Site icon Vistara News

Mutual funds : ಮ್ಯೂಚುವಲ್‌ ಫಂಡ್‌ ಹೂಡಿಕೆ ಯಾರಿಗೆ ಅಗತ್ಯ, ವಿಧಗಳೆಷ್ಟು?

Mutual fund

ಅನೇಕ ಮಂದಿ ನೇರವಾಗಿ ಷೇರುಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ( Mutual funds ) ಮಾಡಲು ಬಯಸುವುದಿಲ್ಲ. ಸ್ಟಾಕ್‌ಗಳು ಮತ್ತು ಬಾಂಡ್‌ಗಳಲ್ಲಿ ಲಾಭ ಇದೆ ಎಂದು ಗೊತ್ತಿದ್ದರೂ, ಅದು ಹೇಗೆ ಎಂಬುದು ಕರಗತವಾಗಿರುವುದಿಲ್ಲ. ಅವರಿಗೆ ಮಾರುಕಟ್ಟೆ ಮತ್ತು ಕಂಪನಿಗಳ ಫಂಡಮೆಂಟಲ್‌ ಅನಾಲಿಸಿಸ್‌ ನಡೆಸಲು ಬಗ್ಗೆ ಅಧ್ಯಯನ ಮಾಡಲು ಸಮಯದ ಅಭಾವವೂ ಇರಬಹುದು. ಅಂಥ ಮಂದಿ ಮ್ಯೂಚುವಲ್‌ ಫಂಡ್‌ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಬಹುದು.

ಭಾರಿ ಸಂಖ್ಯೆಯಲ್ಲಿ ನಾಗರಿಕರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ, ಬಾಂಡ್‌ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗೆ ಸಂಗ್ರಹವಾಗುವ ಹಣವನ್ನು ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು ನಡೆಸುವ ವೃತ್ತಿಪರ ಮ್ಯಾನೇಜರ್‌ಗಳು ಸ್ಟಾಕ್ಸ್‌, ಬಾಂಡ್‌ಗಳು, ಮನಿ ಮಾರ್ಕೆಟ್‌ ಇನ್‌ಸ್ಟ್ರುಮೆಂಟ್ಸ್‌ ಇತ್ಯಾದಿ ಸಾಧನಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೀಗೆ ಹಣವನ್ನು ನಿರ್ವಹಿಸಲು ಸಣ್ಣ ಶುಲ್ಕವನ್ನು ಮ್ಯೂಚುವಲ್‌ ಫಂಡ್‌ ಹೌಸ್‌ ಗಳು ಹೂಡಿಕೆದಾರರಿಂದ ಸಂಗ್ರಹಿಸುತ್ತವೆ. ದೊಡ್ಡ ಮೊತ್ತದ ಹಣ ಸಂಗ್ರಹವಾಗುವುದರಿಂದ ಫಂಡ್‌ ಹೌಸ್‌ ಗಳು ತಮ್ಮದೇ ಆದ ಹಣಕಾಸು ತಜ್ಞರನ್ನು ನೇಮಿಸುತ್ತದೆ. ಹೂಡಿಕೆಯನ್ನು ಯಾವ ಕ್ಷೇತ್ರದಲ್ಲಿ ಮಾಡಬಹುದು ಎಂಬ ಸಲಹೆಯನ್ನು ಈ ಹಣಕಾಸು ತಜ್ಞರು ನೀಡುತ್ತಾರೆ. ಮ್ಯೂಚುವಲ್‌ ಫಂಡ್‌ ಹೌಸ್‌ಗಳು ಸಾಮಾನ್ಯವಾಗಿ 1.5%-2.5% ಶ್ರೇಣಿಯಲ್ಲಿ ಶುಲ್ಕವನ್ನು ಹೂಡಿಕೆದಾರರಿಂದ ಪಡೆಯುತ್ತವೆ. ಇದನ್ನು ಎಕ್ಸ್‌ಪೆನ್ಸ್‌ ರೇಶಿಯೊ ಎಂದು ಕರೆಯುತ್ತಾರೆ.

ಕಂಪನಿಗಳ ಷೇರುಗಳು ಇರುವಂತೆ ಮ್ಯೂಚುವಲ್‌ ಫಂಡ್‌ಗಳಲ್ಲಿ ಯುನಿಟ್‌ಗಳು ಇರುತ್ತವೆ. ನೆಟ್‌ ಅಸೆಟ್‌ ವಾಲ್ಯೂ ( NAV) ಎಂದರೆ ಮ್ಯೂಚುವಲ್‌ ಫಂಡ್‌ನ ಪ್ರತಿ ಯುನಿಟ್‌ನ ಮಾರುಕಟ್ಟೆ ಮೌಲ್ಯ. ಮ್ಯೂಚುವಲ್‌ ಫಂಡ್‌ ಯೋಜನೆಯ ಒಟ್ಟು ಮೊತ್ತದಲ್ಲಿ ದಿನ ನಿತ್ಯದ ನಿರ್ಹಣೆಯ ಖರ್ಚುಗಳನ್ನು ಕಳೆದ ನಂತರ ಸಿಗುವ ಮೊತ್ತವನ್ನು ಯುನಿಟ್‌ಗಳಿಂದ ಭಾಗಿಸಿದಾಗ ಸಿಗುವ ಉತ್ತರವೇ ನೆಟ್‌ ಅಸೆಟ್‌ ವಾಲ್ಯೂ. ಮಾರುಕಟ್ಟೆ ಇರುವ ಪ್ರತಿ ದಿನವೂ ಎನ್‌ಎವಿ ಲೆಕ್ಕಾಚಾರ ನಡೆಯುತ್ತದೆ. ಭಿನ್ನ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ಭಿನ್ನ ಎನ್‌ಎವಿಯನ್ನು ಒಳಗೊಂಡಿರುತ್ತವೆ. ಈ ಎನ್‌ಎವಿ ಮ್ಯೂಚುವಲ್‌ ಫಂಡ್‌ ಹೌಸ್‌ನ ಪರ್ಫಾಮೆನ್ಸ್‌ಗೆ ಸೂಚಕವಲ್ಲ. ಉದಾಹರಣೆಗೆ 10 ರೂ. ಎನ್‌ಎವಿ ಇರುವ ಮ್ಯೂಚುವಲ್‌ ಫಂಡ್‌, 100 ರೂ. ಎನ್‌ಎವಿ ಇರುವ ಮ್ಯೂಚುವಲ್‌ ಫಂಡ್‌ಗೆ ಕಡಿಮೆ ಇರದಂತೆ ಲಾಭ ಗಳಿಸಿರಬಹುದು.

