ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಆಹಾರ ಧಾನ್ಯಗಳನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಿದ್ದರ ಬಗ್ಗೆ ಹೇಳಿದ್ದ ವಿಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿಪಕ್ಷಗಳ ನಾಯಕರೂ ಇದನ್ನು ಅಸ್ತ್ರವಾಗಿ ಪ್ರಯೋಗಿಸಿ ವ್ಯಂಗ್ಯವಾಡುತ್ತಿದ್ದಾರೆ.
ಹಳೆಯ ವಿಡಿಯೊ ಒಂದರಲ್ಲಿ ಪ್ರಧಾನಿ ಮೋದಿಯವರು, ” ಇದುವರೆಗೆ ಅಕ್ಕಿ, ಮೊಸರು, ಮಜ್ಜಿಗೆಗೆ ಕೂಡ ತೆರಿಗೆ ಹಾಕಲಾಗುತ್ತಿತ್ತು. ಆದರೆ ಜಿಎಸ್‌ಟಿಯ ಅಡಿಯಲ್ಲಿ ಇವೆಲ್ಲವೂ ತೆರಿಗೆ ಮುಕ್ತವಾಗಿವೆʼ ಎಂದು ಹೇಳಿದ್ದರು.
ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರು ಈ ವಿಡಿಯೊವನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. “ಕೇಂದ್ರ ಸರ್ಕಾರ ಅಕ್ಕಿ ಹಿಟ್ಟು, ಮಜ್ಜಿಗೆ ಸೇರಿದಂತೆ ದಿನ ಬಳಕೆಯ ವಸ್ತುಗಳ ಮೇಲೆ ೫% ಜಿಎಸ್‌ಟಿ ಹೇರಿದೆ. ಜನರಿಗೆ ಸುಳ್ಳು ಹೇಳಿ ಪ್ರಧಾನಿ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಟ್ವಿಟರ್‌ನಲ್ಲಿ ನಾಗೇಶ್ವರ ರಾವ್ ಎಂಬುವರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ” ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಹೇಳಿದ್ದ ಮಾತನ್ನು ಕೇಳಿ, ಈಗ ಅವರು ಅಕ್ಕಿ, ಮೊಸರು, ಮಜ್ಜಿಗೆ ಮೇಲೆ ೫% ಜಿಎಸ್‌ಟಿ ವಿಧಿಸುತ್ತಿದ್ದಾರೆʼʼ ಎಂದು ಟೀಕಿಸಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಜಿಎಸ್‌ಟಿ ದರ ಪರಿಷ್ಕರಣೆಯನ್ನು ತೀವ್ರವಾಗಿ ಖಂಡಿಸಿದ್ದು, ಮೋದಿ ಸರ್ಕಾರವು ರೋಗಿಗಳನ್ನು ಕೂಡ ಬಿಡದೆ, ಅವರಿಂದಲೂ ಜಿಎಸ್‌ಟಿ ಸಂಗ್ರಹಿಸುತ್ತಿದೆ. ಆಸ್ಪತ್ರೆಯ ಕೊಠಡಿ ಬಾಡಿಗೆಗೂ ಜಿಎಸ್‌ಟಿ ವಿಧಿಸಿರುವುದು ಜನರ ಮೇಲಿನ ದಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದೆ.