Site icon Vistara News

ಎಲ್‌ ಐಸಿ ಷೇರಿಗೆ ʼಶುಭ ಮಂಗಳʼವಾರದ ನಿರೀಕ್ಷೆ

ಮುಂಬಯಿ: ಲಕ್ಷಾಂತರ ಭಾರತೀಯರು ದೇಶದ ಅತಿ ದೊಡ್ಡ ಐಪಿಒದಲ್ಲಿ ಎಲ್‌ಐಸಿಯ ಷೇರುಗಳಿಗೆ ಹೂಡಿಕೆ ಮಾಡಿದ್ದಾರೆ. ಅವರಿಗೆ ಮೇ 17ರ ಮಂಗಳವಾರ ಮಹತ್ವದ ದಿನ. ಎಲ್‌ಐಸಿಯ ಷೇರುಗಳು ಮೊದಲ ಬಾರಿಗೆ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿದೆ. ಬಳಿಕ ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರುಗಳ ಕೊಡು-ಕೊಳ್ಳುವಿಕೆ ಆರಂಭವಾಗಲಿದೆ.

ಇದನ್ನೂ ಓದಿ: ಗ್ರೇ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರು ದರ ಇಳಿಕೆ

ಒಂದು ವೇಳೆ ಎಲ್‌ಐಸಿಯ ಷೇರುಗಳ ದರ ಐಪಿಒ ದರಕ್ಕಿಂತ (949ರೂ.) ಕುಸಿತಕ್ಕೀಡಾದರೆ ರಿಟೇಲ್‌ ಹೂಡಿಕೆದಾರರಿಗೆ ನಿರಾಸೆಯಾಗಬಹುದು ಎಂಬ ಕಳವಳ ಕೂಡ ಇದೆ. ಆದರೆ ಕೆಳಕ್ಕಿಳಿಯುವ ಷೇರು ದರ ಮತ್ತೆ ಏರಿಕೆ ದಾಖಲಿಸಬಹುದು. ಷೇರುಗಳ ಬೆಲೆಗಳಲ್ಲಿ ಏರಿಳಿತ ಸಾಮಾನ್ಯ. ದೀರ್ಘಕಾಲೀನವಾಗಿ ಎಲ್‌ ಐಸಿಯ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಹಾಗೂ ಲಕ್ಷಾಂತರ ಹೊಸ ಹೂಡಿಕೆದಾರರನ್ನು ಸೃಷ್ಟಿಸಿದ ಹೆಗ್ಗಳಿಕೆ ಎಲ್‌ಐಸಿ ಐಪಿಒಗೆ ಸಲ್ಲುತ್ತದೆ ಎನ್ನುತ್ತಾರೆ ತಜ್ಞರು.

ಗ್ರೇ ಮಾರುಕಟ್ಟೆ ನೀಡಿರುವ ಸಂದೇಶ ಏನು?
ಗ್ರೇ ಮಾರುಕಟ್ಟೆ ಅಥವಾ ಅನಧಿಕೃತ ಮಾರುಕಟ್ಟೆಯಲ್ಲಿ ಸೋಮವಾರ 936 ರೂ.ಗಳಿಗೆ ಎಲ್‌ ಐಸಿ ಷೇರಿನ ದರ ನಿಗದಿಯಾಗಿತ್ತು. ಆರಂಭಿಕ ಹಂತದ ದರ ಕುಸಿತದಿಂದ ಚೇತರಿಸಿದ್ದರೂ, ಈಗಲೂ ಋಣಾತ್ಮಕವಾಗಿದೆ. 13 ರೂ. ಕಡಿಮೆಯೇ ಇದೆ.
ಎಲ್‌ ಐಸಿ ಐಪಿಒದಲ್ಲಿ ಬಿಡ್‌ ದರದ ಶ್ರೇಣಿ 902-949 ರೂ.ಗಳಾಗಿತ್ತು. ಎಲ್‌ಐಸಿ ಐಪಿಒ ದರವನ್ನು 949 ರೂ.ಗೆ ನಿಗದಿಪಡಿಸಿತ್ತು. ಹೀಗಾಗಿ 949 ರೂ.ಗಿಂತ ಕಡಿಮೆ ದರ ಲಭಿಸಿದರೆ, ಐಪಿಒದಲ್ಲಿ ಖರೀದಿಸಿದವರಿಗೆ ನಷ್ಟವಾಗಲಿದೆ. ಹೀಗಾಗಿ ರಿಟೇಲ್‌ ಹೂಡಿಕೆದಾರರಿಗೆ ನಿರಾಸೆಯಾಗಬಹುದು. ಹೀಗಿದ್ದರೂ ಎಲ್‌ ಐಸಿಯ ವಹಿವಾಟು, ಗಾತ್ರಕ್ಕೆ ಹೋಲಿಸಿದರೆ 949 ರೂ. ಉತ್ತಮ ದರ ಎನ್ನುತ್ತಾರೆ ತಜ್ಞರು.

