Site icon Vistara News

ವಿಸ್ತಾರ Explainer | ಹಾಲು, ಬ್ರೆಡ್‌, ಚಿಪ್ಸ್‌, ಬಿಸ್ಕತ್‌, ಚಹಾ ದರ ಕೂಡ ಗಗನಕ್ಕೆ, ಆರ್ಥಿಕ ಬಿಕ್ಕಟ್ಟಿಗೆ ಬ್ರಿಟನ್‌ ತತ್ತರ

food

ಭಾರತದಲ್ಲಿ ಈರುಳ್ಳಿ, ಟೊಮೆಟೊ, ಅಕ್ಕಿ, ಗೋಧಿ, ಪೆಟ್ರೋಲ್‌ ದರ ಏರಿಕೆಯಾದಾಗ ಹೇಗೆ ಸುದ್ದಿಯಾಗುತ್ತದೆಯೇ, ಅದೇ ರೀತಿ ಬ್ರಿಟನ್‌ನಲ್ಲಿ ಪಾಸ್ಟಾ, ಚಹಾ, ಅಡುಗೆ ಎಣ್ಣೆ ದರಗಳು ಗಗನಕ್ಕೇರಿದೆ. ದರ ಸ್ಫೋಟಕ್ಕೆ ಜನ ಕಂಗಾಲಾಗಿದ್ದಾರೆ. ಸಮೀಕ್ಷೆಗಳ ಪ್ರಕಾರ, ಲಕ್ಷಾಂತರ ಜನ ಒಪ್ಪೊತ್ತಿನ ಊಟಕ್ಕೂ ದಿಕ್ಕು ತೋಚದೆ ಪರದಾಡುತ್ತಿದ್ದಾರೆ. ಅನೇಕ ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ (ವಿಸ್ತಾರ Explainer) ಉಂಟಾಗಿದೆ.

ಬಿಬಿಸಿಯ ಇತ್ತೀಚಿನ ವರದಿಯ ಪ್ರಕಾರ, ಒಂದು ವರ್ಷದಲ್ಲಿ ಪಾಸ್ಟಾ, ಚಹಾ, ಚಿಪ್ಸ್‌, ಅಡುಗೆ ಎಣ್ಣೆ ದರದಲ್ಲಿ 65% ದರ ಹೆಚ್ಚಳವಾಗಿದೆ. ಅಡುಗೆ ಎಣ್ಣೆ 65%, ಪಾಸ್ಟಾ 60%, ಚಹಾ 50%, ಬ್ರೆಡ್‌ ದರದಲ್ಲಿ 37% ಹೆಚ್ಚಳವಾಗಿದೆ. ದಿನ ನಿತ್ಯ ಬಳಸುವ ಬಿಸ್ಕತ್‌, ಹಾಲಿನ ದರ ಕೂಡ ಜಿಗಿದಿದೆ. ಅಲ್ಲಿನ ರಾಷ್ಟ್ರೀಯ ಅಂಕಿ ಅಂಶಗಳ ಅಂಕಿ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮನೆ ಬಾಡಿಗೆಯಲ್ಲಿ 30% ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಇನ್ನೂ ಆತಂಕಕಾರಿ ವರದಿಗಳು ಹೊರಜಗತ್ತನ್ನೇ ಬೆಚ್ಚಿಬೀಳಿಸುವಂತಿದೆ. ಹಾಗಾದರೆ ಅಲ್ಲಿ ಆಗಿದ್ದೇನು?!

ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್‌ ಅವರು ದೇಶದ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸುವುದು ತಮ್ಮ ಆದ್ಯತೆ ಎಂದು ಘೋಷಿಸಿದ್ದಾರೆ. ಗಂಭೀರ ಸ್ವರೂಪದ ಆರ್ಥಿಕ ಸಮಸ್ಯೆ ಇರುವುದನ್ನೂ ಅವರು ಒಪ್ಪಿಕೊಂಡಿದ್ದಾರೆ.

