Site icon Vistara News

LIC IPO: ಷೇರು ಖರೀದಿಗೆ ಮುಗಿಬಿದ್ದ ಪಾಲಿಸಿದಾರರು, 4 ಪಟ್ಟು ಹೆಚ್ಚು ಬಿಡ್‌

ಮುಂಬಯಿ: ಎಲ್‌ಐಸಿಯ (LIC IPO) ಐಪಿಒದ ಮೂರನೇ ದಿನವಾದ ಶನಿವಾರ ಪಾಲಿಸಿದಾರರು 4.01 ಪಟ್ಟು ಹೆಚ್ಚಿನ ಬಿಡ್‌ ಸಲ್ಲಿಸಿದ್ದಾರೆ. ಎರಡನೇ ದಿನದ ಅಂತ್ಯಕ್ಕೇ ಪಾಲಿಸಿದಾರರು ಮತ್ತು ಉದ್ಯೋಗಿಗಳ ಕೆಟಗರಿಯಲ್ಲಿ ಸಂಪೂರ್ಣ ಸಬ್‌ಸ್ಕ್ರೈಬ್‌ ಆಗಿತ್ತು.

ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇಯ ಅಂಕಿ ಅಂಶಗಳ ಪ್ರಕಾರ ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಎಲ್‌ಐಸಿ ಪಾಲಿಸಿದಾರರ ಕೋಟಾದಲ್ಲಿ 4.01 ಪಟ್ಟು ಬಿಡ್‌ ಸಲ್ಲಿಕೆಯಾಗಿತ್ತು. ರಿಟೇಲ್‌ ವಲಯದಲ್ಲಿ 1.23 ಪಟ್ಟು ಚಂದಾದಾರಿಕೆಯಾಗಿತ್ತು.

ಎಲ್‌ಐಸಿ ಐಪಿಒ 2022ರ ಮೇ 9ರ ತನಕ ಸಾರ್ವಜನಿಕರಿಗೆ ಬಿಡ್‌ ಸಲ್ಲಿಕೆಗೆ ಲಭಿಸಲಿದೆ. ಭಾನುವಾರ ಕೂಡ ಲಭ್ಯವಿರಲಿದೆ. ದರ ಶ್ರೇಣಿ 902-949 ರೂ.ಗಳಾಗಿವೆ. ಪಾಲಿಸಿದಾರರಿಗೆ 60 ರೂ. ಹಾಗೂ ರಿಟೇಲ್‌ ಹೂಡಿಕೆದಾರರಿಗೆ 45 ರೂ. ರಿಯಾಯಿತಿ ಸಿಗಲಿದೆ.

65 ಕಂಪನಿಗಳಿಂದ ಐಪಿಒ

ಭಾರತದಲ್ಲಿ 2021 ಐಪಿಒಗಳ ವರ್ಷವಾಗಿತ್ತು ಎನ್ನಬಹುದು. 65 ಕಂಪನಿಗಳು ಒಟ್ಟಾಗಿ 1.2 ಲಕ್ಷ ಕೋಟಿ ರೂ.ಗಳನ್ನು ಐಪಿಒ ಮೂಲಕ ಸಂಗ್ರಹಿಸಿತ್ತು. ಕ್ಯಾಲೆಂಡರ್‌ ವರ್ಷವೊಂದರಲ್ಲಿ ಇದು ಗರಿಷ್ಠ ಮೊತ್ತವಾಗಿದೆ. ಈ ವರ್ಷ ಎಲ್‌ಐಸಿ ಐಪಿಒ ಅತ್ಯಂತ ಮತ್ವದ ಐಪಿಒ ಎನ್ನಿಸಿದೆ. ಸಂಸ್ಥೆಯ ಬಗ್ಗೆ ಜನತೆ ಹೊಂದಿರುವ ವಿಶ್ವಾಸವನ್ನೂ ಇದು ಬಿಂಬಿಸಿದೆ. ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ವಿಶ್ವಾಸ ಉಡುಗಿತ್ತಾದರೂ, ಎಲ್‌ಐಸಿ ಐಪಿಒದಲ್ಲಿ ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರು ಉತ್ಸಾಹದಿಂದ ಭಾಗವಹಿಸಿದ್ದಾರೆ. ರಿಟೇಲ್‌ ಹೂಡಿಕೆದಾರರು 3.06 ಪಟ್ಟು ಹೂಡಿಕೆ ಮಾಡಿದ್ದಾರೆ.