ಎಲ್‌ಐಸಿ ಷೇರಿಗೆ ಅಗ್ನಿ ಪರೀಕ್ಷೆ
ಐಪಿಒದಲ್ಲಿ ಸರಕಾರ ಬಿಡುಗಡೆಗೊಳಿಸಿದ ಎಲ್‌ ಐಸಿಯ 16.21 ಕೋಟಿ ರೂ. ಷೇರುಗಳಿಗೆ 47.83 ಕೋಟಿ ಬಿಡ್‌ ಸಲ್ಲಿಕೆಯಾಗಿತ್ತು. ಕಳೆದ 2010ರಿಂದೀಚೆಗೆ ಸಾರ್ವಜನಿಕ ವಲಯದ 21 ಕಂಪನಿಗಳು ಐಪಿಒ ನಡೆಸಿವೆ. ಇದರಲ್ಲಿ ಅರ್ಧದಷ್ಟು ಕಂಪನಿಗಳ ಷೇರು ದರ ಈಗಲೂ ಐಪಿಒ ದರಕ್ಕಿಂತ ಕಡಿಮೆ ದರವನ್ನು ಹೊಂದಿವೆ. ಮತ್ತೊಂದು ಕಡೆ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಷೇರು ಮಾರುಕಟ್ಟೆಯಲ್ಲಿ ಐಪಿಒಗೆ ಪೂರಕ ವಾತಾವರಣ ಇಲ್ಲ ಎಂಬ ವಾದವೂ ಇತ್ತು.

ಇಂಥ ಅನಿಶ್ಚಿತತೆಯ ನಡುವೆಯೂ ಎಲ್‌ಐಸಿ ಐಪಿಒನಲ್ಲಿ ಒಟ್ಟಾರೆ ಮೂರು ಪಟ್ಟು ಬಿಡ್‌ ಸಲ್ಲಿಕೆಯಾಗಿ ಉತ್ತಮ ಸ್ಪಂದನೆ ಲಭಿಸಿತ್ತು. ಪಾಲಿಸಿದಾರರು 6 ಪಟ್ಟು ಬಿಡ್‌ ಸಲ್ಲಿಸಿದ್ದರೆ, ಉದ್ಯೋಗಿಗಳು 4 ಪಟ್ಟು ಬಿಡ್‌ ಸಲ್ಲಿಸಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಸಣ್ಣ ಹೂಡಿಕೆದಾರರಿಗೆ ಲಾಭ ಮುಖ್ಯ

ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ, 65 ವರ್ಷಗಳ ಇತಿಹಾಸವಿರುವ ಎಲ್‌ಐಸಿ ಭಾರತದಲ್ಲಿ ಮನೆಮಾತಾಗಿರುವ ಬ್ರ್ಯಾಂಡ್‌. 2 ಸಾವಿರಕ್ಕೂ ಹೆಚ್ಚು ಶಾಖೆಗಳು, 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 28.6 ಕೋಟಿ ಪಾಲಿಸಿಗಳನ್ನು ಮಾರಾಟ ಮಾಡಿದೆ. 25 ಕೋಟಿ ಪಾಲಿಸಿದಾರರ ನೆಲೆಯನ್ನು ಒಳಗೊಂಡಿದೆ.
” ಎಲ್‌ಐಸಿಯ ಬೃಹತ್‌ ಗಾತ್ರ, ಬ್ರ್ಯಾಂಡ್‌ ಹೆಗ್ಗಳಿಕೆಯಿಂದ ಸಣ್ಣ ಹೂಡಿಕೆದಾರರಿಗೆ ಲಾಭವಾಗುವುದು ಮುಖ್ಯʼʼ ಎನ್ನುತ್ತಾರೆ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್‌.

ಎಲ್‌ ಐಸಿ ಐಪಿಒ ಪ್ರಯೋಜನ ಹಲವು

Exit mobile version