Site icon Vistara News

LIC IPO: ಮಾರುಕಟ್ಟೆಯಲ್ಲಿ ಎಲ್‌ಐಸಿಯ ಪ್ರತಿ ಷೇರಿನ ದರ 941 ರೂ?

ಹೊಸದಿಲ್ಲಿ: ದೇಶದ ಗಮನ ಸೆಳೆದಿರುವ ಎಲ್‌ಐಸಿ ಐಪಿಒ ಮೇ 9ರಂದು ಮುಕ್ತಾಯವಾದ ಬಳಿಕ, ಷೇರು ಮಾರುಕಟ್ಟೆಯಲ್ಲಿ ಯಾವ ದರದಲ್ಲಿ ಎಲ್‌ಐಸಿಯ ಷೇರು ನೋಂದಣಿಯಾಗಲಿದೆ ಹಾಗೂ ವಹಿವಾಟು ನಡೆಯಬಹುದು ಎಂಬ ಕುತೂಹಲ ಉಂಟಾಗಿದೆ.

ಗ್ರೇ ಮಾರುಕಟ್ಟೆಯಲ್ಲಿ ಒಂದು ಅಂದಾಜಿನ ಪ್ರಕಾರ, 941 ರೂ.ಗೆ ಎಲ್‌ಐಸಿ ಷೇರು ದರ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿದೆ. ಐಪಿಒ ಆರಂಭಿಕ ಷೇರು ಬಿಡುಗಡೆಯಾಗಿದ್ದರೆ, ಮೇ 17ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗುವ ಮೂಲಕ ಎಲ್‌ಐಸಿ ಷೇರು ಸೆಕೆಂಡರಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇಲ್ಲಿ ನೋಂದಣಿಯಾದ ಬಳಿಕ ಷೇರುಗಳ ಖರೀದಿ-ಮಾರಾಟ ವಹಿವಾಟು ನಡೆಯುತ್ತದೆ.

ಗ್ರೇ ಮಾರುಕಟ್ಟೆಯ ಲೆಕ್ಕಾಚಾರ ಹೇಗೆ?
ಅನೌಪಚಾರಿಕ ಮಾರುಕಟ್ಟೆಗೆ ಗ್ರೇ ಮಾರುಕಟ್ಟೆ ಎನ್ನುತ್ತಾರೆ. ಇಲ್ಲಿ ಅಧಿಕೃತವಾಗಿ ಷೇರು ಬಿಡುಗಡೆಗೆ ಮೊದಲೇ ಷೇರು ದರದ ಲೆಕ್ಕಾಚಾರ ನಡೆಯುತ್ತದೆ. ಇದಕ್ಕಾಗಿ ಗ್ರೇ ಮಾರುಕಟ್ಟೆ ಪ್ರೀಮಿಯಂ (ಜಿಎಂಪಿ) ವ್ಯವಸ್ಥೆ ಇದೆ. ಮಾರುಕಟ್ಟೆ ವೀಕ್ಷಕರ ಬುಧವಾರದ ಲೆಕ್ಕಾಚಾರದ ಪ್ರಕಾರ ಎಲ್‌ಐಸಿ ಐಪಿಒ ಗ್ರೇ ಮಾರುಕಟ್ಟೆ ಪ್ರೀಮಿಯಂ (ಜಿಎಂಪಿ) ದರದಲ್ಲಿ 8 ರೂ, ಡಿಸ್ಕೌಂಟ್‌ ಇತ್ತು. ಎಲ್‌ಐಸಿ ಐಪಿಒದಲ್ಲಿ ಗರಿಷ್ಠ ದರ 949 ರೂ. ಆದ್ದರಿಂದ 8 ರೂ. ಕಳೆದರೆ 941ರೂ. ಆಗುತ್ತದೆ. ಈ ದರಕ್ಕೆ ಸೆಕೆಂಡರಿ ಮಾರುಕಟ್ಟೆಯಲ್ಲಿ ಎಲ್‌ ಐಸಿ ಷೇರು ಸಿಗಬಹುದು ಎಂಬ ಗ್ರಹಿಕೆ ಬುಧವಾರ ಇತ್ತು. ಇದು ಕಾಯಂ ಅಲ್ಲ. ಬದಲಾಗುತ್ತಿರುತ್ತದೆ. ಮೇ 17ಕ್ಕೆ ಅಧಿಕೃತ ದರ ಎಷ್ಟೆಂಬುದು ಬಿಎಸ್‌ಇ, ಎನ್‌ಎಸ್‌ಇನಲ್ಲಿ ಷೇರು ನೋಂದಣಿಯಾದ ಬಳಿಕ ಗೊತ್ತಾಗಲಿದೆ.

ಮೂರು ಪಟ್ಟು ಬಿಡ್‌ ಸಲ್ಲಿಕೆ
2022ರ ಮೇ 4ರಿಂದ 9ರ ತನಕ ಒಟ್ಟು 6 ದಿನಗಳ ಕಾಲ ನಡೆದ ಎಲ್‌ ಐಸಿ ಐಪಿಒದಲ್ಲಿ ಹೂಡಿಕೆದಾರರು ಒಟ್ಟಾರೆಯಾಗಿ 2.95ಪಟ್ಟು ಹೆಚ್ಚಿನ ಬಿಡ್‌ ಸಲ್ಲಿಸಿದ್ದರು. 21,000 ಕೋಟಿ ರೂ.ಗಳ ಮೆಗಾ ಐಪಿಒ ಇದಾಗಿತ್ತು. ರಿಟೇಲ್‌ ಹೂಡಿಕೆದಾರರು 1.99ಪಟ್ಟು, ಪಾಲಿಸಿದಾರರು 6,12 ಪಟ್ಟು, ಉದ್ಯೋಗಿಗಳು 4.40 ಪಟ್ಟು ಹೆಚ್ಚಿನ ಬಿಡ್‌ ಸಲ್ಲಿಸಿದ್ದರು. ಮೇ 12ರಂದು ಎಲ್‌ಐಸಿ ಷೇರುಗಳು ಮಂಜೂರಾಗಲಿದೆ.

Exit mobile version