ನವದೆಹಲಿ: ಜುಲೈ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 30 ರೂ. ಕಡಿಮೆ ಮಾಡಿವೆ (LPG Price Cut). ಇದರೊಂದಿಗೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 30 ರೂ. ಕಡಿತಗೊಂಡು 1,726 ರೂ.ಗೆ ತಲುಪಿದೆ.
ಇನ್ನು ದೆಹಲಿಯಲ್ಲಿ ಪರಿಷ್ಕೃತ ದರ 1,646 ರೂ. ಆಗಿದೆ. ಹಿಂದೆ 1,676 ರೂ. ಆಗಿತ್ತು. ಮುಂಬೈಯಲ್ಲಿಯೂ 30 ರೂ. ಇಳಿಕೆಯಾಗಿದ್ದು ಹೊಸ ಬೆಲೆಯನ್ನು 1,598 ರೂ.ಗೆ ನಿಗದಿಪಡಿಸಲಾಗಿದೆ. ಕೋಲ್ಕತ್ತಾದಲ್ಲಿ ದರ ಪರಿಷ್ಕರಣೆಯ ಬಳಿಕ 1,756 ರೂ. ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತವೆ.
Oil marketing companies have revised the prices of commercial LPG gas cylinders. The rate of 19 KG commercial LPG gas cylinder has been slashed by Rs 30 with effect from today, 1st July. In Delhi, the retail sale price of 19kg commercial LPG cylinder is Rs 1646 from today. pic.twitter.com/at2TjjDYV3
— ANI (@ANI) July 1, 2024
ವಾಣಿಜ್ಯ ಎಲ್‌ಪಿಜಿ ಬೆಲೆಗಳ ಕಡಿತವು ಈ ಸಿಲಿಂಡರ್‌ಗಳನ್ನೇ ಅವಲಂಬಿಸಿರುವ ವ್ಯವಹಾರಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಯ ಪ್ರವೃತ್ತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಮತ್ತು ದೇಶಾದ್ಯಂತದ ಗ್ರಾಹಕರಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಹೊಂದಾಣಿಕೆಗಳನ್ನು ಮಾಡುವುದಾಗಿ ಒಎಂಸಿಗಳು ಭರವಸೆ ನೀಡಿವೆ.
ಸತತ ಇಳಿಕೆ
ಕಳೆದ ಕೆಲವು ತಿಂಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗುತ್ತಿದೆ. ಜೂನ್ 1ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 69.50 ರೂ. ಕಡಿಮೆ ಆಗಿತ್ತು. ಮೇ 1ರಂದು ದರ ಪರಿಷ್ಕರಿಸಿ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿಯೂ 19 ಕೆಜಿಯ ಸಿಲಿಂಡರ್ ಬೆಲೆಯನ್ನು 30.50 ರೂ. ಇಳಿಸಲಾಗಿತ್ತು. ತೈಲ ಮಾರುಕಟ್ಟೆ ಕಂಪನಿಗಳು ಹಿಂದಿನ ಘೋಷಣೆಯನ್ನು ಮಾರ್ಚ್ 1ರಂದು ಮಾಡಿದ್ದು, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ದರಗಳನ್ನು ಹೆಚ್ಚಿಸಿದ್ದವು. ಆ ಸಮಯದಲ್ಲಿ, OMCಗಳು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು 25 ರೂ. ಹೆಚ್ಚಿಸಿದ್ದವು.
ಗೃಹಬಳಕೆಯ ಸಿಲಿಂಡರ್ ಬೆಲೆ ಯಥಾಸ್ಥಿತಿ
ಈ ಮಧ್ಯೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 805.50 ರೂ. ಇದೆ. ಇನ್ನು ದೆಹಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ., ಮುಂಬೈನಲ್ಲಿ 802.50 ರೂ., ಚೆನ್ನೈನಲ್ಲಿ 818.50 ರೂ. ಇದೆ. ವಿಶೇಷವೆಂದರೆ ಕಳೆದ ವರ್ಷ ಜೂನ್‌ನಲ್ಲಿ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,103 ರೂ. ಇತ್ತು. ಆಗಸ್ಟ್‌ನಲ್ಲಿ ತೈಲ ಕಂಪನಿಗಳು 200 ರೂ.ಗಳ ಕಡಿತವನ್ನು ಘೋಷಿಸಿ 903 ರೂ.ಗೆ ಇಳಿಸಿದವು. ಬಳಿಕ 2024ರ ಮಾರ್ಚ್‌ನಲ್ಲಿ ಬೆಲೆಯನ್ನು ಮತ್ತೂ 100 ರೂ. ಕಡಿತಗೊಳಿಸಲಾಯಿತು.
ಇದನ್ನೂ ಓದಿ: Mohan Bhagwat: ಮುಕೇಶ್ ಅಂಬಾನಿ ನಿವಾಸಕ್ಕೆ ಆಗಮಿಸಿದ ಮೋಹನ್ ಭಾಗವತ್; ಕೈ ಮುಗಿದು ಸ್ವಾಗತಿಸಿದ ನೀತಾ ಅಂಬಾನಿ