ಕೆಲ ವರದಿಗಳ ಪ್ರಕಾರ ಈ ಸಲದ ಚಳಿಗಾಲದಲ್ಲಿ ಬ್ರಿಟನ್‌ನಲ್ಲಿ ಆಹಾರ ಅಭಾವವೂ ಕಾಣಿಸುವ ಆತಂಕ ಇದೆ. ಬರ, ಅನಿಲದ ದರ ಏರಿಕೆ, ಎರಡಂಕಿ ದಾಟಿದ ಹಣದುಬ್ಬರ, ಬಡ್ಡಿ ದರ ಏರಿಕೆ, ಕೈಗಾರಿಕಾ ಉತ್ಪಾದನೆಯ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬ್ರಿಟನ್‌ ಕಂಗಾಲಾಗಿದೆ.

20 ಲಕ್ಷ ಜನರಿಗೆ ಒಪ್ಪೊತ್ತಿನ ಊಟಕ್ಕೂ ಪರದಾಟ

ಬ್ರಿಟನ್‌ನಲ್ಲಿ ಸುಮಾರು 20 ಲಕ್ಷ ಜನರಿಗೆ ಪ್ರತಿ ದಿನ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಕಳೆದ ಜನವರಿಯಿಂದ ದಿನೇದಿನೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಪ್ರತಿ ಏಳು ಮಂದಿ ವಯಸ್ಕರ ಪೈಕಿ ಒಬ್ಬರು ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಫುಡ್‌ ಫೌಂಡೇಷನ್‌ ಚಾರಿಟಿಯ ಸಮೀಕ್ಷೆ ತಿಳಿಸಿದೆ. ಕೋವಿಡ್‌-19 ಮತ್ತು ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪಿದೆ.

ಬ್ರಿಟನ್‌ನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಗ್ರಾಹಕ ದರ ಆಧರಿತ ಹಣದುಬ್ಬರ ಸೂಚ್ಯಂಕ 10.1%ಕ್ಕೆ ಏರಿತ್ತು. ಆಗಸ್ಟ್‌ನಲ್ಲಿ 9.9% ಇತ್ತು. ಇದು ಕಳೆದ 40 ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ ಹಣದುಬ್ಬರವಾಗಿದೆ.

ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಬಿಕ್ಕಟ್ಟು

ಬ್ರಿಟನ್‌ನಲ್ಲಿ ಕಳೆದ 6 ವರ್ಷಗಳಲ್ಲಿ 5 ಪ್ರಧಾನಿಗಳನ್ನು ಕಂಡಿದೆ. ಕಳೆದ ಎಂಟು ವಾರಗಳಲ್ಲಿ ಮೂರನೇ ಪ್ರಧಾನಿಯನ್ನು ದೇಶ ಕಾಣುವಂತಾಗಿದೆ. ಈ ರಾಜಕೀಯ ಅನಿಶ್ಚಿತತೆಗೂ ಆರ್ಥಿಕ ಬಿಕ್ಕಟ್ಟಿಗೂ ನಂಟಿದೆ. ಲಿಜ್‌ ಟ್ರಸ್‌ ಕೇವಲ 45 ದಿನಗಳಲ್ಲಿ ರಾಜೀನಾಮೆ ನೀಡುವಂಥ ಪರಿಸ್ಥಿತಿಗೆ ಕೂಡ ಆರ್ಥಿಕ ಸವಾಲುಗಳೇ ಕಾರಣವಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಲಿಜ್‌ ಟ್ರಸ್‌ ಸರ್ಕಾರ ಮಂಡಿಸಿದ್ದ ಮಿನಿ ಬಜೆಟ್‌ನಲ್ಲಿ ಘೋಷಿಸಿದ ತೆರಿಗೆ ಕಡಿತದ ಯೋಜನೆಯ ಜಾರಿಗೆ ಸಮರ್ಪಕವಾದ ಹಣಕಾಸು ವ್ಯವಸ್ಥೆಯೇ ಇದ್ದಿರಲಿಲ್ಲ. ಬದಲಿಗೆ ಭಾರಿ ಸಾಲದ ಹೊರೆಯನ್ನು ಮಾಡಲು ನಿರ್ಧರಿಸಲಾಗಿತ್ತು. ಇಂಧನ ಸಬ್ಸಿಡಿ ಯೋಜನೆಯಿಂದ ಬ್ರಿಟನ್ನಿನ ಸಿರಿವಂತರಿಗೆ ಲಾಭವಾಗುವ ಹಾಗೂ ಮಧ್ಯಮ ವರ್ಗದ ಜನತೆಗೆ ಯಾವುದೇ ಪ್ರಯೋಜನ ಆಗುವಂತಿರಲಿಲ್ಲ. ಈ ಎಲ್ಲ ಲೋಪದೋಷಗಳ ಪರಿಣಾಮ ಲಿಜ್‌ ಟ್ರಸ್‌ ಕೈಚೆಲ್ಲಿ ರಾಜೀನಾಮೆ ನೀಡಿದರು.

