ಸಾಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದು ಇದೆ. ಯಾವ ವಿಚಾರಕ್ಕೆ ಸಾಲ ತೆಗೆದುಕೊಳ್ಳಬೇಕು, ಯಾವುದಕ್ಕೆ ತೆಗೆದುಕೊಳ್ಳಬಾರದು ಎಂಬ ಸ್ಪಷ್ಟತೆ ಇರಬೇಕು. ಒಳ್ಳೆಯ ಸಾಲ ಯಾವುದು ಎಂದರೆ ನಿಮ್ಮ ಸಂಪತ್ತನ್ನು ವೃದ್ಧಿಸಲು ಸಹಕರಿಸುತ್ತದೆಯೇ ಅದು ಒಳ್ಳೆಯದು.ಆದರೆ ನಿಮ್ಮ ಸಂಪತ್ತನ್ನು ಕರಗಿಸುವುದು ಕೆಟ್ಟ ಸಾಲ. ನೀವು ಶಿಕ್ಷಣಕ್ಕೆ ಸಾಲ ಮಾಡಿದರೆ ಅದು ಒಳ್ಳೆಯದು. ಮಕ್ಕಳು ಚೆನ್ನಾಗಿ ಓದಿ ಉದ್ಯೋಗ-ಸ್ವ ಉದ್ಯೋಗ ಮಾಡಿ ಸಂಪಾದಿಸಿದಾಗ ಸಂಪತ್ತು ಸೃಷ್ಟಿಗೆ ಹಾದಿ ಸುಗಮವಾಗುತ್ತದೆ. ಮೊದಲ ಮನೆಗೆ ಸಾಲ ಮಾಡಬಹುದು. ಮಾರುತಿ ಸ್ವಿಫ್ಟ್ ಕಾರು ತೆಗೆದುಕೊಳ್ಳಬಹುದು, ಆದರೆ ಪ್ರೆಸ್ಟೀಜ್ ಗೋಸ್ಕರ ಮರ್ಸಿಡಿಸ್ ಬೆನ್ಜ್ ತೆಗೆದುಕೊಳ್ಳುವವರು ತುಂಬ ಜನ ಇದ್ದಾರೆ. ಇದು ತಪ್ಪು. ಅಂತಸ್ತು-ಪ್ರತಿಷ್ಠೆಗೋಸ್ಕರ ದುಬಾರಿ ಕಾರು ಖರೀದಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್.
ಕ್ರೆಡಿಟ್ ಕಾರ್ಡ್ ಅನ್ನು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಬಳಸಿ. ಆದರೆ ಅದರಲ್ಲಿ ದುಂದು ವೆಚ್ಚ ಮಾಡಬಾರದು. ಮಕ್ಕಳ ಮದುವೆಗೆ, ಜೂಜಿಗೆ, ವಿದೇಶ ಪ್ರವಾಸಕ್ಕೆ ಪರ್ಸನಲ್ ಸಾಲ ತೆಗೆದುಕೊಳ್ಳಬಾರದು. ಸಾಲದ ಅಗತ್ಯ ಇಲ್ಲದಿದ್ದರೂ, ಬ್ಯಾಂಕ್‌ನವರು ಫೋನ್ ಮಾಡಿ ಕೇಳುತ್ತಿದ್ದಾರೆ ಎಂಬ ಕಾರಣಕ್ಕೆ ಲೋನ್ ತೆಗೆದುಕೊಳ್ಳಬಾರದು. ಮೊದಲ ಮನೆಗೆ ಓ.ಕೆ. ಆದರೆ ಹಲವು ಹೋಮ್ ಲೋನ್ ಗಳನ್ನು ತೆಗೆದುಕೊಳ್ಳಬಾರದು.
ಕ್ರೆಡಿಟ್ ಕಾರ್ಡ್ ಲೋನ್ ಮಿತಿ ಮೀರಿದಾಗ ಅದು ಕೆಟ್ಟ ಸಾಲವಾಗುತ್ತದೆ. ನಮ್ಮ ಎಲ್ಲ ಸಾಲಗಳ ಒಟ್ಟು ಇಎಂಐ ನಮ್ಮ ಆದಾಯದ 30-35% ದಾಟದಿದ್ದರೆ ಉತ್ತಮ. ತೀರಾ ಅನಿವಾರ್ಯವಿದ್ದರೆ ಗರಿಷ್ಠ 40% ಮುಟ್ಟಬಹುದು. ಅದಕ್ಕೂ ಹೆಚ್ಚಿನದ್ದು ಒಳ್ಳೆಯದಲ್ಲ.