ಬೆಂಗಳೂರು: “ಹೂಡಿಕೆ ಸರಳ, ಆದರೆ ಸುಲಭವಲ್ಲʼ ಎನ್ನುತ್ತಾರೆ ಅಮೆರಿಕದ ವಿಶ್ವವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್!
ಅತ್ಯಂತ ಸ್ಮಾರ್ಟ್ ನಿರ್ಧಾರಗಳ ಮೂಲಕ ಷೇರು ಪೇಟೆಯಲ್ಲಿ ಹೂಡಿಕೆ ಮಾಡುತ್ತಾ 104 ಶತಕೋಟಿ ಡಾಲರ್ (ಅಂದಾಜು 8 ಲಕ್ಷ ಕೋಟಿ ರೂ.) ಸಂಪತ್ತು ಗಳಿಸಿದವರು ಬಫೆಟ್. ಅವರ ಮಾತಿನ ಮರ್ಮವನ್ನು ಎಲ್‌ಐಸಿ ಐಪಿಒ ಹಂಗಾಮದ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳಬಹುದು.
ಎಲ್‌ಐಸಿ ಐಪಿಒದಲ್ಲಿ ಲಕ್ಷಾಂತರ ಪಾಲಿಸಿದಾರರು ಹಾಗೂ ರಿಟೇಲ್ ಹೂಡಿಕೆದಾರರು ಭಾಗವಹಿಸಿದ್ದಾರೆ. ಒಟ್ಟಾರೆ ಮೂರು ಪಟ್ಟು ಹೆಚ್ಚಿನ ಬಿಡ್ ಸಲ್ಲಿಕೆಯೂ ಆಗಿತ್ತು. ಅದರಲ್ಲೂ ಪಾಲಿಸಿದಾರರು ಎಲ್ಲರಿಗಿಂತ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೆ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಐಪಿಒ ದರಕ್ಕಿಂತಲೂ (949ರೂ.) ಕಡಿಮೆ ದರದಲ್ಲಿ (872ರೂ.) ವಹಿವಾಟು ಆರಂಭವಾಗಿ, ದಿನದ ಕೊನೆಗೆ ೮೭೫ ರೂ.ಗೆ ವಹಿವಾಟು ಮುಕ್ತಾಯಗೊಳಿಸಿತು. ಅಂದರೆ ದಿನದ ಕೊನೆಗೂ ಐಪಿಒ ದರಕ್ಕಿಂತ 74 ರೂ. ಕಡಿಮೆಯೇ ಇತ್ತು. ಹೀಗಾಗಿ ಅನೇಕ ಮಂದಿಗೆ ಎಲ್ ಐಸಿ ಷೇರು ಸೆಕೆಂಡರಿ ಮಾರುಕಟ್ಟೆಗೆ ಪ್ರವೇಶಿಸಿದ ದಿನ ನಷ್ಟವಾಯಿತು. ಆದ್ದರಿಂದ ಮೊದಲ ದಿನವೇ ಲಾಭ ಮಾಡಿಕೊಳ್ಳಬೇಕು. ಎಲ್ ಐಸಿ ಷೇರು ದರ ಕೂಡಲೇ ಜಿಗಿದು ತಕ್ಷವೇ ಲಾಭ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದವರಿಗೆ ನಿರಾಸೆ ಉಂಟಾಯಿತು.
ಮತ್ತೊಂದು ಕಡೆ ಷೇರುಪೇಟೆಯ ತಜ್ಞರು, “ನಿರಾಸೆಪಡಬೇಕಿಲ್ಲ, ಎಲ್ ಐಸಿ ಸುಭದ್ರ ಅಡಿಪಾಯ ಇರುವ, 5ನೇ ಅತಿ ದೊಡ್ಡ ಷೇರು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿ. ಆದ್ದರಿಂದ ಒಳ್ಳೆಯ ದಿನಗಳು ಬರಲಿದೆ, ಷೇರು ದರ ಭವಿಷ್ಯದಲ್ಲಿ ವೃದ್ಧಿಸಿ ಲಾಭದಾಯಕವಾಗಲಿದೆ ʼʼ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಹೀಗಿದ್ದರೂ, ಪಾಲಿಸಿದಾರರು ಮತ್ತು ರಿಟೇಲ್ ಹೂಡಿಕೆದಾರರಿಗೆ ಅನುಕ್ರಮವಾಗಿ 60 ರೂ. ಹಾಗೂ 45 ರೂ.ಗಳ ಡಿಸ್ಕೌಂಟ್ ಇತ್ತು. ಜತೆಗೆ ಮಧ್ಯಂತರ ಅವಧಿಯಲ್ಲಿ ಒಂದು ಹಂತದಲ್ಲಿ ಎಲ್ ಐಸಿ ಷೇರು 918ರೂ. ತನಕವೂ ದರ ಏರಿಸಿಕೊಂಡಿತ್ತು. ಇದರ ಪ್ರಯೋಜನ ಪಡೆದು ಷೇರನ್ನು ಮಾರಾಟ ಮಾಡಿ ಲಾಭ ಮಾಡಿಕೊಂಡವರೂ ಇದ್ದರು!