ಬಡ್ಡಿ ದರ ಏರಿಕೆಯ ಬರ: ಹೆಚ್ಚುತ್ತಿರುವ ಹಣದುಬ್ಬರ ಅಥವಾ ಬೆಲೆ ಏರಿಕೆಯನ್ನು ನಿಯಂತ್ರಿಸಲು ಜಗತ್ತಿನಾದ್ಯಂತ ಬಡ್ಡಿ ದರ ಏರಿಸುವ ಟ್ರೆಂಡ್‌ ಚಾಲ್ತಿಯಲ್ಲಿದೆ. ಬ್ರಿಟನ್‌ ಕೂಡ ಹೊರತಾಗಿಲ್ಲ. ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ತನ್ನ ಬಡ್ಡಿ ದರವನ್ನು 2.25%ಕ್ಕೆ ಏರಿಸಿದೆ. ಇದು 2008ರಿಂದಲೇ ಈ ತನಕದ ಗರಿಷ್ಠ ಬಡ್ಡಿಯಾಗಿದೆ. ಸತತ ಏಳನೇ ಸಲ ಬಡ್ಡಿ ದರವನ್ನು ಏರಿಸಲಾಗಿದೆ. ಬ್ರಿಟಿಷ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಪ್ರಕಾರ, ಬ್ರಿಟನ್‌ ಈಗಾಗಲೇ ಆರ್ಥಿಕ ಹಿಂಜರಿತದಲ್ಲಿದೆ.

ಇಂಧನ ದರ ಸ್ಫೋಟ:

ಹಲವಾರು ದೇಶಗಳು ಇಂಧನ ಬಿಕ್ಕಟ್ಟು ಎದುರಿಸುತ್ತಿವೆ. ಆದರೆ ಬ್ರಿಟನ್‌ ನಲ್ಲಿ ಹಲವು ಕಾರಣಗಳಿಂದ ಇಂಧನ ಬೆಲೆ ಏರಿಕೆ ಕಾಡುತ್ತಿದೆ. ಮೊದಲನೆಯದಾಗಿ 85% ಕುಟುಂಬಗಳು ತಮ್ಮ ಮನೆಗಳನ್ನು ಬೆಚ್ಚಗಿರಿಸಲು ಗ್ಯಾಸ್‌ ಬಾಯ್ಲರ್‌ಗಳನ್ನು ಬಳಸುತ್ತಿವೆ. ಅನಿಲ ಆಧರಿತ ವಿದ್ಯುತ್‌ ಸ್ಟೇಷನ್‌ಗಳಲ್ಲಿ 40% ವಿದ್ಯುತ್‌ ತಯಾರಾಗುತ್ತಿದೆ. ಎರಡನೆಯದಾಗಿ ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಬ್ರಿಟನ್‌ ಹೆಚ್ಚು ಅನಿಲ ಆಧರಿತ ವಿದ್ಯುತ್‌ ಬಳಸುತ್ತದೆ.

