ಹೊಸದಿಲ್ಲಿ: ₹9,362 ಕೋಟಿ ಮೊತ್ತದ ಫೆಮಾ (FEMA) ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಎಜುಕೇಶನ್ ಸ್ಟಾರ್ಟಪ್ ಬೈಜುಸ್ (BYJU’s) ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ವಿರುದ್ಧ ಲುಕ್‌ಔಟ್ ನೋಟಿಸ್ (Look out notice) ಜಾರಿ ಮಾಡಲು ಜಾರಿ ನಿರ್ದೇಶನಾಲಯ (Enforcement directorate- ED – ಇಡಿ) ವಲಸೆ ಬ್ಯೂರೋಗೆ (Bureau of Immigration) ಕೇಳಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (Foreign Exchange Management Act) ಅಡಿಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಬೈಜೂಸ್ ಸಂಸ್ಥೆಯನ್ನು ನಡೆಸುತ್ತಿರುವ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ಹಾಗೂ ಅದರ ಮಾಲೀಕ ಬೈಜು ರವೀಂದ್ರನ್ ಅವರಿಗೆ ₹9,362.35 ಕೋಟಿ ಮೊತ್ತದ ಅಕ್ರಮ ವ್ಯವಹಾರ ಎಸಗಿದ ಕುರಿತು ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸ್ ನೀಡಿತ್ತು.
ಕಂಪನಿಯು ಕಾಯಿದೆಯನ್ನು ಉಲ್ಲಂಘಿಸಿ ಮಾಡಿದ ದೊಡ್ಡ ಮೊತ್ತದ ಸಾಗರೋತ್ತರ ಹೂಡಿಕೆಗಳ ಆರೋಪಗಳ ಆಧಾರದ ಮೇಲೆ ಇಡಿ, ಫೆಮಾ ವಿಚಾರಣೆಯನ್ನು ಪ್ರಾರಂಭಿಸಿದೆ. ಈ ಅವ್ಯವಹಾರ ಖಜಾನೆಗೆ ಸಾಕಷ್ಟು ನಷ್ಟವನ್ನು ಉಂಟುಮಾಡಿದೆ ಎನ್ನಲಾಗಿದೆ.
ಏಪ್ರಿಲ್‌ನಲ್ಲಿ, ಮಾಹಿತಿಯ ಆಧಾರದ ಮೇಲೆ, ಇಡಿ ಸಂಸ್ಥೆಯು ಬೆಂಗಳೂರಿನಲ್ಲಿರುವ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಮತ್ತು ರವೀಂದ್ರನ್ ಅವರ ನಿವಾಸದಲ್ಲಿ ಶೋಧಗಳನ್ನು ನಡೆಸಿತ್ತು. ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಿತ್ತು. ರವೀಂದ್ರನ್ ಅವರ ಹೇಳಿಕೆ ಮತ್ತು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯ ಹೇಳಿಕೆಯನ್ನು ಸಹ ದಾಖಲಿಸಿದೆ.
ED ಪ್ರಕಾರ, ಕಂಪನಿ ಮತ್ತು ರವೀಂದ್ರನ್ ಅವರು ಭಾರತದ ಹೊರಗೆ ಮಾಡಿದ ಹಣದ ಹೂಡಿಕೆಗಳ ಕುರಿತು ಸೂಕ್ತ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದು, ಆ ಮೂಲಕ FEMA ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ವಿದೇಶಕ್ಕೆ ಮಾಡಿದ ರಫ್ತಿನ ಆದಾಯದ ದಾಖಲೆ ನೀಡಲು ವಿಫಲರಾಗಿದ್ದು, ಕಂಪನಿಗೆ ಸ್ವೀಕರಿಸಿದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಬಗ್ಗೆ ಸೂಕ್ತ ದಾಖಲೆಗಳನ್ನು ವಿಳಂಬವಾಗಿ ಸಲ್ಲಿಸಿದ್ದು, ಸ್ವೀಕರಿಸಿದ ಎಫ್‌ಡಿಐಗೆ ಷೇರುಗಳನ್ನು ಹಂಚಿಕೆ ಮಾಡಲು ವಿಫಲವಾಗಿರುವುದು ತನಿಖೆಯ ವ್ಯಾಪ್ತಿಯಲ್ಲಿವೆ.