ಎಲ್‌ಐಸಿ ಐಪಿಒದಲ್ಲಿ ಸ್ಥಳೀಯರು ಉತ್ಸಾಹದಿಂದ ಭಾರಿ ಸ್ಪಂದಿಸಿದ್ದರೂ, ವಿದೇಶಿ ಹೂಡಿಕೆದಾರರು ಅಂಥ ಆಸಕ್ತಿಯನ್ನು ವ್ಯಕ್ತಪಡಿಸಿರಲಿಲ್ಲ. ಹೀಗಿದ್ದರೂ, ಮಾರುಕಟ್ಟೆಯ ಸದ್ಯದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಎಲ್‌ಐಸಿ ಐಪಿಒ ಇಡೀ ಮಾರುಕಟ್ಟೆಗೆ ಹೊಸ ಚೈತನ್ಯ ತುಂಬಿದೆ ಎಂದರೆ ಅತಿಶಯವಲ್ಲ.
10 ಲಕ್ಷಕ್ಕೂ ಹೆಚ್ಚು ಹೊಸ ಹೂಡಿಕೆದಾರರು
ಎಲ್‌ಐಸಿ ಐಪಿಒದಲ್ಲಿ ಎಲ್ಲ ಕೆಟಗರಿಯಿಂದ ಒಟ್ಟು 73 ಲಕ್ಷ ಹೂಡಿಕೆದಾರರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 10.85 ಲಕ್ಷ ಮಂದಿ ಹೊಸ ಹೂಡಿಕೆದಾರರು ಇದ್ದರು. ಈ ಪೈಕಿ 7 ಲಕ್ಷ ಮಂದಿಗೆ ಷೇರುಗಳು ಮಂಜೂರಾಗಿದೆ. ಆದ್ದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು, ಆದಾಯ ಗಳಿಸಬೇಕು, ಸಂಪತ್ತನ್ನು ವೃದ್ಧಿಸಬೇಕು ಎಂಬ ಪ್ರೇರಣೆಗೆ ಎಲ್‌ಐಸಿ ಐಪಿಒ ಪ್ರೇರಣೆ ನೀಡಿರುವುದು ಸ್ವಾಗತಾರ್ಹ. ಆದರೆ ಹೂಡಿಕೆಯ ಜತೆಗೆ ಅದಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಪಡೆದುಕೊಳ್ಳುವುದು ಮುಖ್ಯ ಎಂಬ ಪಾಠವನ್ನು ಎಲ್‌ಐಸಿ ಐಪಿಒ ಕಲಿಸಿಕೊಟ್ಟಿದೆ.