ಕಳೆದ ವರ್ಷ ಚಳಿಗಾಲದಲ್ಲಿ ಪ್ರತಿ ಮನೆಗೆ ವಾರ್ಷಿಕ ಸರಾಸರಿ 1,000 ಪೌಂಡ್‌ ಇಂಧನ ಬಿಲ್‌ ಬರುತ್ತಿತ್ತು. 2022ರ ಅಕ್ಟೋಬರ್‌ ವೇಳೆಗೆ 3,500 ಪೌಂಡ್‌ಗೆ ಏರಿತ್ತು. 2023ರಲ್ಲಿ 5,000 ಪೌಂಡ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಕೆಲ ವರ್ಷಗಳಿಂದ ಆದಾಯ ಏರಿಕೆಯಾಗದೆ ಅನೇಕ ಕುಟುಂಬಗಳು ಸಂಕಷ್ಟದಲ್ಲಿದ್ದು, ಇದೀಗ ಇಂಧನ ಬಿಲ್‌ ಭಾರಿ ಹೊರೆಯಾಗಿ ಪರಿಣಮಿಸಿದೆ. ಬ್ರಿಟನ್‌ನ ಹಣದುಬ್ಬರ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ. ಹಣದುಬ್ಬರ ಏರಿಕೆಯ ಪರಿಣಾಮ ಜನತೆಯ ಆದಾಯದಲ್ಲಿ ಇಳಿಕೆಯಾಗುತ್ತಿದೆ. ಖರ್ಚು ಹೆಚ್ಚುತ್ತಿದೆ.

ರಷ್ಯಾದಿಂದ ಅನಿಲ ಪೂರೈಕೆ ಅಸ್ತವ್ಯಸ್ತ: ಕಳೆದ ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್‌ ವಿರುದ್ಧ ದಾಳಿ ನಡೆಸಿದ ಬಳಿಕ ಬ್ರಿಟನ್‌ ಪಾಶ್ಚಿಮಾತ್ಯ ದೇಶಗಳೊಡನೆ ಕೈಜೋಡಿಸಿ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿತು. ಇದಾದ ಬಳಿಕ ರಷ್ಯಾದಿಂದ ಬ್ರಿಟನ್‌ಗೆ ತೈಲ ಮತ್ತು ಅನಿಲ ಪೂರೈಕೆ ಅಸ್ತವ್ಯಸ್ತವಾಗಿದೆ. ಚಳಿಗಾಲದ ಅವಧಿಯಲ್ಲಿ ಬ್ರಿಟನ್‌ಗೆ ಇದು ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ದುಬಾರಿ ಇಂಧನ ಬಿಲ್‌ ಇಡೀ ಎಕಾನಮಿಗೆ ಹೊಡೆತ ಕೊಟ್ಟಿದೆ.

ಮಿನಿ ಬಜೆಟ್‌ನಲ್ಲಿ ಯಡವಟ್ಟು: ಲಿಜ್‌ ಟ್ರಸ್‌ ನೇತೃತ್ವದ ಸರ್ಕಾರ ಜನತೆಯ ಆದಾಯವನ್ನು ಲೆಕ್ಕಿಸದೆ ಎಲ್ಲರಿಗೂ ಒಂದೇ ರೀತಿಯಲ್ಲಿ ಎನರ್ಜಿ ಬಿಲ್‌ ಒದಗಿಸಲು ನಿರ್ಧರಿಸಿತು. ಇಂಧನ ಬಿಲ್‌ ವಾರ್ಷಿಕ 2,500 ಪೌಂಡ್‌ ( 2.38 ಲಕ್ಷ ರೂ.) ಮೀರಬಾರದು. ಹಾಗೂ ಮಿಕ್ಕದ್ದನ್ನು ಸರ್ಕಾರವೇ ಸಬ್ಸಿಡಿ ಮೂಲಕ ಭರಿಸುವುದಾಗಿ ನಿರ್ಧರಿಸಲಾಯಿತು. ಆದರೆ ಇದರಿಂದ ಸಿರಿವಂತರಿಗೆ ಅನುಕೂಲವಾಗಬಹುದೇ ಹೊರತು ಬಡವರಿಗೆ, ಮಧ್ಯಮ ವರ್ಗದವರಿಗೆ ಪ್ರಯೋಜನವಾಗುವ ಯಾವುದೇ ಸಾಧ್ಯತೆ ಇರಲಿಲ್ಲ. ಕೊನೆಗೆ ಈ ವಿವಾದಾತ್ಮಕ ನಿರ್ಧಾರನ್ನು ಹಿಂತೆಗೆದುಕೊಳ್ಳಲಾಯಿತು.

