ಬೆಂಗಳೂರು: ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಅನೇಕ ಕನಸುಗಳಿರುತ್ತವೆ. ಸ್ವಂತ ಮನೆ ಇರಬೇಕು, ವಾಹನ ಹೊಂದಬೇಕು, ವ್ಯಾಪಾರ ಮಾಡಬೇಕು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಹೀಗೆ… ಈ ಕನಸುಗಳನ್ನು ನನಸು ಮಾಡಲು ಅವರು ಕಷ್ಟಪಟ್ಟು ದುಡಿಯುತ್ತಾರೆ. ಇಂತಹ ಶ್ರಮದ ದುಡಿಮೆಯನ್ನು ಸುರಕ್ಷಿತವಾಗಿ ಇಡುವುದು ಕೂಡ ಮುಖ್ಯ. ಅದಕ್ಕೆ ಅತ್ಯುತ್ತಮ ಆಯ್ಕೆ ಸಾರ್ವಜನಿಕ ಭವಿಷ್ಯ ನಿಧಿ (Public Provident Fund–PPF) ಎಂದು ತಜ್ಞರು ಸಲಹೆ ನೀಡುತ್ತಾರೆ. ಪಿಪಿಎಫ್ ಮೂಲಕ ಹೂಡಿಕೆ ಮಾಡುವುದರಿಂದ ಸುರಕ್ಷತೆ ದೊರೆಯುವುದಷ್ಟೇ ಅಲ್ಲ ಉತ್ತಮ ಆದಾಯವೂ ಲಭ್ಯವಾಗುತ್ತದೆ. ಈ ಕುರಿತಾದ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ದೀರ್ಘಕಾಲೀನ ಹೂಡಿಕೆ
ಪಿಪಿಎಫ್ ದೀರ್ಘಕಾಲೀನ ಹೂಡಿಕೆದಾರರ ನೆಚ್ಚಿನ ಆಯ್ಕೆ ಎಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ತಿಂಗಳಿಗೆ 12,500 ರೂ. ಹೂಡಿಕೆ ಮಾಡಿದರೆ 2.27 ಕೋಟಿ ರೂ. ಆದಾಯ ಸಿಗಲಿದೆ. ಪಿಪಿಎಫ್ ಅನ್ನು ಹಣಕಾಸು ಸಚಿವಾಲಯದ ರಾಷ್ಟ್ರೀಯ ಉಳಿತಾಯ ಸಂಸ್ಥೆಯು 1968ರಲ್ಲಿ ಪರಿಚಯಿಸಿತ್ತು. ಇದು ಸರ್ಕಾರಿ ಬೆಂಬಲಿತ ಯೋಜನೆಯಾಗಿದ್ದು, ವಿಶೇಷವಾಗಿ ನಿವೃತ್ತಿಗಂತಲೇ ವಿನ್ಯಾಸಗೊಳಿಸಲಾಗಿದೆ.
ಅರ್ಹತೆಗಳೇನು?
ಈ ಯೋಜನೆಯಲ್ಲಿ ಭಾರತೀಯ ನಾಗರಿಕರು ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಲು ಸಾಧ್ಯವಿದೆ. ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ ಅಸ್ವಸ್ಥರ ಪರವಾಗಿ ಗಾರ್ಡಿಯನ್‌ಗಳು ಕನಿಷ್ಠ 500 ರೂ. ಮತ್ತು ವಾರ್ಷಿಕ ಮಿತಿ ರೂ 1.5 ಲಕ್ಷ ರೂ.ಯೊಂದಿಗೆ ಪಿಪಿಎಫ್ ಖಾತೆಯನ್ನು ಪ್ರಾರಂಭಿಸಬಹುದು. ಅದಾಗ್ಯೂ ಅನಿವಾಸಿ ಭಾರತೀಯರು ಹೊಸ ಪಿಪಿಎಫ್ ಅಕೌಂಟ್ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ.
