Site icon Vistara News

National Highways : 2022-23ರಲ್ಲಿ ದಿನಕ್ಕೆ ಸರಾಸರಿ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ

Bangalore mysore highway

#image_title

ನವ ದೆಹಲಿ: ಕಳೆದ 2022-23ರಲ್ಲಿ ದೇಶದಲ್ಲಿ 10,993 ಕಿಲೋ ಮೀಟರ್‌ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (National Highways) ಅಂಕಿ ಅಂಶಗಳು ತಿಳಿಸಿವೆ. ಸರಕಾರದ ಗುರಿಯಾಗಿದ್ದ 12,500 ಕಿ.ಮೀಗೆ ಹೋಲಿಸಿದರೆ ಕಡಿಮೆಯಾಗಿದೆ. ಹೀಗಿದ್ದರೂ, ದಿನಕ್ಕೆ ಸರಾಸರಿ 30 ಕಿ.ಮೀ ಹೆದ್ದಾರಿ ನಿರ್ಮಾಣವಾಗಿದೆ.

ಕಳೆದ 2019-20ರಲ್ಲಿ 10,237 ಕಿ.ಮೀ ದೂರದ ಹೆದ್ದಾರಿಯನ್ನು ರಚಿಸಲಾಗಿತ್ತು. 2020-21ರಲ್ಲಿ 13,327 ಕಿ.ಮೀ, 2021-22ರಲ್ಲಿ 10,457 ಕಿ.ಮೀ ಹೆದ್ದಾರಿಯನ್ನು ರಚಿಸಲಾಗಿತ್ತು.

ನ್ಯಾಶನಲ್‌ ಹೈವೇಸ್‌ ಅಥಾರಿಟಿ ಆಫ್‌ ಇಂಡಿಯಾ, ನ್ಯಾಶನಲ್‌ ಹೈವೇಸ್‌ & ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ದೇಶದಲ್ಲಿ ಹೆದ್ದಾರಿಗಳನ್ನು ನಿರ್ಮಿಸುವ ಪ್ರಮುಖ ಜವಾಬ್ದಾರಿಯನ್ನು ವಹಿಸಿವೆ.

ಸರ್ಕಾರ ಮುಂದಿನ 6 ತಿಂಗಳಲ್ಲಿ ಹೆದ್ದಾರಿಗಳಲ್ಲಿ ಈಗಿನ ಟೋಲ್‌ ಪ್ಲಾಜಾ (Toll plaza) ಬದಲಿಗೆ ಜಿಪಿಎಸ್‌ ಆಧರಿತ ಟೋಲ್‌ ವ್ಯವಸ್ಥೆಯನ್ನು (GPS-based toll colletction) ಅಳವಡಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಇತ್ತೀಚೆಗೆ ತಿಳಿಸಿದ್ದಾರೆ.

ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು, ಮೋಟಾರು ವಾಹನಗಳಿಗೆ ಸಂಚರಿಸಿದಷ್ಟೇ ದೂರದ ಲೆಕ್ಕದಲ್ಲಿ ನಿಖರವಾಗಿ ಶುಲ್ಕ ನಿಗದಿಪಡಿಸಲು ಜಿಪಿಎಸ್‌ ಆಧರಿತ ಟೋಲ್‌ ಸಂಗ್ರಹ ಪದ್ಧತಿ ಸಹಕಾರಿಯಾಗಲಿದೆ ಎಂದು ಗಡ್ಕರಿ ತಿಳಿಸಿದರು. ಎನ್‌ಎಚ್‌ಎಐ ಈಗ 40,000 ಕೋಟಿ ರೂ. ಕಂದಾಯ ಸಂಗ್ರಹಿಸುತ್ತಿದೆ. ಇದು 2-3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ವಿವರಿಸಿದರು.

ಇನ್ನು ಆರು ತಿಂಗಳುಗಳಲ್ಲಿ ದೇಶದಲ್ಲಿನ ಹೆದ್ದಾರಿಗಳಲ್ಲಿನ ಎಲ್ಲ ಟೋಲ್‌ ಪ್ಲಾಜಾಗಳನ್ನು ತೆರವುಗೊಳಿಸಿ, ಜಿಪಿಎಸ್‌ ಆಧರಿತ ಟೋಲ್‌ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದರು. 2018-19ರಲ್ಲಿ ಟೋಲ್‌ ಪ್ಲಾಜಾಗಳಲ್ಲಿ ವಾಹನಗಳಿಗೆ ಕಾಯುವ ಅವಧಿ 8 ನಿಮಿಷಗಳಾಗಿತ್ತು. ಈಗ 47 ಸೆಕೆಂಡ್‌ಗೆ ಇಳಿಕೆಯಾಗಿದೆ ಎಂದಿದ್ದಾರೆ.

Exit mobile version