ಪ್ರಧಾನಿ ರಿಷಿ ಸುನಕ್‌ ಮುಂದಿರುವ ಸವಾಲುಗಳೇನು?

ಐರೋಪ್ಯ ಒಕ್ಕೂಟದಿಂದ ಹೊರಬಂದಿರುವ ಬ್ರಿಟನ್‌, ಸ್ವಂತ ಆರ್ಥಿಕ ಚೈತನ್ಯವನ್ನು ದಿನೇದಿನೆ ಕಳೆದುಕೊಳ್ಳುತ್ತಿದೆ. ಆರ್ಥಿಕತೆಯ ಮೂಲಭೂತ ತಳಹದಿ ದುರ್ಬಲವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಐರೋಪ್ಯ ಒಕ್ಕೂಟದ ಜತೆಗೆ ಯುರೋಪಿನ ಇತರ ದೇಶಗಳ ಜತೆಗೆ ಲೀಲಾಜಾಲವಾಗಿ, ಯಾವುದೇ ಸರಹದ್ದಿನ ಹಂಗು ಇಲ್ಲದೆ ಮುಕ್ತ ವ್ಯಾಪಾರವನ್ನು ನಡೆಸುತ್ತಿದ್ದ ಬ್ರಿಟನ್‌ನ ಉದ್ದಿಮೆದಾರರಿಗೆ ಈಗ ಸಂಕಷ್ಟ ತಲೆದೋರಿದೆ. ಹಿಂದಿನಂತೆ ಮುಕ್ತವಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಹಲವು ಉದ್ದಿಮೆಗಳಿಗೆ ಉದ್ಯೋಗಿಗಳ ಕೊರತೆ ಕಾಡುತ್ತಿದೆ. ಕೌಶಲವಿರುವ ಉದ್ಯೋಗಿಗಳ ಅಭಾವವೂ ಉಂಟಾಗಿದೆ.

ಆರ್ಥಿಕತೆ ಸರಿಪಡಿಸುವ ಸವಾಲು: ಹಳಿ ತಪ್ಪಿರುವ ಆರ್ಥಿಕತೆಯ ಬುನಾದಿಯನ್ನು ಬಲಪಡಿಸಬೇಕಾದ ಜವಾಬ್ದಾರಿ ರಿಷಿ ಸುನಕ್‌ ಅವರ ಮುಂದಿದೆ. ಐರೋಪ್ಯ ಒಕ್ಕೂಟದಿಂದ ಕಳೆದು ಹೋಗಿರುವ ವ್ಯಾಪಾರವನ್ನು ಸರಿದೂಗಿಸಲು ಜಗತ್ತಿನ ಇತರ ದೇಶಗಳ ಜತೆಗೆ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಇಂಧನ ದರ ಸ್ಫೋಟವನ್ನು ಸುನಕ್‌ ತಗ್ಗಿಸಬೇಕಾಗಿದೆ. ಈ ಸವಾಲನ್ನು ಅವರು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ತೆರಿಗೆ ಸಂಗ್ರಹವನ್ನು ಹೊರೆಯಾಗದಂತೆ ಹೆಚ್ಚಿಸಿ, ಸರ್ಕಾರದ ಬೊಕ್ಕಸವನ್ನು ತುಂಬುವುದರ ಜತೆಗೆ ಅಭಿವೃದ್ಧಿಗೆ ಚಾಲನೆ ನೀಡಬೇಕಾಗಿದೆ.

