ಮುಂಬಯಿ: ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ಅದಾನಿ ಗ್ರೂಪ್‌ನ (adani group) ಅಧ್ಯಕ್ಷ ಗೌತಮ್ ಅದಾನಿಯನ್ನು (Gautam Adani ) ಹಿಂದಿಕ್ಕಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
2024ರ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಫೋರ್ಬ್ಸ್ (Forbes list) ಬಿಡುಗಡೆ ಮಾಡಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ 169 ರಿಂದ 200 ಭಾರತೀಯರು ಗುರುತಿಸಿಕೊಂಡಿದ್ದರು. ಈ ಎಲ್ಲ ಬಿಲಿಯನೇರ್ ಗಳ ಒಟ್ಟು ಸಂಪತ್ತು ಕಳೆದ ವರ್ಷ 675 ಶತಕೋಟಿ ಡಾಲರ್ ಇದ್ದದ್ದು ಈ ಬಾರಿ 954 ಬಿಲಿಯನ್ ಡಾಲರ್ ಆಗಿದೆ. ಇದರಲ್ಲಿ ಶೇ. 41ರಷ್ಟು ಹೆಚ್ಚಳವಾಗಿದೆ.
ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 83 ಶತಕೋಟಿ ಡಾಲರ್ ನಿಂದ ಈ ಬಾರಿ 116 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಈ ಮೂಲಕ 100 ಶತಕೋಟಿ ಡಾಲರ್ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಏಷ್ಯದ ವ್ಯಕ್ತಿಯಾಗಿದ್ದಾರೆ. ಮುಖೇಶ್ ಅಂಬಾನಿ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನಗಳಿಸಿದ್ದಾರೆ. ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲನೆಯವರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: Mukesh Ambani: 100 ಶತಕೋಟಿ ಡಾಲರ್ ಕ್ಲಬ್ ಸೇರಿದ ಅಂಬಾನಿ; ಮತ್ತೆ ಏಷ್ಯಾದ ಶ್ರೀಮಂತ ಗರಿ!
ಶತಕೋಟಿ ಡಾಲರ್ ಕ್ಲಬ್ ಗೆ ಅಂಬಾನಿ ಸೇರ್ಪಡೆ
ಉದ್ಯಮಿ ಮುಖ್ಯಸ್ಥ ಮುಕೇಶ್ ಅಂಬಾನಿ ಇತ್ತೀಚೆಗಷ್ಟೇ 100 ಶತಕೋಟಿ ಡಾಲರ್ ಕ್ಲಬ್ ಸೇರಿದ್ದರು. ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿ ಕೊಂಡಿದ್ದ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಮುಕೇಶ್ ಅಂಬಾನಿ ಈ ಸ್ಥಾನ ಪಡೆದಿದ್ದರು. ಇತ್ತೀಚೆಗೆ ರಿಲಯನ್ಸ್ ಕಂಪೆನಿಯು ಹೆಚ್ಚು ಲಾಭ ಗಳಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಮುಕೇಶ್ ಅಂಬಾನಿ ಅವರು 2021ರಲ್ಲಿಯೇ 100 ಶತಕೋಟಿ ಡಾಲರ್ ಆಸ್ತಿ ಹೊಂದಿದ ಉದ್ಯಮಿ ಎನಿಸಿದ್ದರು. ಆದರೆ, ನಂತರದಲ್ಲಿ ಅವರ ಆಸ್ತಿಯ ಮೌಲ್ಯ ಕುಸಿದಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ 2005ರಲ್ಲಿ ಚಿಲ್ಲರೆ (ರೀಟೇಲ್) ವಲಯವನ್ನು ಪ್ರವೇಶಿಸಿತು ಮತ್ತು ಈಗ ದೇಶದಲ್ಲಿ ಕಿರಾಣಿ ಅಂಗಡಿಗಳು, ಹೈಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರದ ಅತಿದೊಡ್ಡ ಆಪರೇಟರ್ ಆಗಿದೆ. 2016ರಲ್ಲಿ ಇದು ಟೆಲಿಕಾಂ ಸೇವೆ ಜಿಯೋವನ್ನು ಪ್ರಾರಂಭಿಸಿತು, ಇದು ಶೀಘ್ರವಾಗಿ ಭಾರತದಲ್ಲಿ ಅತಿದೊಡ್ಡ ಆಪರೇಟರ್ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆಪರೇಟರ್ ಆಯಿತು. ಇವತ್ತಿಗೆ ರಿಲಯನ್ಸ್ ಹೊಸ ಇಂಧನ ವ್ಯವಹಾರಗಳಿಗಾಗಿ ಗಿಗಾ-ಸ್ಕೇಲ್ (ಬೃಹತ್ ಪ್ರಮಾಣದ) ಕಾರ್ಖಾನೆಗಳನ್ನು ನಿರ್ಮಿಸುತ್ತಿದೆ ಮತ್ತು ಹಣಕಾಸು ಸೇವೆ ಕ್ಷೇತ್ರದಲ್ಲೂ ಮುನ್ನುಗ್ಗಿದೆ.
