ನವ ದೆಹಲಿ: ಭಾರತದ ಹಿರಿಯ ಬಿಲಿಯನೇರ್ ಮತ್ತು ಮಹೀಂದ್ರಾ & ಮಹೀಂದ್ರಾದ ಗೌರವಾಧ್ಯಕ್ಷ ಕೇಶುಬ್ ಮಹೀಂದ್ರಾ (Keshub Mahindra) ಅವರು ಬುಧವಾರ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು. ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಸಂಪತ್ತು 1.2 ಶತಕೋಟಿ ಡಾಲರ್ ( 9,840 ಕೋಟಿ ರೂ.) 2012ರಲ್ಲಿ ಮಹೀಂದ್ರಾ & ಮಹೀಂದ್ರಾದ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾದ ಬಳಿಕ ಸಮೂಹದ ಸಾರಥ್ಯವನ್ನು ಅಳಿಯ ಆನಂದ್ ಮಹೀಂದ್ರಾ ಅವರಿಗೆ ವಹಿಸಿದ್ದರು.
ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿ 48 ವರ್ಷಗಳ ಕಾಲ ಕಂಪನಿಯನ್ನು ಮುನ್ನಡೆಸಿದ್ದರು. ಮೂಲತಃ ಆಟೊಮೊಬೈಲ್ ಕಂಪನಿಯಾಗಿದ್ದ ಮಹೀಂದ್ರಾ ಗ್ರೂಪ್ ಅನ್ನು ಐಟಿ, ರಿಯಲ್ ಎಸ್ಟೇಟ್, ಹಣಕಾಸು ಸೇವೆ ಮತ್ತು ಆತಿಥ್ಯೋದ್ಯಮ ವಲಯದಲ್ಲಿ ವಿಸ್ತರಿಸಿದರು. ಜಾಗತಿಕ ಮಟ್ಟದ ಕಂಪನಿಗಳಾದ ವಿಲ್ಲೆಸ್ ಕಾರ್ಪೊರೇಷನ್, ಮಿತ್ಸುಬಿಶಿ, ಇಂಟರ್‌ನ್ಯಾಶನಲ್ ಹಾರ್ವೆಸ್ಟರ್, ಯುನೈಟೆಡ್ ಟೆಕ್ನಾಲಜೀಸ್, ಬ್ರಿಟಿಷ್ ಟೆಲಿಕಾಂ ಮತ್ತಿತರ ಕಂಪನಿಗಳ ಜತೆಗೆ ಬಿಸಿನೆಸ್ ಒಪ್ಪಂದಗಳನ್ನು ಏರ್ಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಕೈಗಾರಿಕಾ ಜಗತ್ತು ಹಿರಿಯ ಚೇತನವನ್ನು ಇಂದು ಕಳೆದುಕೊಂಡಿದೆ. ಕೇಶುಬ್ ಮಹೀಂದ್ರಾ ಅವರಿಗೆ ಸರಿಸಾಟಿಯಾಗಬಲ್ಲರು ಮತ್ತೊಬರಿಲ್ಲ. ಇಂದಿನ ಪೀಳಿಗೆಯ ಉದ್ಯಮಿಗಳಿಗೆ ಅವರು ಮಾದರಿಯಾಗಿದ್ದರು. ವಿನಯವಂತಿಕೆ ಅವರ ಮುಖ್ಯ ಲಕ್ಷಣವಾಗಿತ್ತು. ಬಿಸಿನೆಸ್, ಎಕಾನಮಿ, ಸಾಮಾಜಿಕ ವಿಷಯಗಳಲ್ಲಿ ಅವರ ಸಾಧನೆ ಅಪರಿಮಿತ ಎಂದು ಪವನ್ ಗೋಯೆಂಕಾ ತಿಳಿಸಿದ್ದಾರೆ.
ಶಿಮ್ಲಾದಲ್ಲಿ 1923ರ ಅಕ್ಟೋಬರ್ 9ರಂದು ಜನಿಸಿದ ಕೇಶುಬ್ ಮಹೀಂದ್ರಾ ಅವರು ಅಮೆರಿಕದ ವಾರ್ಟನ್ ವಿವಿಯಲ್ಲಿ ಪದವಿ ಗಳಿಸಿದ್ದರು. 1947ರಲ್ಲಿ ಮಹೀಂದ್ರಾ & ಮಹೀಂದ್ರಾ ಗ್ರೂಪ್ ಸೇರಿದ್ದರು. 1963ರಲ್ಲಿ ಅಧ್ಯಕ್ಷರಾದರು. ಸೇಲ್, ಟಾಟಾ ಸ್ಟೀಲ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್, ಐಎಫ್‌ಸಿ, ಐಸಿಐಸಿಐ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದರು.