರ್ಮಾಣ ವಲಯದ ಶೇ.6.6 ಹಾಗೂ ತಯಾರಿಕೆ ವಲಯದ ಶೇ.4.9ರ ಬೆಳವಣಿಗೆ ದರವು ಕೈಗಾರಿಕೆ ವಲಯದ ಬೆಳವಣಿಗೆಗೆ ಪ್ರಮುಖ ಕಾರಣವಾಗಿರುತ್ತದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

Exit mobile version