ಇದಕ್ಕೂ ಮೊದಲು ಕಂಪನಿಯು 2011ರಿಂದ 2023ರವರೆಗೆ ಸುಮಾರು ₹28,000 ಕೋಟಿಗಳಷ್ಟು ಎಫ್‌ಡಿಐ ಅನ್ನು ಸ್ವೀಕರಿಸಿದೆ. ಅದೇ ಅವಧಿಯಲ್ಲಿ ʼಸಾಗರೋತ್ತರ ನೇರ ಹೂಡಿಕೆʼಯ ಹೆಸರಿನಲ್ಲಿ ವಿವಿಧ ವಿದೇಶಿ ವ್ಯಾಪ್ತಿಗೆ ಸುಮಾರು ₹9,754 ರವಾನೆ ಮಾಡಿದೆ ಎಂದು ಇಡಿ ಆರೋಪಿಸಿದೆ.
ಬೈಜು ಕಚೇರಿಯ ಟಿವಿ ಹೊತ್ತೊಯ್ದ ಪಾಲಕರು!
ಬೈಜು ಕಂಪನಿಯ ಸಂಕಷ್ಟವನ್ನು ಪ್ರತಿಬಿಂಬಿಸುವ ವೈರಲ್ ವಿಡಿಯೋ ಒಂದರಲ್ಲಿ, ಆಕ್ರೋಶಿತ ಪಾಲಕರು ಬೈಜು ಕಚೇರಿಯ ಒಂದು ಟಿವಿಯನ್ನೇ ಕಿತ್ತು ಒಯ್ದಿದ್ದಾರೆ. ಹಣ ಮರುಪಾವತಿಗೆ ಬಹಳಷ್ಟು ಸಲ ಒತ್ತಾಯಿಸಿ ಸುಸ್ತಾಗಿಹೋಗಿದ್ದ ತಂದೆ ಹಾಗೂ ಮಗ, ಬೈಜು ಕಚೇರಿಯಿಂದ ಟಿವಿಯನ್ನೇ ಕಿತ್ತೊಯ್ದಿದ್ದಾರೆ ಎನ್ನಲಾಗಿದೆ. ಈ ಕುಟುಂಬ ನಿಗದಿತ ಸಮಯದೊಳಗೆ ಮರುಪಾವತಿಗೆ ವಿನಂತಿಸಿತ್ತು. ಹಲವು ವಾರಗಳ ವಿಫಲ ಪ್ರಯತ್ನಗಳ ನಂತರ ಬೈಜು ಕಚೇರಿಗೆ ಧಾವಿಸಿದ ಇವರು ಟಿವಿ ಯುನಿಟ್ ಕಿತ್ತು ಕೊಂಡೊಯ್ದಿದ್ದಾರೆ. “ನೀವು ಹಣ ನಮ್ಮ ಹಣ ಮರುಪಾವತಿ ಮಾಡಿದ ಬಳಿಕ ಟಿವಿ ಪುನಃ ತೆಗೆದುಕೊಳ್ಳಿ” ಎಂದು ಕಚೇರಿ ಸಿಬ್ಬಂದಿಗೆ ಹೇಳಿದ್ದಾರೆ.
ಈ ವೀಡಿಯೊ Instagramನಲ್ಲಿ ವೈರಲ್ ಆಗಿದೆ. 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ತಮಾಷೆ ಕಾಮೆಂಟ್‌ಗಳೂ ಬಂದಿವೆ. “ಬೈಜು ಚಂದಾದಾರಿಕೆ ರದ್ದುಗೊಳಿಸಿದ ನಂತರ ತಂದೆ ಮತ್ತು ಮಗ ಪ್ಲೇಸ್ಟೇಷನ್ ಅನ್ನು ಪ್ಲೇ ಮಾಡುತ್ತಾರೆ” ಎಂದು ಒಬ್ಬ ಕಮೆಂಟ್ ಮಾಡಿದ್ದರೆ, “ಈ ಆರ್ಥಿಕ ವರ್ಷದಲ್ಲಿ BYJUಗೆ ಖಂಡಿತವಾಗಿಯೂ 45000 ರೂ. ನಷ್ಟವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ‘ಫೆಮಾ’ ಉಲ್ಲಂಘಿಸಿದ ಬೈಜುಸ್‌ಗೆ 9000 ಕೋಟಿ ರೂ. ಪಾವತಿಸಲು ಇಡಿ ನೋಟಿಸ್!