Site icon Vistara News

ವಿಸ್ತಾರ Explainer | ಸರಕು ಸಾಗಣೆಗೆ ಚೀತಾ ಸ್ಪೀಡ್‌ ನೀಡಲು ಲಾಜಿಸ್ಟಿಕ್ಸ್‌ ನೀತಿ!

logistics

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ೭೨ನೇ ಜನ್ಮ ದಿನದಂದು ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಗೆ ಚಾಲನೆ ನೀಡಿದ್ದಾರೆ. (National Logistics Policy -NLP) ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಯ ಪರಿಣಾಮ ಭಾರತದಾದ್ಯಂತ ಚೆಕ್‌ ಪೋಸ್ಟ್‌ಗಳ ಹಂಗಿಲ್ಲದೆ ಸೀಮಾತೀತವಾಗಿ ಸರಕುಗಳ ಸಾಗಣೆಗೆ ಟ್ರಕ್‌ಗಳಿಗೆ ಹಾದಿ ಸುಗಮವಾಗಲಿದೆ. ಇದರಿಂದ ಉದ್ಯಮ ವಲಯಕ್ಕೆ “ಚೀತಾ ಸ್ಪೀಡ್‌ʼ ಸಿಗಲಿದೆ ಎಂದು ಪ್ರಧಾನಿ ಮೋದಿ ಅವರು ಬಣ್ಣಿಸಿದ್ದಾರೆ. ಜನ್ಮದಿನದಂದು ನಮೀಬಿಯಾದಿಂದ ಎಂಟು ಚೀತಾಗಳನ್ನು ತಂದಿದ್ದರಿಂದ, ಲಾಜಿಸ್ಟಿಕ್ಸ್‌ ನೀತಿಗೂ, ಚೀತಾ ಸ್ಪೀಡ್‌ಗೂ ಮೋದಿ ಸಮೀಕರಣ ಮಾಡಿದ್ದರು. ದೇಶದ ಎಲ್ಲ ಮೂಲೆಗಳಿಗೂ ಸರಕುಗಳನ್ನು ಸಾಗಿಸಲು, ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಇದು ಅಭೂತಪೂರ್ವವಾಗಿ ಸಹಕಾರಿಯಾಗಲಿದೆ (ವಿಸ್ತಾರ Explainer) ಎಂದಿದ್ದರು.

ಏನಿದು ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2020ರ ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಭಾರತದಲ್ಲಿ ಲಾಜಿಸ್ಟಿಕ್ಸ್‌ ವೆಚ್ಚವನ್ನು ಕಡಿಮೆಗೊಳಿಸುವುದು ಇದರ ಪ್ರಧಾನ ಉದ್ದೇಶ. ಅಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಕು ಅಥವಾ ನಾನಾ ವಸ್ತುಗಳನ್ನು ಸಾಗಿಸುವ ಖರ್ಚನ್ನು ಕಡಿಮೆ ಮಾಡುವುದು. ಇದಕ್ಕಾಗಿ ತಂತ್ರಜ್ಞಾನದ ಬಳಕೆ, ಮೂಲಸೌಕರ್ಯ ಅಭಿವೃದ್ಧಿ, ಹಲವು ಮಾದರಿಗಳ ಸಾರಿಗೆ ವ್ಯವಸ್ಥೆಯ ಅನುಷ್ಠಾನ. ಭಾರತದಲ್ಲಿ ಲಾಜಿಸ್ಟಿಕ್ಸ್‌ ವೆಚ್ಚವು ಜಿಡಿಪಿಯ 13-೧4% ಇದ್ದರೆ, ಜರ್ಮನಿ, ಜಪಾನ್‌ನಲ್ಲಿ ಕೇವಲ 8-9% ಮಾತ್ರ ಇರುತ್ತದೆ. ಹೀಗಾಗಿ ಅದೇ ಮಾದರಿಯಲ್ಲಿ ಇಲ್ಲೂ ವೆಚ್ಚ ಇಳಿಸುವುದು ಈ ನೀತಿಯ ಗುರಿ. ಇದರಿಂದ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ. ಸರಕು ಸಾಗಣೆಗೆ ತಗಲುವ ಸಮಯ ಕೂಡ ಕಡಿಮೆಯಾಗಲಿದೆ.

ಎರಡನೆಯದಾಗಿ ಲಾಜಿಸ್ಟಿಕ್ಸ್‌ ಸೂಚ್ಯಂಕದಲ್ಲಿ ( Logistics performance Index) 2030ರ ವೇಳೆಗೆ ಪ್ರಮುಖ 25 ದೇಶಗಳಲ್ಲಿ ಒಂದಾಗಬೇಕು. ಭಾರತ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆ. ಇದು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ. ಆದ್ದರಿಂದ ಲಾಜಿಸ್ಟಿಕ್ಸ್‌ ವಲಯದ ಸುಧಾರಣೆ ಅತಿ ಅಗತ್ಯ.

