Site icon Vistara News

Money Guide: ಹಣ ಹೂಡಿಕೆ ಮಾಡುವ ಯೋಚನೆಯಲ್ಲಿದ್ದೀರಾ?; ಇಲ್ಲಿದೆ ಅತ್ಯುತ್ತಮ ಆಯ್ಕೆಗಳ ಪಟ್ಟಿ

investment

investment

ಬೆಂಗಳೂರು: ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ (Investment) ಮಾಡುವುದು ಅಗತ್ಯ. ಅದರಲ್ಲೂ ಪ್ರಸ್ತುತ ಕಾಲಘಟ್ಟದಲ್ಲಿ ಹೂಡಿಕೆ ಅಥವಾ ಉಳಿತಾಯ ಎನ್ನುವುದು ಆಯ್ಕೆಯಲ್ಲ ಅನಿವಾರ್ಯ ಎನಿಸಿಕೊಂಡಿದೆ. ಶಿಕ್ಷಣ ಮುಗಿಸಿ ಔದ್ಯೋಗಿಕ ರಂಗಕ್ಕೆ ಪ್ರವೇಶಿಸಿದ ಕೂಡಲೇ ಹೂಡಿಕೆ ಮಾಡುವತ್ತ ಗಮನ ಹರಿಸಬೇಕು ಎನ್ನುವುದು ಆರ್ಥಿಕ ತಜ್ಞರ ಕಿವಿಮಾತು. ದೇಶಲ್ಲಿ ಹೂಡಿಕೆಗೆ ಲಭ್ಯವಿರುವ ಅತ್ಯುತ್ತಮ ಯೋಜನೆಗಳ ಪಟ್ಟಿ ಇಲ್ಲಿದೆ (Money Guide).

ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌ (Public Provident Fund-PPF)

ಕಡಿಮೆ ರಿಸ್ಕ್‌ ಬಯಸುವ ಸಣ್ಣ ಹೂಡಿಕೆದಾರರಿಗೆ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪಿಪಿಎಫ್‌ ಸೂಕ್ತ. ಸರ್ಕಾರವೇ ಇದನ್ನು ನಿರ್ವಹಿಸುತ್ತದೆ. ಖಾತರಿಯ ಆದಾಯ ನೀಡುತ್ತದೆ ಎನ್ನುವುದೇ ಇದರ ವಿಶೇಷತೆ. ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿದರಗಳನ್ನು ನಿರ್ಧರಿಸಲಾಗುತ್ತದೆ. ಇದು ಖಾತರಿಯ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಇದು 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಬೇಕಾದರೆ 7ನೇ ವರ್ಷದ ನಂತರ ಭಾಗಶಃ ಮೊತ್ತ ಹಿಂಪಡೆಯಬಹುದು. ಪಿಪಿಎಫ್ ಖಾತೆಗಳಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಯಾವುದೇ ಭಾರತೀಯ ನಾಗರಿಕ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಈಗ 7.1% ಬಡ್ಡಿ ಇದೆ. 

ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ (National Pension Scheme-NPS)

ಎನ್‌ಪಿಎಸ್‌ ದೀರ್ಘಾವಧಿಯ ನಿವೃತ್ತಿ-ಕೇಂದ್ರಿತ ಹೂಡಿಕೆ ಯೋಜನೆಯಾಗಿದ್ದು, ಭಾರತದ ಯಾವುದೇ ಪ್ರಜೆ ಈ ಎನ್​ಪಿಎಸ್ ಅನ್ನು ಪಡೆಯಬಹುದಾಗಿದೆ. ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್‌ ಅಥಾರಿಟಿ (PFRDA) ಸಂಸ್ಥೆ ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ ಅನ್ನು ನಿರ್ವಹಿಸುತ್ತದೆ. ಇದು ಮಾರುಕಟ್ಟೆ ಜೋಡಿತ ಸ್ಕೀಮ್ (Market Linked Scheme) ಆಗಿರುವುದರಿಂದ ದೀರ್ಘಾವಧಿಗೆ ಉತ್ತಮ ಲಾಭ ತರಬಲ್ಲುದು. ಸರ್ವ ನಾಗರಿಕರ ಎನ್​ಪಿಎಸ್ ಮಾದರಿಯಲ್ಲಿ 18 ವರ್ಷದಿಂದ 70 ವರ್ಷದವರೆಗಿನ ವಯಸ್ಸಿನವರು ಯೋಜನೆಯ ಪ್ರಯೋಜನ ಪಡೆಯಬಹುದು.

