Site icon Vistara News

ಎಲ್‌ಐಸಿ ಷೇರು 872 ರೂ.ಗೆ ವಹಿವಾಟು ಶುರು

lic

ಮುಂಬಯಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಮಂಗಳವಾರ ನೋಂದಣಿಯಾಗಿ ವಹಿವಾಟು ಆರಂಭಿಸಿದ್ದು, ಐಪಿಒ ದರಕ್ಕಿಂತ 77 ರೂ. ಇಳಿಕೆಯ ಆರಂಭಿಕ ದರ ದಾಖಲಿಸಿದೆ.

ಎಲ್‌ಐಸಿಯ ಷೇರಿನ ಐಪಿಒ ದರ 949 ರೂ.ಗೆ ನಿಗದಿಯಾಗಿತ್ತು. ಷೇರು ಪೇಟೆಯಲ್ಲಿ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಬೆಳಗ್ಗೆ 600 ಅಂಕಗಳ ಜಿಗಿತದೊಂದಿಗೆ ಎಲ್‌ಐಸಿ ಷೇರಿನ ನೋಂದಣಿಯ ವೇಳೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿತ್ತು.

872 ರೂ.ಗಳಿಗೆ ವಹಿವಾಟು ಶುರು
ಎಲ್‌ಐಸಿ ಷೇರು ಎನ್‌ಎಸ್‌ಇನಲ್ಲಿ ಬೆಳಗ್ಗೆ 872 ರೂ.ಗಳಿಗೆ ವಹಿವಾಟು ಆರಂಭಿಸಿತು. ಅಂದರೆ ಐಪಿಒ ದರಕ್ಕೆ ಹೋಲಿಸಿದರೆ ಶೇ.8.11 ರಷ್ಟು ದರ ಇಳಿಕೆ (77 ರೂ.) ದಾಖಲಿಸಿತು. ಬಳಿಕ 900ರೂ.ಗೆ ಚೇತರಿಸಿತು. ಎಲ್‌ಐಸಿ ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರು ಅನುಕ್ರಮವಾಗಿ 60 ರೂ. ಮತ್ತು 45 ರೂ. ಡಿಸ್ಕೌಂಟ್‌ ಪಡೆದಿರುವುದರಿಂದ ಅವರಿಗೆ ಈಗಿನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಉತ್ತಮ ಬೆಲೆಗೆ ಷೇರು ಲಭಿಸಿದೆ. ಆದರೆ ಸಾಂಸ್ಥಿಕ ಹೂಡಿಕೆದಾರರಿಗೆ ಡಿಸ್ಕೌಂಟ್‌ ಇಲ್ಲವಾದ್ದರಿಂದ ನಷ್ಟವಾಗುವ ಸಾಧ್ಯತೆ ಇದೆ.

ಇನ್ನೂ ಇದೆ: ಗ್ರೇ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರು ದರ ಇಳಿಕೆ

Exit mobile version