ಪಕ್ಷದಲ್ಲಿ ಒಗ್ಗಟ್ಟು: ಕನ್ಸರ್ವೇಟಿವ್‌ ಪಕ್ಷದಲ್ಲೂ ಒಗ್ಗಟ್ಟು ಮೂಡಿಸಬೇಕಾದ ಜವಾಬ್ದಾರಿ ಮತ್ತು ಸವಾಲು ರಿಷಿ ಸುನಕ್‌ ಮುಂದಿದೆ. ಸಂಭವನೀಯ ಬಂಡಾಯವನ್ನು ಉಪಶಮನಗೊಳಿಸಬೇಕಾಗಿದೆ.

ವಲಸೆ ನಿಯಂತ್ರಣ: ಬ್ರಿಟನ್‌ಗೆ ಹೆಚ್ಚುತ್ತಿರುವ ವಲಸೆಯನ್ನು ನಿಯಂತ್ರಿಸಬೇಕಾದ ಸವಾಲು ರಿಷಿ ಸುನಕ್‌ ಎದುರಿದೆ. ವಲಸೆ ನೀತಿಯನ್ನು ಬಿಗಿಗೊಳಿಸಬೇಕು ಎಂದು ಈ ಹಿಂದೆ ಸುನಕ್‌ ಹೇಳಿದ್ದರು. ಈ ವರ್ಷವೊಂದರಲ್ಲಿಯೇ ಇದುವರೆಗೆ 30,000ಕ್ಕೂ ಹೆಚ್ಚು ಮಂದಿ ಸಣ್ಣ ದೋಣಿಗಳ ಮೂಲಕ ಬ್ರಿಟನ್‌ಗೆ ಅಕ್ರಮವಾಗಿ ನುಸುಳಿದ್ದರು.

ಮುಷ್ಕರದ ಎಚ್ಚರಿಕೆ: ಕೈಗಾರಿಕಾ ವಲಯದಲ್ಲಿ ನವೆಂಬರ್‌ನಲ್ಲಿ ಯೂನಿಯನ್‌ಗಳು ಈ ವರ್ಷ ಮುಷ್ಕರ ನಡೆಸುವುದಾಗಿ ಎಚ್ಚರಿಸಿವೆ. ರೈಲ್ವೆ ಕಾರ್ಮಿಕರ ಒಕ್ಕೂಟ ಮುಷ್ಕರಕ್ಕೆ ಸಜ್ಜಾಗಿದೆ. ವೇತನ ಏರಿಕೆ, ಉದ್ಯೋಗ ಭದ್ರತೆಗೆ ಒತ್ತಾಯಿಸುತ್ತಿವೆ.

ರಕ್ಷಣಾ ವೆಚ್ಚ ಹೆಚ್ಚಳ: ತಾವು ಪ್ರಧಾನಿಯಾದರೆ ರಕ್ಷಣಾ ವೆಚ್ಚವನ್ನು ಹೆಚ್ಚಿಸುವುದಾಗಿ ರಿಷಿ ಸುನಕ್‌ ಈ ಹಿಂದೆ ಹೇಳಿದ್ದರು. ಜತೆಗೆ ಉಕ್ರೇನ್‌ಗೂ ಹೆಚ್ಚಿನ ನೆರವು ನೀಡುವುದಾಗಿ ತಿಳಿಸಿದ್ದರು. ಈ ಭರವಸೆಯನ್ನು ಇನ್ನು ಈಡೇರಿಸಬೇಕಾಗಿದೆ.

Exit mobile version