ಇಕ್ವಿಟಿ ಲಿಂಕ್ಡ್‌ ಸೇವಿಂಗ್‌ ಸ್ಕೀಮ್‌ (Equity Linked Saving Scheme-ELSS)

ಇಎಲ್ಎಸ್ಎಸ್ ಫಂಡ್‌ಗಳು ಮ್ಯೂಚುವಲ್ ಫಂಡ್‌ಗಳಾಗಿದ್ದು, ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತವೆ. ಇದು ಮೂರು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಹೆಚ್ಚಿನ ರಿಟರ್ನ್ಸ್ ನೀಡುವ ಸಾಮರ್ಥ್ಯ ಇದಕ್ಕಿದೆ. ಇದರಲ್ಲಿ ಹೂಡಿಕೆ ಮಾಡುವುದು ಕೂಡ ಸರಳ.

ಫಿಕ್ಸಡ್‌ ಡೆಪಾಸಿಟ್‌ (Fixed Deposits-FDs)

ಫಿಕ್ಸೆಡ್ ಡೆಪಾಸಿಟ್ ಅಪಾಯವನ್ನು ಇಷ್ಟಪಡದ ಹೂಡಿಕೆದಾರರ ಮೊದಲ ಆಯ್ಕೆ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಎಫ್‌ಡಿ ಮೇಲಿನ ಬಡ್ಡಿದರ ಸಹ ಉತ್ತಮವಾಗಿವೆ. ಉತ್ತಮ ಆದಾಯ ಮತ್ತು ಕಡಿಮೆ ಅಪಾಯ ಹೊಂದಿರುವುದರಿಂದಲೇ ಇದು ಹಲವರ ನೆಚ್ಚಿನ ಆಯ್ಕೆಯಾಗಿದೆ. ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. 

ಯೂನಿಟ್‌ ಲಿಂಕ್ಡ್‌ ಇನ್ಶೂರೆನ್ಸ್‌ ಪ್ಲ್ಯಾನ್‌ (Linked Insurance Plans-ULIPs)

ಯುಲಿಪ್‌ಗಳು ವಿವಿಧ ಮಾರುಕಟ್ಟೆ-ಲಿಂಕ್ಡ್ ಫಂಡ್‌ಗಳಲ್ಲಿ ಹೂಡಿಕೆ ಅವಕಾಶಗಳ ಜತೆಗೆ ಜೀವ ವಿಮಾ ರಕ್ಷಣೆಯ ಪ್ರಯೋಜನವನ್ನೂ ನೀಡುತ್ತವೆ. ಪ್ರೀಮಿಯಂ ಮೊತ್ತ ಮತ್ತು ನಿಧಿ ಹಂಚಿಕೆಯನ್ನು ಆಯ್ಕೆ ಮಾಡುವ ಆಪ್ಶನ್‌ ಒದಗಿಸುತ್ತದೆ. ಪ್ರೀಮಿಯಮ್​ನ ಒಂದು ಭಾಗ ಲೈಫ್ ಕವರ್​ಗೆ ಪಾವತಿಯಾದರೆ, ಉಳಿದ ಭಾಗ ಡೆಟ್ ಅಥವಾ ಈಕ್ವಿಟಿ ಅಸೆಟ್​ನಲ್ಲಿ ಹೂಡಿಕೆ ಮಾಡುವ ಮೂಲಕ ರಿಟರ್ನ್ಸ್ ಸೃಷ್ಟಿಸುತ್ತದೆ. ಯುಲಿಪ್‌ ಲಾಕ್ ಇನ್ ಅವಧಿ 5 ವರ್ಷಗಳು. ಇದು ಎಷ್ಟು ರಿಟರ್ನ್ಸ್ ಸೃಷ್ಟಿಸುತ್ತದೆ ಎಂಬುದು ಮಾರುಕಟ್ಟೆಯ ಏರಿಳಿತಗಳ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ 5 ವರ್ಷ ಲಾಕ್ ಇನ್ ಅವಧಿಗೆ ಮೊದಲೇ ಕ್ಲೋಸ್ ಮಾಡಿದರೆ ಹೂಡಿಕೆದಾರ 5 ವರ್ಷಗಳ ಲಾಕ್​ಇನ್ ಅವಧಿ ಮುಗಿದ ನಂತರವಷ್ಟೇ ಹಣ ಮರು ಪಾವತಿಯಾಗುತ್ತದೆ.

ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ ಪ್ಲ್ಯಾನ್‌ (Systematic Investment Plans-SIPs)

ಇದು ನಿಯಮಿತವಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಮಾರುಕಟ್ಟೆಯ ಚಂಚಲತೆಯ ಪರಿಣಾಮವನ್ನು ಕಡಿಮೆ ಮಾಡುತ್ತವೆ. ದೀರ್ಘಕಾಲೀನ ಪ್ರಯೋಜನಕ್ಕಾಗಿ ಇದರಲ್ಲಿ ಹೂಡಿಕೆ ಮಾಡಬಹುದು. ನೀವು ಸಿಸ್ಟಮ್ಯಾಟಿಕ್ ಹೂಡಿಕೆ ಪ್ಲಾನ್ ಆಯ್ಕೆ ಮಾಡಿದ ನಂತರ, ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿನಿಂದ ಆಟೋಮ್ಯಾಟಿಕ್ ಆಗಿ ಡೆಬಿಟ್ ಮಾಡಲಾಗುತ್ತದೆ ಮತ್ತು ಕೆಲವು ಪೂರ್ವನಿರ್ಧರಿತ ಸಮಯದ ಮಧ್ಯಂತರದಲ್ಲಿ ನೀವು ಖರೀದಿಸುವ ಮ್ಯೂಚುಯಲ್ ಫಂಡ್‌ನಲ್ಲಿ ಮರುಹೂಡಿಕೆ ಮಾಡಲಾಗುತ್ತದೆ.

ಗೋಲ್ಡ್‌ ಇಟಿಎಫ್‌ (Gold ETFs)

ಗೋಲ್ಡ್ ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್‌ (ಇಟಿಎಫ್‌) ಭೌತಿಕ ಸಂಗ್ರಹಣೆಯ ಅಗತ್ಯವಿಲ್ಲದೆ ಚಿನ್ನದಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಒದಗಿಸುತ್ತದೆ. ಅವು ಚಿನ್ನದ ಬೆಲೆಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಆದಾಯವನ್ನು ನೀಡುತ್ತವೆ ಮತ್ತು ಸುರಕ್ಷಿತ ಹೂಡಿಕೆ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.

ಮ್ಯೂಚುವಲ್‌ ಫಂಡ್‌ (Mutual Funds)

ಮ್ಯೂಚುವಲ್‌ ಫಂಡ್‌ ಎಂದರೆ ಸಾಮೂಹಿಕ ಹೂಡಿಕೆಯ ವಿಧಾನ. ಹಲವಾರು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳ ನೆರವಿನಿಂದ ಈಕ್ವಿಟಿ, ಬಾಂಡ್‌, ಸರ್ಕಾರಿ ಸೆಕ್ಯುರಿಟೀಸ್‌, ಮನಿ ಮಾರ್ಕೆಟ್‌ ಸಾಧನಗಳಲ್ಲಿ ಹೂಡಿಕೆ ಮಾಡುವುದು.‌ ಪ್ರತಿ ಮ್ಯೂಚುವಲ್‌ ಫಂಡ್‌ ಯೋಜನೆಗೂ ಅದರದ್ದೇ ಆದ ಉದ್ದೇಶ ಇರುತ್ತದೆ. ಫಂಡ್‌ ನಿರ್ವಹಣೆಗೆ ತಗಲುವ ವೆಚ್ಚವನ್ನು ಕಳೆದು ಉಳಿಯುವ ಮೌಲ್ಯ ನೆಟ್‌ ಅಸೆಟ್‌ ವಾಲ್ಯೂ ಎನ್ನುತ್ತಾರೆ. ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ತಮ್ಮ ಹಣವನ್ನು ಬೆಳೆಸಲು, ಸಿರಿವಂತಿಕೆ ಗಳಿಸಲು ಮ್ಯೂಚುವಲ್‌ ಫಂಡ್‌ ಹಲವು ರೀತಿಯಲ್ಲಿ ಸಹಕಾರಿ ಮತ್ತು ಲಾಭದಾಯಕ. ಸ್ಟಾಕ್‌ ಮಾರ್ಕೆಟ್‌ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದವರು ಹಾಗೂ ತಿಳಿಯಲು ಸಮಯದ ಅಭಾವ ಇರುವವರು ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಬಹುದು. ಸಣ್ಣ ಮೊತ್ತದಲ್ಲಿ ಹೂಡಿಕೆ ಆರಂಭಿಸಲು ಬಯಸುವವರು ಮ್ಯೂಚುವಲ್‌ ಫಂಡ್‌ನಲ್ಲಿ 100 ರೂ.ಗಳ ಸಿಪ್‌ ಮೂಲಕವೂ ಹೂಡಿಕೆ ಶುರು ಮಾಡಬಹುದು.

ಇದನ್ನೂ ಓದಿ: Money Guide: ನೆಮ್ಮದಿಯ ನಿವೃತ್ತ ಜೀವನ ನಿಮ್ಮದಾಗಬೇಕೆ? ಹಾಗಾದರೆ ಈಗಲೇ ಹೀಗೆ ಮಾಡಿ

Exit mobile version