Site icon Vistara News

LIC IPOಗೆ ಭರ್ಜರಿ ರೆಸ್ಪಾನ್ಸ್‌, ಎರಡೇ ದಿನದಲ್ಲಿ ಶೇ.95 ಷೇರುಗಳಿಗೆ ಬಿಡ್‌ ಸಲ್ಲಿಕೆ

ಮುಂಬಯಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಷೇರು ಬಿಡುಗಡೆಯ ಎರಡನೇ ದಿನವಾದ ಗುರುವಾರ ರಿಟೇಲ್‌ ಹೂಡಿಕೆದಾರರು ಮತ್ತು ಪಾಲಿಸಿದಾರರಿಂದ ಗಣನೀಯ ಬೇಡಿಕೆ ಉಂಟಾಗಿದ್ದು, ಶೇ.95ರಷ್ಟು ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿದೆ. ಮುಖ್ಯವಾಗಿ ಎಲ್‌ಐಸಿ ಪಾಲಿಸಿದಾರರು ಹಾಗೂ ಉದ್ಯೋಗಿಗಳಿಂದ ಉತ್ತಮ ಸ್ಪಂದನೆ ಲಭಿಸಿದೆ. ಪಾಲಿಸಿದಾರರು 2.89 ಪಟ್ಟು ಹೆಚ್ಚಿನ ಬಿಡ್‌ ಸಲ್ಲಿಸಿದ್ದರೆ, ಸಿಬ್ಬಂದಿ 2.05 ಪಟ್ಟು ಬಿಡ್‌ ಸಲ್ಲಿಸಿದ್ದಾರೆ. ಅಂದರೆ ನಿಗದಿಯಾಗಿರುವ ಕೋಟಾಕ್ಕಿಂತ ಹೆಚ್ಚಿನ ಬೇಡಿಕೆ ಪಾಲಿಸಿದಾರರು ಮತ್ತು ಸಿಬ್ಬಂದಿಯಿಂದ ಲಭಿಸಿದೆ. ಒಟ್ಟಾರೆ ಬಿಡ್‌ 0.97 ಪಟ್ಟು ಲಭಿಸಿದೆ. ಸಾಮಾನ್ಯವಾಗಿ ಐಪಿಒ ನಡೆಸುವ ಕಂಪನಿಯ ಉದ್ಯೋಗಿಗಳು ಅದರಲ್ಲಿ ಉತ್ಸಾಹದಿಂದ ಭಾಗವಹಿಸುವುದು ಕಡಿಮೆ. ಆದರೆ ಎಲ್‌ಐಸಿ ಸಿಬ್ಬಂದಿ ವಿಶ್ವಾಸದಿಂದ ಭಾಗವಹಿಸಿದ್ದಾರೆ ಎಂದು ಷೇರು ಪೇಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್‌ ಐಸಿಯ ಶೇ.3.5 ಷೇರು ಮಾರಾಟ
ಸರಕಾರ ಎಲ್‌ಐಸಿಯ ಶೇ.3.5 ಷೇರುಗಳನ್ನು ಮಾರಾಟ ಮಾಡುತ್ತಿದೆ. ಶೇ.10 ಷೇರುಗಳು ಎಲ್‌ಐಸಿ ಪಾಲಿಸಿದಾರರಿಗೆ ಮೀಸಲಿಡಲಾಗಿದೆ. ಶೇ.31.25 ಷೇರುಗಳು ರಿಟೇಲ್‌ ಹೂಡಿಕೆದಾರರಿಗೆ ಮೀಸಲಾಗಿದೆ. ಸರಕಾರ ಈ ಐಪಿಒ ಮೂಲಕ 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದಿದ್ದು, ಅಹ ಸಾಂಸ್ಥಿಕ ಹೂಡಿಕೆದಾರರಿಂದ 5,630 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಪಾಲಿಸಿದಾರರಿಗೆ ಪ್ರತಿ ಷೇರಿಗೆ 65 ರೂ. ಹಾಗೂ ರಿಟೇಲ್‌ ಹೂಡಿಕೆದಾರಿಗೆ 45 ರೂ. ರಿಯಾಯಿತಿ ದೊರೆಯಲಿದೆ. ಹೂಡಿಕೆದಾರರು ಎಲ್‌ಐಸಿ ಐಪಿಒದಲ್ಲಿ 15 ಷೇರುಗಳಿರುವ ಕನಿಷ್ಠ 1 ಲಾಟ್‌ ಅನ್ನು ಖರೀದಿಸಬೇಕಾಗುತ್ತದೆ. ಇದಕ್ಕೆ ಡಿಸ್ಕೌಂಟ್‌ ಸೇರಿ 14,235 ರೂ.ಗಳಾಗುತ್ತದೆ. ಪ್ರತಿ ಷೇರಿನ ದರ ಶ್ರೇಣಿ 902-949 ರೂ.ಗಳಾಗಿದೆ. ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರು ಗರಿಷ್ಠ 2 ಲಕ್ಷ ರೂ. ಮೌಲ್ಯದ ಷೇರು ಖರೀದಿಸಬಹುದು
ಮೇ 4ರಂದು ಆರಂಭವಾಗಿರುವ ಐಪಿಒ ಮೇ 9ರ ತನಕ ನಡೆಯಲಿದೆ. ಬಿಎಸ್‌ಇ ಮತ್ತು ಎನ್‌ಎಸ್ಇನಲ್ಲಿ ಷೇರುಗಳು 2022ರ ಮೇ 17ರಂದು ನೋಂದಣಿಯಾಗಲಿವೆ.

ಶನಿವಾರ-ಭಾನುವಾರವೂ ಐಪಿಒ
ಎಲ್‌ಐಸಿ ಐಪಿಒ ಭಾನುವಾರ (ಮೇ8) ಕೂಡ ನಡೆಯಲಿದೆ. ಹೀಗಾಗಿ ನಿಗದಿತ ಬ್ಯಾಂಕ್‌ ಶಾಖೆಗಳು (ಎಎಸ್‌ಬಿಎ) ಭಾನುವಾರ ಕೂಡ ತೆರೆದಿರಬೇಕು ಎಂದು ರಿಸರ್ವ್‌ ಬ್ಯಾಂಕ್‌ ತಿಳಿಸಿದೆ. ಕೇಂದ್ರ ಸರಕಾರಕ್ಕೆ ಬಂಡವಾಳ ಹಿಂತೆಗೆತದ ನಿಟ್ಟಿನಲ್ಲಿ ಎಲ್‌ಐಸಿ ಐಪಿಒ ನಿರ್ಣಾಯಕವಾಗಿದೆ. ಡಿಮ್ಯಾಟ್‌ ಖಾತೆ ಹೊಂದಿದ್ದರೆ ಎಲ್‌ ಐಸಿ ಷೇರುಗಳನ್ನು ಖರೀದಿಸಬಹುದು. ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಇದುವರೆಗಿನ ಗರಿಷ್ಠ ಮೌಲ್ಯದ ಐಪಿಒ ಇದಾಗಿದೆ. ಜೆರೋಧಾ, ಪೇಟಿಎಂ, ಅಪ್‌ಸ್ಟಾಕ್ಸ್‌, ಗ್ರೋವ್‌ ಮೊದಲಾದ ಸಂಸ್ಥೆಗಳ ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕವೂ ಬಿಡ್‌ ಸಲ್ಲಿಸಬಹುದು.

Exit mobile version