ಹೊಸದಿಲ್ಲಿ: ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿ ದೊಡ್ಡ ಆರಂಭಿಕ ಷೇರು ಬಿಡುಗಡೆ (ಐಪಿಒ)ಗೆ ಕ್ಷಣಗಣನೆ ಆರಂಭಗೊಂಡಿದೆ. ದೇಶದ ಬಹುತೇಕ ಎಲ್ಲ ಮನೆಗಳಲ್ಲೂ ಭದ್ರತೆಯ ಭರವಸೆಯನ್ನು ಮೂಡಿಸಿರುವ ಭಾರತೀಯ ಜೀವ ವಿಮಾ ನಿಗಮ ಷೇರು ಮಾರುಕಟ್ಟೆ ಪ್ರವೇಶ ಮಾಡುವ ಅಪೂರ್ವ ಮುಹೂರ್ತಕ್ಕಾಗಿ ಎಲ್ಲೆಡೆ ಕಾತರ ಹೆಚ್ಚಿದೆ. ಮೇ 4ರ ಬುಧವಾರ ಷೇರುಗಳನ್ನು ಪಡೆಯಲು ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 9ರವರೆಗೂ ಅವಕಾಶವಿದೆ.
₹10 ಮುಖಬೆಲೆಯ ಒಂದು ಷೇರಿಗೆ ಮೂಲ ಮೌಲ್ಯವನ್ನು 902ರಿಂದ 949 ರೂ. ನಡುವೆ ನಿಗದಿಪಡಿಸಲಾಗುತ್ತಿದೆ. ಡಿಮ್ಯಾಟ್ ಅಕೌಂಟ್ ಹೊಂದಿರುವ ಯಾರೇ ಆದರೂ ಷೇರಿಗಾಗಿ ಅರ್ಜಿ ಸಲ್ಲಿಸಬಹುದಾದರೂ ಎಲ್ ಐಸಿ ಪಾಲಿಸಿದಾರರಿಗೆ 60 ರೂ. ವಿನಾಯಿತಿ ದೊರೆಯಲಿದೆ. ಜತೆಗೆ ಎಲ್‌ಐಸಿಯ ಉದ್ಯೋಗಿಗಳು ಹಾಗೂ ರಿಟೇಲರ್‌ಗಳಿಗೆ 45 ರೂ. ವಿನಾಯಿತಿ ಇದೆ, ದೇಶದಲ್ಲಿ 30 ಕೋಟಿ ಪಾಲಿಸಿದಾರರು ಇದ್ದಾರೆ. ಹೆಚ್ಚಿನವರು ಖರೀದಿಗೆ ಆಸಕ್ತಿ ತೋರಿಸುತ್ತಿರುವುದರಿಂದ ಎಲ್ಲೆಡೆ ಜೋರಾಗಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ | ಮೇ 4ರಿಂದ LIC IPO: ಷೇರು ಖರೀದಿ ಹೇಗೆ ಮಾಡಬೇಕು? ಇಲ್ಲಿದೆ ವಿವರ
ಪಾಲಿಸಿದಾರರು ಎಷ್ಟು ಹೂಡಿಕೆ ಮಾಡಬಹುದು?
ಎಲ್‌ಐಸಿ 10 ರೂ. ಮುಖಬೆಲೆಯ ಒಂದು ಷೇರಿಗೆ 902ರಿಂದ 949 ರೂ. ನಡುವೆ ದರ ನಿಗದಿ ಮಾಡಲಿದೆ. ಪಾಲಿಸಿದಾರರಿಗೆ ಇದು 60 ರೂ. ಕಡಿಮೆ ಬೆಲೆಗೆ ಸಿಗಲಿದೆ. ಪಾಲಿಸಿದಾರರು ಅತಿ ಕಡಿಮೆ ಅಂದರೂ 15 ಷೇರುಗಳ ಒಂದು ಲಾಟ್ ಖರೀದಿಸಬೇಕು. ಅಂದರೆ, 949 ರೂ.ಗಳ ಪ್ರಕಾರ 14,235 ರೂ. ಆಗಲಿದೆ. ಇದಕ್ಕೆ ಕನಿಷ್ಠ 900 ರೂ. ವಿನಾಯಿತಿ ದೊರೆಯಲಿದೆ. ಹೀಗಾಗಿ ಒಬ್ಬ ಪಾಲಿಸಿದಾರ ಷೇರು ಖರೀದಿಸಲು ಹೆಚ್ಚು ಕಡಿಮೆ 13,335 ರೂ. ಹೂಡಿಕೆ ಮಾಡಬೇಕಾಗುತ್ತದೆ. ಒಬ್ಬ ಪಾಲಿಸಿದಾರ ಗರಿಷ್ಠ 2 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಅಂದರೆ ಗರಿಷ್ಠ 14 ಲಾಟ್ ಖರೀದಿ ಮಾಡಬಹುದು.
ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗುತ್ತಾ ಷೇರು?
ಎಲ್‌ಐಸಿ ಷೇರುಗಳಿಗೆ ಆಗಲೇ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಷೇರು ಖರೀದಿಗೆ ಅತ್ಯಂತ ಅಗತ್ಯವಾದ ಡಿಮ್ಯಾಟ್ ಅಕೌಂಟ್ ಸೃಷ್ಟಿ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದು ಇದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.
ಎಲ್‌ಐಸಿ ತನ್ನ ಷೇರುಗಳ ಮಾರಾಟದ ಮೂಲಕ ಒಟ್ಟು 21000 ಕೋಟಿ ರೂ. ಸಂಗ್ರಹಿಸಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಸುಮಾರು 33 ಕೋಟಿ ಷೇರು ಬಿಡುಗಡೆ ಮಾಡಲಿದೆ. ಇವುಗಳ ಪೈಕಿ 5620 ಕೋಟಿ ರೂ. ಮೌಲ್ಯದ ಷೇರುಗಳನ್ನು ಆಂಕರ್ ಹೂಡಿಕೆದಾರರು ಅಥವಾ ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ನಿಗದಿ ಮಾಡಲಾಗಿದೆ. ಮ್ಯೂಚುವಲ್ ಫಂಡ್‌ಗಳು, ಬ್ಯಾಂಕ್, ಪ್ರಾವಿಡೆಂಟ್ ಫಂಡ್, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಿಭಾಗದಲ್ಲಿ ಬರುತ್ತಾರೆ. ಈ ವಿಭಾಗದ ಹೂಡಿಕೆ ಆಗಲೇ ಪೂರ್ಣವಾಗಿದೆ.
ಉಳಿದ ಷೇರುಗಳನ್ನು ಪಾಲಿಸಿದಾರರು, ಉದ್ಯೋಗಿಗಳು ಮತ್ತು ರಿಟೇಲರ್‌ಗಳಿಗೆ ಹಂಚಬೇಕಾಗಿದೆ. ಮೇ 9ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮೇ 12ರಿಂದ ಷೇರುಗಳ ಹಂಚಿಕೆ ನಡೆಯಲಿದೆ. ಮೇ 17ರಂದು ಅಧಿಕೃತವಾಗಿ ಷೇರು ವ್ಯವಹಾರ ಆರಂಭಿಸಬಹುದು. ಈ ಹಂತದಲ್ಲಿ ಕೇಳಿಬರುವ ದೊಡ್ಡ ಪ್ರಶ್ನೆ ಎಂದರೆ ಪಾಲಿಸಿದಾರರಿಗೆ ಬೇಡಿಕೆ ಮಂಡಿಸಿದಷ್ಟು, ಹೂಡಿಕೆ ಮಾಡಿದಷ್ಟು ಪ್ರಮಾಣದಲ್ಲೇ ಷೇರುಗಳು ಸಿಗಲಿದೆಯೇ ಎನ್ನುವುದು.
ಏಲ್‌ಐಸಿ ಷೇರುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಹೆಚ್ಚಿನ ಪಾಲಿಸಿದಾರರು ಇದೇ ಮೊದಲ ಬಾರಿಗೆ ಷೇರು ಮಾರುಕಟ್ಟೆಗೆ ಇಳಿಯಲಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸಿದಷ್ಟೇ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಲಭ್ಯತೆಗೆ ಅನುಗುಣವಾಗಿ ಹಂಚಿ ನೀಡಬೇಕಾದೀತು ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ | ಗ್ರೇ ಮಾರ್ಕೆಟ್‌ನಲ್ಲಿ LIC IPO ಮೌಲ್ಯ ಹೆಚ್ಚಳ: ₹45-₹80ರ ವರೆಗೆ GMP