Site icon Vistara News

Mutual Fund SIP : ಮ್ಯೂಚುವಲ್‌ ಫಂಡ್‌ನಲ್ಲಿ ಪ್ರತಿಯೊಂದು ಸಿಪ್‌ ಕೂಡ ಅಷ್ಟೇ ಮುಖ್ಯ

RBI

ಮಾರುಕಟ್ಟೆ ದುರ್ಬಲವಾಗಿದ್ದಾಗ ನಿಮ್ಮ ಮ್ಯೂಚುವಲ್‌ ಫಂಡ್‌ ಸಿಪ್‌ ಅತ್ಯಂತ ಪರಿಣಾಮಕಾರಿಯಾಗಿ ಇರುತ್ತದೆ. (Mutual Fund SIP ) ಏಕೆಂದರೆ ಯುನಿಟ್‌ಗಳ ಸಂಖ್ಯೆ ಹೆಚ್ಚುತ್ತದೆ. ಇಲ್ಲೊಂದು ಉದಾಹರಣೆಯನ್ನು ನಾವೀಗ ನೋಡೋಣ.

ಎ ಮತ್ತು ಬಿ ಎಂಬ ಎರಡು ವ್ಯಕ್ತಿಗಳನ್ನು ತೆಗೆದುಕೊಳ್ಳೋಣ. ಇವರು ಜನವರಿ 2005ರಿಂದ ಡಿಸೆಂಬರ್‌ 2010 ತನಕ ಮಾಸಿಕ 10,000 ಸಿಪ್‌ ಹೂಡಿಕೆ ಮಾಡಿದ್ದಾರೆ. ಎ ವ್ಯಕ್ತಿ ಮಾರುಕಟ್ಟೆ ಹಿಂದಿನ ತಿಂಗಳಿಗಿಂ 5% ಹೆಚ್ಚಿದ್ದಾಗಲೆಲ್ಲ ಸಿಪ್‌ ಅನ್ನು ಮಿಸ್‌ ಮಾಡುತ್ತಾರೆ. ಆದರೆ ಬಿ ವ್ಯಕ್ತಿ ಸಿಪ್‌ ಅನ್ನು ಮುಂದುವರಿಸುತ್ತಾರೆ. ಎಲ್ಲಿಯೂ ಮಿಸ್‌ ಮಾಡುವುದಿಲ್ಲ. ಅವಧಿಯ ಮುಕ್ತಾಯಕ್ಕೆ ಬಿ ವಾರ್ಷಿಕ 16.12% ರಿಟರ್ನ್‌ನೊಂದಿಗೆ 11.72 ಲಕ್ಷ ರೂ. ಗಳಿಸುತ್ತಾರೆ. ಎ ವ್ಯಕ್ತಿ 16.41% ರಿಟರ್ನ್‌ ಪಡೆದರೂ, ಸಿಗುವ ಮೊತ್ತ 7.95 ಲಕ್ಷ ರೂ. ಇದಕ್ಕೆ ಕಾರಣ ಎ ವ್ಯಕ್ತಿ 24 ಸಲ ಸಿಪ್‌ ಮಿಸ್‌ ಮಾಡಿರುವುದು.

ಮಾರುಕಟ್ಟೆ ಉನ್ನತ ಮಟ್ಟದಲ್ಲಿ ಇದ್ದಾಗ ಸಿಪ್‌ ಅಷ್ಟೊಂದು ಫಲದಾಯಕ ಆಗಿರುವುದಿಲ್ಲ ಎಂಬ ಮಾತು ಪೂರ್ಣ ಸತ್ಯವಲ್ಲ. ದೀರ್ಘಾವಧಿಯ ಸಿಪ್‌ ಕೆಲವು ಯುನಿಟ್‌ಗಳನ್ನು ಅತ್ಯಂತ ಅಗ್ಗದ ದರದಲ್ಲಿ ನೀಡುತ್ತದೆ. ಕೆಲವು ಸಿಪ್‌ಗಳು ದುಬಾರಿಯಾಗುತ್ತವೆ. ಕೆಲವು ಸಾಧಾರಣ ದರಕ್ಕೆ ಸಿಗುತ್ತವೆ. ಆದ್ದರಿಂದ ಯಾತ್ರೆಯ ಮಧ್ಯೆ ಸಿಪ್‌ಗಳನ್ನು ಮಿಸ್‌ ಮಾಡುವುದು ಅಷ್ಟೊಂದು ಸೂಕ್ತವಲ್ಲ.

