ಯಾವುದೇ ಹಣಕಾಸು ನಿರ್ವಹಣೆಯ ಮೊದಲ ಪಾಠವೇ ಉಳಿತಾಯ. ಉಳಿತಾಯ ಎನ್ನುವ ಬಿತ್ತನೆಯ ಮೂಲಕ ಸಂಪತ್ತಿನ ಗಿಡವನ್ನು ಬೆಳೆಸಬಹುದು (Money Guide) ಎನ್ನುತ್ತಾರೆ ವಿಸ್ತಾರ ಮನಿಪ್ಲಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್. ಮನಿಪ್ಲಸ್ ವಿಡಿಯೊದ ಲಿಂಕ್ ಕೆಳಗಿದೆ.
ನಮಗೆ ಸಾಮಾನ್ಯವಾಗಿ ಪ್ರತಿ ತಿಂಗಳು ಬರುವ ಸಂಬಳದಲ್ಲಿ ಖರ್ಚು ಕಳೆದು ಬಳಿಕ ಉಂಟಾಗುವುದೇ ಉಳಿತಾಯ ಎನ್ನುವ ಭಾವನೆ ಇದೆ. ಆದರೆ ಆದಾಯ ಮೈನಸ್ ಉಳಿತಾಯ = ಖರ್ಚು ಆಗಬೇಕು. ಆದಾಯದ ಪರಿಕಲ್ಪನೆ ಬದಲಾಗಬೇಕು. ಅಂದ್ರೆ ಬಂದ ಸಂಬಳದಲ್ಲಿ ಮೊದಲು ಉಳಿತಾಯದ ಹಣವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಅದನ್ನು ಕಳೆದ ಬಳಿಕ ಉಳಿಯುವ ಹಣವನ್ನು ಖರ್ಚಿಗೆ ಬಳಸಬೇಕು. ಆದಾಯದಲ್ಲಿ ಮೊದಲು ಉಳಿತಾಯವನ್ನು ಕಳೆಯಬೇಕು.
ಹೂಡಿಕೆ ಮಾಡಲು ಹಣ ಬೇಕು, ಅದಕ್ಕಾಗಿ ಹಣವನ್ನು ಉಳಿಸಲೇ ಬೇಕು. ನಮ್ಮ ಅಜ್ಜಿ, ತಾತ ಮೊದಲಾದ ಹಿರಿಯರು ಸಾಸಿವೆ ಡಬ್ಬಿಯಲ್ಲಿ ಅಥವಾ ಮನೆಯ ದೇವರ ಹುಂಡಿಯಲ್ಲೋ ಹಣ ಉಳಿಸುತ್ತಿದ್ದರು. ಕಷ್ಟಕಾಲಕ್ಕೆ ಈ ಆಪದ್ಧನ ನೆರವಾಗುತ್ತಿತ್ತು. ಇವತ್ತು ನಮ್ಮ ಹಣವನ್ನು ಡಬ್ಬದಲ್ಲಿ ಇಡಬಾರದು, ಬೆಳೆಸುವ ಕೆಲಸವನ್ನು ಮಾಡಬೇಕು.
ತುರ್ತು ಅಗತ್ಯಗಳಿಗೆ ಬೇಕಾದ ಹಣವನ್ನು ಇಟ್ಟು ಉಳಿದ ಉಳಿತಾಯದ ಹಣವನ್ನು ಬೇರೆ ಬೇರೆ ಹಣಕಾಸು ಸಾಧನಗಳಲ್ಲಿ ಇನ್ವೆಸ್ಟ್ ಮಾಡಬಹದು. ಉಳಿತಾಯ ಮತ್ತು ಹೂಡಿಕೆಯು ಶ್ರೀಮಂತಿಕೆಯಾಗುತ್ತದೆ. ಖರ್ಚನ್ನು ಮೈನಸ್ ಮಾಡಿದರೂ ಉಳಿತಾಯವಾಗುತ್ತದೆ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳು, ಪಿಪಿಎಫ್, ಎನ್‌ಪಿಎಸ್, ಬ್ಯಾಂಕ್ ಎಫ್ ಡಿ, ಮ್ಯೂಚುವಲ್ ಫಂಡ್ ಎಸ್‌ಐಪಿ, ಇಟಿಎಫ್, ಸ್ಟಾಕ್ಸ್ ಹೀಗೆ ಬೇರೆ ಬೇರೆ ಸಾಧನಗಳಲ್ಲಿ ಇನ್ವೆಸ್ಟ್ ಮಾಡಬಹುದು.