ಎರಡನೇ ಸ್ಥಾನದಲ್ಲಿ ಗೌತಮ್ ಅದಾನಿ
ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದು, ಅವರ ಸಂಪತ್ತಿನ ಮೌಲ್ಯ 36.8 ಶತಕೋಟಿ ಡಾಲರ್. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅವರು 17 ಸ್ಥಾನದಲ್ಲಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಸಾವಿತ್ರಿ ಜಿಂದಾಲ್ ಆಗಿದ್ದು, ಇವರು ಈಗ ಭಾರತದ ನಾಲ್ಕನೇ ಶ್ರೀಮಂತರಾಗಿದ್ದಾರೆ. ಕಳೆದ ವರ್ಷ ಇವರು ಆರನೇ ಸ್ಥಾನದಲ್ಲಿದ್ದರು.
ಈ ಬಾರಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 25 ಹೊಸ ಭಾರತೀಯ ಬಿಲಿಯನೇರ್‌ಗಳು ಸೇರ್ಪಡೆಯಾಗಿದ್ದಾರೆ. ಇವರಲ್ಲಿ ನರೇಶ್ ಟ್ರೆಹಾನ್, ರಮೇಶ್ ಕುಂಞಿಕಣ್ಣನ್ ಮತ್ತು ರೇಣುಕಾ ಜಗ್ತಿಯಾನಿ ಸೇರಿದ್ದಾರೆ. ದಿವಾಳಿಯಾಗಿರುವ ಬೈಜು ರವೀಂದ್ರನ್ ಮತ್ತು ರೋಹಿಕಾ ಮಿಸ್ತ್ರಿ ಅವರನ್ನು ಈ ಬಾರಿ ಕೈಬಿಡಲಾಗಿದೆ.
ಭಾರತದ 10 ಶ್ರೀಮಂತ ವ್ಯಕ್ತಿಗಳು ಮತ್ತು ಅವರ ಸಂಪತ್ತು ಡಾಲರ್ ನಲ್ಲಿ
ಮುಕೇಶ್ ಅಂಬಾನಿ- 116 ಬಿಲಿಯನ್
ಗೌತಮ್ ಅದಾನಿ- 84 ಬಿಲಿಯನ್
ಶಿವ ನಾಡಾರ್- 36.9 ಬಿಲಿಯನ್
ಸಾವಿತ್ರಿ ಜಿಂದಾಲ್- 33.5 ಬಿಲಿಯನ್
ದಿಲೀಪ್ ಶಾಂಘ್ವಿ- 26.7 ಬಿಲಿಯನ್
ಸೈರಸ್ ಪೂನಾವಲ್ಲಾ- 21.3 ಬಿಲಿಯನ್
ಕುಶಾಲ್ ಪಾಲ್ ಸಿಂಗ್- 20.9 ಬಿಲಿಯನ್
ಕುಮಾರ್ ಬಿರ್ಲಾ – 19.7 ಬಿಲಿಯನ್
ರಾಧಾಕಿಶನ್ ದಮಾನಿ- 17.6 ಬಿಲಿಯನ್
ಲಕ್ಷ್ಮಿ ಮಿತ್ತಲ್- 16.4 ಬಿಲಿಯನ್