ಅವಧಿ
ಒಂದು ಪಿಪಿಎಫ್ ಅಕೌಂಟ್‌ಗೆ 15 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಲಾಕ್ ಇನ್ ಅವಧಿಯನ್ನು ಮತ್ತೆ 5 ವರ್ಷ ವಿಸ್ತರಿಸಬಹುದು. ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಲಂಪ್ಸಮ್ ಅಥವಾ ಕಂತುಗಳಲ್ಲಿ ಕಟ್ಟಬಹುದು. ಅಕೌಂಟ್ ಸಕ್ರಿಯವಾಗಲು ಪ್ರತಿ ವರ್ಷ ಕಟ್ಟಬೇಕು.
ಪಿಪಿಎಫ್ ಹೂಡಿಕೆಯ ಮೇಲೆ ಸಾಲ
ಇನ್ನೊಂದು ವಿಶೇಷ ಎಂದರೆ ಪಿಪಿಎಫ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್ ಮೇಲೆ ಸಾಲ ಪಡೆಯಬಹುದು. ಆದರೆ ಇದಕ್ಕೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಹಣಕ್ಕಾಗಿ ಮಾತ್ರ ಕ್ಲೇಮ್ ಮಾಡಿಕೊಳ್ಳಬಹುದು.
2.27 ಕೋಟಿ ರೂ. ಆದಾಯ ಪಡೆಯುವುದು ಹೇಗೆ?
ಈ ಮೊದಲು ಹೇಳಿದಂತೆ ಪಿಪಿಎಫ್ ಖಾತೆಯಿಂದ 2.27 ಕೋಟಿ ರೂ. ಆದಾಯ ಗಳಿಸಿಸುವುದು ಹೇಗೆ ಎನ್ನುವುದನ್ನು ನೋಡೋಣ. ಪಿಪಿಎಫ್ ಖಾತೆಯಲ್ಲಿ 35 ವರ್ಷಗಳವರೆಗೆ ತಿಂಗಳಿಗೆ ಕೇವಲ 12,500 ಅಥವಾ ವಾರ್ಷಿಕವಾಗಿ 1.50 ಲಕ್ಷ ರೂ. ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಪ್ರಸ್ತುತ ಪಿಪಿಎಫ್ ಬಡ್ಡಿ ದರ 7.10%. ಇದನ್ನು ಪರಿಗಣಿಸಿ ಮೆಚ್ಯುರಿಟಿ ಸಮಯದಲ್ಲಿ (35 ವರ್ಷ ಆದ ಮೇಲೆ) ಸುಮಾರು 2.27 ಕೋಟಿ ರೂ. ಆದಾಯವನ್ನು ಪಡೆಯಬಹುದು.
ಇದನ್ನೂ ಓದಿ: Money Guide: ಬ್ಯಾಂಕ್ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?
ಮುಂದುವರಿಸುವುದು ಹೇಗೆ?
ಪಿಪಿಎಫ್ ಖಾತೆಗಳ ಅವಧಿ 15 ವರ್ಷಗಳು. ಹಾಗಿದ್ದರೂ ಅದನ್ನು ಮತ್ತೆ ಮುಂದುವರಿಸುವ ಅವಕಾಶವಿದೆ. ಐದು ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. 20 ವರ್ಷಗಳ ನಂತರವೂ ಮುಂದುವರಿಯಲು ನೀವು ಫಾರ್ಮ್ 16-ಎಚ್ (16-H) ಅನ್ನು ಸಲ್ಲಿಸಬೇಕಾಗುತ್ತದೆ. ಆಫ್‌ಲೈನ್ ಹಾಗೂ ಆನ್‌ಲೈನ್ ವಿಧಾನದಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಮೂಲ ಮೊತ್ತಕ್ಕೆ ಟ್ಯಾಕ್ಸ್ ಬೆನಿಫಿಟ್ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