ದೀರ್ಘಾವಧಿಗೆ ಸಿಪ್‌ಗಳಲ್ಲಿ ಹೂಡಿಕೆಯು ನಿಮ್ಮನ್ನು ಕೋಟ್ಯಧಿಪತಿಯನ್ನಾಗಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. 2005ರ ಆಗಸ್ಟ್‌ 5ರಂದು ಶುರುವಾದ ಆದಿತ್ಯ ಬಿರ್ಲಾ ಸನ್‌ಲೈಫ್‌ ಇಂಡಿಯಾ ಜನ್‌ನೆಕ್ಸ್ಟ್‌ ಫಂಡ್‌ (Aditya Birla sun life India GenNext Fund) ವಾರ್ಷಿಕ 15.20 ಗ್ರೋತ್‌ ರೇಟ್‌ ಅನ್ನು ನೀಡಿದೆ. ಹೀಗಾಗಿ ಒಂದು ವೇಳೆ ಆಗ ಲಂಪ್ಸಮ್‌ ಆಗಿ 10,000 ರೂ. ಹೂಡಿದ್ದರೆ ಈಗ 1.55 ಲಕ್ಷ ರೂ. ಆಗಿರುತ್ತಿತ್ತು. ಪ್ರತಿ ತಿಂಗಳು 10,000 ರೂ. ಸಿಪ್‌ ಹೂಡಿದ್ದರೆ ಈಗ 1.1 ಕೋಟಿ ರೂ. ಆಗಿರುತ್ತಿತ್ತು. 2023ರ ಜೂನ್‌ 30ಕ್ಕೆ ಫಂಡ್‌ ಹೌಸ್‌ 3,855 ಕೋಟಿ ರೂ. ಆಸ್ತಿಯನ್ನು ನಿರ್ವಹಿಸುತ್ತಿದೆ.

ಕಂಪನಿಗಳಲ್ಲಿ ಹಲವಾರು ಉದ್ಯೋಗಿಗಳಿಗೆ ಈ ವರ್ಷ ವೇತನ ಏರಿಕೆ ಅತ್ಯಲ್ಪ ಪ್ರಮಾಣದಲ್ಲಿ ನಡೆದಿದೆ. ವರ್ಷದಿಂದ ವರ್ಷಕ್ಕೆ ವೇತನ ಏರಿಕೆಯಲ್ಲಿ ವ್ಯತ್ಯಾಸ ಇರುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮೂಲಕ ನಿಮ್ಮ ವೇತನ ಏರಿಕೆ ಆಗದಿದ್ದರೂ ಆದಾಯ ಏರಿಸಬಹುದು ಎನ್ನುತ್ತಾರೆ ತಜ್ಞರು.

ನೀವು ಸಿಪ್‌ ಹೇಗೆ ದೊಡ್ಡ ಮೊತ್ತ ಕೊಡುತ್ತದೆ ಎಂಬುದಕ್ಕೆ ಈ ಉದಾಹರಣೆ ಗಮನಿಸಿ. ನೀವು ಪ್ರತಿ ತಿಂಗಳು 10,000 ರೂ. ಮಾಸಿಕ ಸಿಪ್‌ ಹೂಡಿಕೆ ಮಾಡಿದರೆ, 32 ವರ್ಷ ಮತ್ತು 11 ತಿಂಗಳುಗಳಲ್ಲಿ 5 ಕೋಟಿ ರೂ. ಗಳಿಸುತ್ತೀರಿ. ಆದರೆ ವಾರ್ಷಿಕ ರಿಟರನ್‌ 12% ಸಿಗಬೇಕು. ಆದರೆ ಸಿಪ್‌ ಮೊತ್ತವನ್ನು ಪ್ರತಿ ವರ್ಷ 5% ಏರಿಸಿದರೆ 24 ವರ್ಷದಲ್ಲಿ ಈ ಗುರಿ ಸಾಧಿಸಬಹುದು.

ಮಕ್ಕಳ ವಿದ್ಯಾಭ್ಯಾಸ, ವಿವಾಹ, ವಿದೇಶ ಪ್ರವಾಸ, ಇಳಿ ವಯಸ್ಸಿನ ಆರ್ಥಿಕ ಭದ್ರತೆ ಸಲುವಾಗಿ ಮ್ಯೂಚುವಲ್‌ ಸಿಪ್‌ ಮೂಲಕ ಹೂಡಿಕೆ ಮಾಡಬಹುದು. ಉದಾಹರಣೆಗೆ ನಿಮ್ಮ ಮಗುವಿನ ವಯಸ್ಸು 5 ವರ್ಷ ಎಂದಿಟ್ಟುಕೊಳ್ಳಿ. ಸುಮಾರು 13 ವರ್ಷಗಳಲ್ಲಿ ಕಾಲೇಜು ಶಿಕ್ಷಣ ಪಡೆಯಬಹುದು. ಇಂಥ ಸಂದರ್ಭ ಈಗಲೇ ಪ್ರತಿ ತಿಂಗಳು ಸಿಪ್‌ ಹೂಡಿಕೆ ಶುರು ಮಾಡಿದರೆ ಪ್ರಯೋಜನವಾದೀತು.

Exit mobile version