ನವ ದೆಹಲಿ: ಐಟಿ ವಲಯದ ಟೆಕ್ಕಿಗಳಲ್ಲಿ ಆತಂಕ ಉಂಟಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್ಆ್ಯಪ್ ಮಾತೃಸಂಸ್ಥೆ ಮೆಟಾದಲ್ಲಿ ಮುಂದಿನ ವಾರ ಮತ್ತೆ 6,000 ಉದ್ಯೋಗ ಕಡಿತವಾಗುವ ನಿರೀಕ್ಷೆ ಇದೆ. ಮೆಟಾದ ಗ್ಲೋಬಲ್ ಅಫೈಯರ್ಸ್ ವಿಭಾಗದ ಅಧ್ಯಕ್ಷ ನಿಕ್ ಕ್ಲೇಗ್ ಈ ವಿಷಯ ತಿಳಿಸಿದ್ದಾರೆ.
ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಅವರು ಮೇನಲ್ಲಿ ಸಾಮೂಹಿಕ ಉದ್ಯೋಗ ಕಡಿತ ನಡೆಯಲಿದೆ ಎಂದು ಇತ್ತೀಚೆಗೆ ಹೇಳಿದ್ದರು. ಮೆಟಾ ಕಳೆದ ವರ್ಷ ನವೆಂಬರ್‌ನಲ್ಲಿ 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. 2023ರ ಮಾರ್ಚ್‌ನಲ್ಲಿ 10,000 ಉದ್ಯೋಗ ಕಡಿತ ಮಾಡಲಾಗುವುದು ಎಂದು ಘೋಷಿಸಿತ್ತು. ಇದುವರೆಗೆ 4000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅಂದರೆ 6000 ಮಂದಿ ಮುಂದಿನ ವಾರ ಉದ್ಯೋಗ ಕಳೆದುಕೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ :Meta: ಮೆಟಾದಿಂದಲೂ ಚಾಟ್‌ಜಿಪಿಟಿ ಮಾದರಿಯ ಎಐ ಮಾಡೆಲ್ ಸ್ಯಾಮ್-SAM ಲಾಂಚ್
ಮುಂದಿನ ವಾರ ಮೆಟಾದಲ್ಲಿ ಉದ್ಯೋಗ ಕಡಿತದ ಮೂರನೇ ಅಲೆ ಏಳುವ ಸಾಧ್ಯತೆ ಇದೆ. ಇದು ಅನಿಶ್ಚಿತತೆಯ ಕಾಲ. ಈ ಹಂತದಲ್ಲಿ ವೃತ್ತಿಪರತೆ ಮಹತ್ವದ್ದು ಎಂದು ನಿಕ್ ಕ್ಲೇಗ್ ವಿವರಿಸಿದ್ದಾರೆ.
ಮೆಟಾದಲ್ಲಿ ಈಗಾಗಲೇ ಉದ್ಯೋಗಿಗಳಿಗೆ ಮುಂದಿನ ವಾರ ನಡೆಯಲಿರುವ ಉದ್ಯೋಗ ಕಡಿತದ ಬಗ್ಗೆ ಇ-ಮೇಲ್ ರವಾನಿಸಿದೆ. 2023ರಲ್ಲಿ ದಿಗ್ಗಜ ಟೆಕ್ ಕಂಪನಿಗಳು ಭಾರಿ ಉದ್ಯೋಗ ಕಡಿತವನ್ನು ಪ್ರಕಟಿಸಿದ್ದು, ಟೆಕ್ಕಿಗಳಲ್ಲಿ ಆತಂಕ ಸೃಷ್ಟಿಸಿದೆ.