ಅನುಭವಿ ಹೂಡಿಕೆದಾರರಿಗೆ ಅವಸರ ಇಲ್ಲ

ಎಲ್‌ಐಸಿ ಐಪಿಒದ ಮೊದಲ ದಿನವೇ ಪಾಲಿಸಿದಾರರು ಬಿಡ್‌ ಸಲ್ಲಿಸಲು ಮುಗಿಬಿದ್ದಿದ್ದರು. ಹೀಗಾಗಿ ಅವರ ಕೋಟಾದಲ್ಲಿ 4 ಪಟ್ಟು ಹೆಚ್ಚು ಬಿಡ್‌ ಸಲ್ಲಿಕೆಯಾಗಿದೆ. ಹೀಗಿದ್ದರೂ ಹಲವು ಸಾಂಸ್ಥಿಕ ಹೂಡಿಕೆದಾರು ಈಗಲೂ ಬೇಲಿಯ ಮೇಲೆ ಕುಳಿತಿದ್ದಾರೆ. ರಿಟೇಲ್‌ ಹೂಡಿಕೆದಾರರೂ. ಅನುಭವಸ್ಥರೂ ಪಾಲಿಸಿದಾರರಂತೆ ಹಾತೊರೆದಿಲ್ಲ. ಅವಸರ ಮಾಡಿಲ್ಲ. ಹಲವು ಮಂದಿ ಅನುಭವಿ ಹೂಡಿಕೆದಾರರು ಸೆಕೆಂಡರಿ ಮಾರುಕಟ್ಟೆಯಲ್ಲಿ ಪರಿಸ್ಥಿತಿ ನೋಡಿಕೊಂಡು ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ಕೋಲ್ಕತಾ ಮೂಲದ ಹೂಡಿಕೆದಾರ ದೇಬಶೀಷ್‌ ಮಜುಂದಾರ್‌.
ಅರ್ಹ ಸಾಂಸ್ಥಿಕ ಹೂಡಿಕೆದಾರರು ಮತ್ತು ಸಾಂಸ್ಥಿಕೇತರ ಹೂಡಿಕೆದಾರರು ಇನ್ನೂ ಅಂಥ ಉತ್ಸಾಹ ವ್ಯಕ್ತಪಡಿಸಿಲ್ಲ. ಅರ್ಹ ಸಾಂಸ್ಥಿಕ ಹೂಡಿಕೆದಾರರು ಶೇ.56 ಮತ್ತು ಸಾಂಸ್ಥಿಕೇತರ ಹೂಡಿಕೆದಾರರು ಶೇ.76 ಬಿಡ್‌ ಸಲ್ಲಿಸಿದ್ದಾರೆ.

ಸಾಮಾನ್ಯ ವಿಮೆ ಕಂಪನಿ ಮಾರಾಟ?

ಎಲ್‌ ಐಸಿ ಐಪಿಒ ಬಳಿಕ ಸರಕಾರ ತನ್ನ 3 ಸಾಮಾನ್ಯ ವಿಮೆ ಕಂಪನಿಗಳ ಪೈಕಿ ಒಂದನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ನ್ಯಾಶನಲ್‌ ಇನ್ಷೂರೆನ್ಸ್‌ ಕಂಪನಿ, ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಕಂಪನಿ ಮತ್ತು ಓರಿಯೆಂಟಲ್‌ ಇಂಡಿಯಾ ಇನ್ಷೂರೆನ್ಸ್‌ ಪೈಕಿ ಒಂದನ್ನು ಖಾಸಗೀಕರಣಗೊಳಿಸಲು ಸರಕಾರ ಮುಂದಾಗಿದೆ. ನೀತಿ ಆಯೋಗವು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ನ ಖಾಸಗೀಕರಣಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ. ಎಲ್‌ಐಸಿ ಐಪಿಒ ಬಳಿಕ ಮತ್ತಷ್ಟು ಬಂಡವಾಳ ಹಿಂತೆಗೆತಕ್ಕೆ ಇದು ಪುಷ್ಟಿ ನೀಡಲಿದೆ ಎಂದು ವರದಿಯಾಗಿದೆ.

ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ 2019-20ರಲ್ಲಿ 1,485 ಕೋಟಿ ರೂ. ಹಾಗೂ 2020-21ರಲ್ಲಿ 985 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ವರದಿಯಾಗಿತ್ತು. ಆದರೆ ರಾಷ್ಟ್ರ ವ್ಯಾಪಿಯಾಗಿ ಅಸ್ತಿತ್ವ ಹೊಂದಿರುವ ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಅನ್ನು ಖಾಸಗೀಕರಣಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ಇದೆ. ಹೀಗಿದ್ದರೂ ಇದು ಇನ್ನೂ ಅಂತಿಮವಾಗಿಲ್ಲ.

Exit mobile version