ವಾಷಿಂಗ್ಟನ್: ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಹೂಡಿಕೆದಾರರೊಡನೆ ಮಾತುಕತೆಯ ವೇಳೆ, ಒಂದೊಮ್ಮೆ ತಾವು ಟ್ವಿಟರ್ ಅನ್ನು ಖರೀದಿಸಿದರೆ, 75% ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ವರದಿಯ ನಡುವೆ ಟ್ವಿಟರ್ (Twitter) ನೀಡಿರುವ ಹೇಳಿಕೆಯೊಂದರಲ್ಲಿ, ವ್ಯಾಪಕ ಉದ್ಯೋಗ ಕಡಿತದ ಪ್ರಸ್ತಾವ ತನ್ನ ಮುಂದಿಲ್ಲ ಎಂದು ತಿಳಿಸಿದೆ.
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ಮಸ್ಕ್ ಟ್ವಿಟರ್‌ನ ಮಾಲೀಕರಾದರೆ ಸಾಮೂಹಿಕ ಉದ್ಯೋಗ ಕಡಿತ ಸಂಭವಿಸಲಿದೆ. ಟ್ವಿಟರ್ ಈಗ 7,500 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 75% ಎಂದರೆ 5625 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಆದರೆ ಟ್ವಿಟರ್ ಈ ಬಗ್ಗೆ ಕಂಪನಿಯ ಉದ್ಯೋಗಿಗಳಿಗೆ ಇ-ಮೇಲ್ ರವಾನಿಸಿದೆ. ಹಾಗೂ ಸಾಮೂಹಿಕ ಉದ್ಯೋಗ ಕಡಿತ ಇಲ್ಲ ಎಂಬ ಭರವಸೆ ನೀಡಿದೆ ಎಂದು ವರದಿಯಾಗಿದೆ. ಹೀಗಿದ್ದರೂ, ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತಕ್ಕೆ ಕಂಪನಿ ಮುಂದಾಗುವ ಸಾಧ್ಯತೆ ಇದೆ ಎಂಬ ಆತಂಕ ಸೃಷ್ಟಿಯಾಗಿದೆ.
ಈ ಹಿಂದೆ ಟ್ವಿಟರ್ ಖರೀದಿಯ ಪ್ರಸ್ತಾಪದಿಂದ ಹಿಂದೆ ಸರಿದಿದ್ದ ಎಲಾನ್ ಮಸ್ಕ್ ಇತ್ತೀಚೆಗೆ, ಮೂಲ ಒಪ್ಪಂದದ ಪ್ರಕಾರ ಖರೀದಿಗೆ ಸಿದ್ಧರಿರುವುದಾಗಿ ಹೇಳಿದ್ದರು.