ಇದನ್ನೂ ಓದಿ: Anna Bhagya: ಅನ್ನಭಾಗ್ಯದ ದುಡ್ಡು ಬಂದಿಲ್ಲವೇ? ಈ ತಿಂಗಳಿಂದ 2ನೇ ಯಜಮಾನರ ಖಾತೆಗೆ ಆಗಲಿದೆ ಜಮೆ

ಮ್ಯೂಚುವಲ್‌ ಫಂಡ್‌ ವಿಧಗಳು: ಭಾರತದಲ್ಲಿ ಸೆಕ್ಯುರಿಟೀಸ್‌ & ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ (ಸೆಬಿ) ಮ್ಯೂಚುವಲ್‌ ಫಂಡ್‌ ಗಳನ್ನು ವಿಶಾಲಾರ್ಥದಲ್ಲಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ.

  1. 1. ಈಕ್ವಿಟಿ ಮ್ಯೂಚುವಲ್‌ ಫಂಡ್:‌ ಈ ಮ್ಯೂಚುವಲ್‌ ಫಂಡ್‌ ಗಳು ನೇರವಾಗಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಷೇರು ಮಾರುಕಟ್ಟೆಗಳಲ್ಲಿ ಏರಿಳಿತಗಳು ಇರುವುದರಿಂದ ಹೈ ರಿಸ್ಕ್‌, ಹೈ ರಿಟರ್ನ್‌ ಸ್ಕೀಮ್‌ ಇದಾಗಿದೆ. ಐದು ವರ್ಷಕ್ಕೂ ಹೆಚ್ಚು ದೀರ್ಘಾವಧಿಗೆ ಹೂಡಿಕೆ ಮಾಡಲು ಇದು ಪ್ರಶಸ್ತವೆನಿಸಿವೆ.
  2. 2. ಡೆಟ್‌ ಮ್ಯೂಚುವಲ್‌ ಫಂಡ್‌ : ಈ ಮ್ಯೂಚುವಲ್‌ ಫಂಡ್‌ಗಳು ಡೆಟ್‌ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಇವುಗಳು ಸ್ಥಿರ ಮತ್ತು ಸೇಫ್‌ ಎನ್ನಿಸಿವೆ. ಐದು ವರ್ಷಕ್ಕಿಂತ ಕಡಿಮೆ ಅವಧಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಸೂಕ್ತ.
  3. 3. ಹೈಬ್ರಿಡ್‌ ಮ್ಯೂಚುವಲ್‌ ಫಂಡ್:‌ ಈ ಮ್ಯೂಚುವಲ್‌ ಫಂಡ್‌ಗಳು ಡೆಟ್‌ ಮತ್ತು ಈಕ್ವಿಟಿ ಎರಡರಲ್ಲೂ ಹೂಡಿಕೆ ಮಾಡುತ್ತವೆ. ಅಪ್ಪಟ ಡೆಟ್‌ ಫಂಡ್‌ಗಿಂತ ಹೆಚ್ಚು ಆದಾಯವನ್ನು ಹೈಬ್ರಿಡ್‌ ಮ್ಯೂಚುವಲ್‌ ಫಂಡ್‌ಗಳು ನೀಡುತ್ತವೆ.
  4. 4. ಸಲ್ಯೂಷನ್ ಓರಿಯೆಂಟೆಡ್‌ ಮ್ಯೂಚುವಲ್‌ ಫಂಡ್:‌ ಈ ಮ್ಯೂಚುವಲ್‌ ಫಂಡ್‌ಗಳು ಮಕ್ಕಳ ಶಿಕ್ಷಣ, ನಿವೃತ್ತಿ ಕಾಲದ ಆರ್ಥಿಕ ಭದ್ರತೆ ಇತ್ಯಾದಿ ನಿರ್ದಿಷ್ಟ ಉದ್ದೇಶಗಳಿಗೆ ಬಳಕೆಯಾಗುತ್ತವೆ. ಈ ಸ್ಕೀಮ್‌ಗಳು ಸಾಮಾನ್ಯವಾಗಿ 5 ವರ್ಷಗಳ ಲಾಕ್‌ ಇನ್‌ ಅವಧಿಯನ್ನು ಹೊಂದಿರುತ್ತವೆ.

Exit mobile version