ಡಿಜಿಟಲ್‌ ವ್ಯವಸ್ಥೆಯ ಸಂಯೋಜನೆ: ( Integration digital system) ನೂತನ ನೀತಿಯ ಅಡಿಯಲ್ಲಿ ರಸ್ತೆ ಸಾರಿಗೆ, ರೈಲ್ವೆ, ಕಸ್ಟಮ್ಸ್‌, ವೈಮಾನಿಕ, ಬಂದರು, ಜಲ ಸಾರಿಗೆ, ವಿದೇಶ ವ್ಯಾಪಾರ ಮತ್ತು ವಾಣಿಜ್ಯ ಸಚಿವಾಲಯಗಳು, ಇಲಾಖೆಗಳು ತಮ್ಮದೇ ಡಿಜಿಟಲ್‌ ಡೇಟಾಗಳನ್ನು ಹೊಂದಲಿವೆ. ಹಾಗೂ ಇವುಗಳ ಸಂಯೋಜನೆ ನಡೆಯಲಿದೆ. ಐಡಿಎಸ್‌ ಅಡಿಯಲ್ಲಿ ನಡೆಯಲಿರುವ ಈ ಡೇಟಾ ಸಂಯೋಜನೆಯಿಂದ ಲಾಜಿಸ್ಟಿಕ್ಸ್‌ ಸುಧಾರಿಸಲಿದೆ. ಇದರಿಂದ ವೆಚ್ಚ ತಗ್ಗಲಿದೆ.

ಏಕೀಕೃತ ಲಾಜಿಸ್ಟಿಕ್ಸ್‌ ಇಂಟರ್‌ಫೇಸ್‌ ಪ್ಲಾಟ್‌ಫಾರ್ಮ್‌ ರಚನೆಯಾಗಲಿದ್ದು ಇದು ಕೂಡ ಸುಗಮ ಸಂಚಾರಕ್ಕೆ ಸಹಕರಿಸಲಿದೆ. ಲಾಜಿಸ್ಟಿಕ್ಸ್‌ ಕುರಿತ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವ್ಯವಸ್ಥೆ ಅಳವಡಿಕೆಯಾಗಲಿದೆ. ಸಾರಿಗೆ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ 196 ನಿರ್ಣಾಯಕ ಯೋಜನೆಗಳನ್ನು ಗುರುತಿಸಲಾಗಿದೆ. ಇವುಗಳ ಜಾರಿಯಿಂದ ಕಲ್ಲಿದ್ದಲು, ಉಕ್ಕು, ಆಹಾರ ಪದಾರ್ಥಗಳ ದೇಶ ವ್ಯಾಪಿ ಸಾಗಣೆಗೆ ಅನುಕೂಲವಾಗಲಿದೆ. ಸಮಯ ಮತ್ತು ವೆಚ್ಚ ಎರಡೂ ಉಳಿತಾಯವಾಗಲಿದೆ.

ಲಾಜಿಸ್ಟಿಕ್ಸ್‌ ನೀತಿ ಒಂದೇ ಅಲ್ಲ

ಲಾಜಿಸ್ಟಿಕ್ಸ್‌ ವಲಯದಲ್ಲಿ ಹಲವು ಸ್ತರಗಳು ಇವೆ. ಯೋಜನೆ, ಸಹಕಾರ, ದಾಸ್ತಾನು, ಸರಕುಗಳ ಸಾಗಣೆ, ಸಿಬ್ಬಂದಿಯ ಜಾಲ, ಮೂಲಸೌಕರ್ಯ ಎಲ್ಲವೂ ಇರುತ್ತದೆ. ಉತ್ಪಾದನೆಯ ಸ್ಥಳದಿಂದ ಬಳಕೆಯ ಕಟ್ಟಕಡೆಯ ತಾಣದ ತನಕ ಸರಕುಗಳನ್ನು ಸಾಗಿಸಬೇಕಾಗುತ್ತದೆ.

ಲಾಜಿಸ್ಟಿಕ್ಸ್‌ ನೀತಿ, ಗತಿಶಕ್ತಿ ಯೋಜನೆ, ಸಾಗರಮಾಲಾ, ಭಾರತ್‌ಮಾಲಾ (ಜಲ ಮಾರ್ಗ ಮತ್ತು ರಸ್ತೆ ಮಾರ್ಗ), ಸರಕು ಕಾರಿಡಾರ್‌ ಎಲ್ಲವೂ ಒಂದಕ್ಕೊಂದು ಪೂರಕವಾಗಿವೆ. ಸರಕು ಸಾಗಣೆಯ ವೆಚ್ಚ ಒಂದಂಕಿಗೆ ಇಳಿಕೆಯಾದರೆ ಉದ್ದಿಮೆ ವಲಯಕ್ಕೆ ಮತ್ತಷ್ಟು ಉತ್ಪಾದನೆಗೆ ಅನುಕೂಲವಾಗಲಿದೆ. ಆರ್ಥಿಕ ಚಟುವಟಿಕೆಗಳು ಸುಧಾರಣೆಯಾಗಲಿವೆ.

Exit mobile version