ಅನಿರೀಕ್ಷಿತ ಫಲಿತಾಂಶ ಸಹಜ
ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ 20,500 ಕೋಟಿ ರೂ. ಮೆಗಾ ಗಾತ್ರದ ಐಪಿಒ ನಡೆದಿರಲಿಲ್ಲ. ಎಲ್ ಐಸಿಯಂತೂ ಮನೆಮಾತಾಗಿದೆ. ಆದ್ದರಿಂದ ಪಾಲಿಸಿದಾರರು, ರಿಟೇಲ್ ಹೂಡಿಕೆದಾರರು ಹಾಗೂ ಸ್ವತಃ ಎಲ್ ಐಸಿಯ ಉದ್ಯೋಗಿಗಳು ಅತ್ಯುತ್ಸಾಹದಿಂದ ಐಪಿಒದಲ್ಲಿ ಭಾಗವಹಿಸಿದ್ದರು. ಎಲ್ಲವೂ ಅಂದುಕೊಂಡಂತೆ ಇರುತ್ತಿದ್ದರೆ ಈಗ ಎಲ್‌ಐಸಿ ಷೇರು ದರ ಲಾಭದಲ್ಲಿ ಇರಬೇಕಿತ್ತು. ಆದರೆ ಷೇರು ಪೇಟೆಯಲ್ಲಿ ಅನಿರೀಕ್ಷಿತ ಫಲಿತಾಂಶಗಳನ್ನು ನಿರೀಕ್ಷಿಸಬಹುದು! ಅದಕ್ಕೆ ಸಜ್ಜಾಗಿರಬೇಕು. ಎಷ್ಟೇ ದೊಡ್ಡ ಮಾರುಕಟ್ಟೆ ಮೌಲ್ಯ, ಗ್ರಾಹಕರ ವಿಶ್ವಾಸ, ದೊಡ್ಡ ಜಾಲ ಎಲ್ಲವೂ ಇರಬಹುದು. ಆದರೆ ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯ. ಆದರೆ ಒಳ್ಳೆಯ ಬುನಾದಿ, ವ್ಯವಹಾರ ನಡೆಸುವ ಕಂಪನಿಗಳ ಷೇರು ಖರೀದಿಯಿಂದ ಲಾಭದಾಯಕವಾಗುತ್ತದೆ ಎಂಬುದೂ ನಿಜ! ಆದ್ದರಿಂದ ನಿರಾಸೆ ಅನಗತ್ಯ.
ಹೂಡಿಕೆದಾರರಿಗೆ ಆತುರ ಸಲ್ಲದು
ವಾಸ್ತವವಾಗಿ ಕೆಲ ಷೇರು ದಲ್ಲಾಳಿಗಳು ತಮ್ಮ ಗ್ರಾಹಕರಿಗೆ ಎಲ್‌ಐಸಿ ಐಪಿಒ ಬದಲಿಗೆ ಬಿಎಸ್‌ಇ, ಎನ್‌ಎಸ್‌ಇನಲ್ಲಿ ನೋಂದಣಿಯಾದ ಬಳಿಕ ದರವನ್ನು ನೀಡಿ ಖರೀದಿಸುವಂತೆ ಸಲಹೆ ನೀಡಿದ್ದರು. ಆದರೆ ಲಕ್ಷಾಂತರ ಮಂದಿ ಐಪಿಒ ಮೇಲೆ ಭರವಸೆ ಇಟ್ಟಿದ್ದರು. ಜತೆಗೆ ಹೂಡಿಕೆ ಮಾಡುವುದು ಸರಳ. ಈಗಂತೂ ಸ್ಮಾರ್ಟ್ ಫೋನ್, ಇಂಟರ್ ನೆಟ್ ಇದ್ದರೆ ಬೆರಳ ತುದಿಯಲ್ಲೇ ಹೂಡಿಕೆ ಮಾಡಬಹುದು. ಖಾತೆಯಲ್ಲಿ ಹಣ ಇದ್ದರೆ ಸಾಕು. ಈಗಲೂ ನಿರಾಸೆ ಬೇಡ. ಎಲ್‌ಐಸಿ ಷೇರುಗಳು ಕಾಲಾಂತರದಲ್ಲಿ ಉತ್ತಮ ಪ್ರತಿಫಲ ನೀಡಬಹುದು. ಆಗ ಷೇರುಗಳನ್ನು ಮಾರಾಟ ಮಾಡಬಹುದು. ಆದರೆ ಮನುಷ್ಯರಿಗೆ ಆದಷ್ಟು ಬೇಗ ಲಾಭ ಮಾಡಬೇಕು, ಅನುಭವಿಸಬೇಕು ಎಂಬ ಆತುರ ಸಹಜ. ಅದು ಕೆಲವೊಮ್ಮೆ ಸವಾಲಾಗುತ್ತದೆ. ಷೇರು ವ್ಯವಹಾರದಲ್ಲಿ ತಾಳ್ಮೆ, ಚತುರ ನಡೆ, ದೀರ್ಘಕಾಲೀನ ಶಿಸ್ತು ಅವಶ್ಯಕ. ಈ ಮಹತ್ವದ ಪಾಠವನ್ನು ಎಲ್‌ಐಸಿ ಐಪಿಒ ಲಕ್ಷಾಂತರ ಹೊಸ ಹೂಡಿಕೆದಾರರಿಗೆ ಕಲಿಸಿಕೊಟ್ಟಿದೆ!
ಹೂಡಿಕೆ ಅಭ್ಯಾಸವಾದರೆ ಕಷ್ಟವೇನಲ್ಲ
ಷೇರು, ಮ್ಯೂಚುವಲ್ ಫಂಡ್, ಬಾಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದು ಆರಂಭಿಕ ಹಂತದಲ್ಲಿ ಆಸೆ-ನಿರಾಸೆ ತಂದರೂ, ನಿಯಮಿತವಾಗಿ ಹೂಡಿಕೆಯ ಶಿಸ್ತನ್ನು ರೂಢಿಸಿದರೆ ಬಳಿಕ ಕಷ್ಟವಾಗುವುದಿಲ್ಲ. ಸಹಜ ಸ್ವಭಾವವಾಗಿ ಒಲಿಯುತ್ತದೆ. ಜೀವನದ ಭಾಗವಾಗುತ್ತದೆ. ಆದರೆ ಗುರಿ ಸ್ಪಷ್ಟವಾಗಿರಬೇಕು. ಸ್ವಂತ ಮನೆ, ಆಸ್ತಿ ಖರೀದಿ, ಮಕ್ಕಳ ಉನ್ನತ ಶಿಕ್ಷಣ, ವಿವಾಹ, ವಿದೇಶ ಪ್ರವಾಸ, ಾರೋಗ್ಯ ವೆಚ್ಚ, ನಿವೃತ್ತಿಯ ನಂತರದ ಬದುಕಿನ ಆರ್ಥಿಕ ಭದ್ರತೆ ಇತ್ಯಾದಿ ಪ್ರಮುಖ ಗುರಿಗಳಿಗೆ ಹೂಡಿಕೆ ಅಗತ್ಯ. ಹೂಡಿಕೆ ಇಲ್ಲದೆ ಇವುಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಕಷ್ಟ.
ಹೂಡಿಕೆ ಕುರಿತ ಮಾಹಿತಿ ಸುಲಭ ಲಭ್ಯ
ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳುವುದು ಈಗ ಸುಲಭ. ಇಂಟರ್‌ನೆಟ್‌ನಲ್ಲಿ ಹುಡುಕಾಡಿದರೆ ಸಾವಿರಾರು ಬ್ಲಾಗ್ ಗಳು, ವೆಬ್ ಸೈಟ್‌ಗಳು, ಯೂಟ್ಯೂಬ್ ನಲ್ಲಿ ಅಸಂಖ್ಯಾತ ವಿಡಿಯೊಗಳು ಹೂಡಿಕೆ ಬಗ್ಗೆ ಮಾಹಿತಿ ನೀಡುತ್ತವೆ. ಪತ್ರಿಕೆ, ಟಿವಿ ವಾಹಿನಿಗಳೂ ವಿವರ ಒದಗಿಸುತ್ತವೆ. ಎಲ್ ಐಸಿ ಐಪಿಒ ಬಗ್ಗೆಯೂ ಈ ರೀತಿಯಲ್ಲಿ ಜನರಿಗೆ ಮಾಧ್ಯಮಗಳ ಮೂಲಕ ಮಾಹಿತಿಗಳು ಲಭಿಸಿತ್ತು. ಆದರೆ ಎಲ್ಲರಿಗೂ, ಅಥವಾ ಯಾರೊಬ್ಬರಿಗೂ ರಾತ್ರೋರಾತ್ರಿ ಆರ್ಥಿಕ ತಜ್ಞರಾಗಲು ಸಾಧ್ಯವಾಗುವುದಿಲ್ಲ. ವರ್ಷಗಟ್ಟಲೆ ಅಧ್ಯಯನ, ಅವಲೋಕನಗಳಿಂದ, ಚಿಂತನ-ಮಂಥನ ಹಾಗೂ ಪ್ರಾಯೋಗಿಕ ಹೂಡಿಕೆಯಿಂದ ಮಾತ್ರ ಅರಿವು ಸಾಧ್ಯ. ಇದು ಎಲ್‌ಐಸಿ ಐಪಿಒ ಕಲಿಸಿದ ಮತ್ತೊಂದು ಅಮೂಲ್ಯವಾದ ಪಾಠ.
ಇದನ್ನೂ ಓದಿ: ಎಲ್‌ಐಸಿ ಷೇರು 872 ರೂ.ಗೆ ವಹಿವಾಟು ಶುರು