ನವದೆಹಲಿ: ದೇಶಕ್ಕೆ ದೇಶವೇ ಹೊಸ ಹಣಕಾಸು ವರ್ಷಕ್ಕೆ (New Financial Year) ಕಾಲಿಡುತ್ತಿದೆ. ಇನ್ನು, ಕಳೆದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಘೋಷಿಸಿದಂತೆ ಏಪ್ರಿಲ್ 1ರಿಂದ ತೆರಿಗೆ ನಿಯಮಗಳಲ್ಲಿ ಭಾರಿ ಬದಲಾವಣೆಗಳು ಆಗಲಿವೆ. ಹೊಸ ತೆರಿಗೆ ನಿಯಮಗಳು (New Tax Rules) ಸೋಮವಾರದಿಂದಲೇ ಜಾರಿಗೆ ಬರಲಿವೆ. ಹಾಗಾದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ? ತೆರಿಗೆ ವಿನಾಯಿತಿ ಮೊತ್ತ ಎಷ್ಟು? ಎಷ್ಟು ಗಳಿಕೆಗೆ ಎಷ್ಟು ತೆರಿಗೆ ಕಡಿತವಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ತಿಳಿದುಕೊಳ್ಳಬೇಕಾದ ಸಿಂಪಲ್ ಅಂಶಗಳು
- ಹೊಸ ತೆರಿಗೆ ನಿಯಮ ಜಾರಿಗೆ ಬಂದರೂ ಹಳೆಯ ತೆರಿಗೆ ಪದ್ಧತಿ ಜಾರಿಯಲ್ಲಿ ಇರಲಿದೆ. ನಮಗೆ ಬೇಕಾದ ತೆರಿಗೆ ಪದ್ಧತಿಯನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು
- ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೂ 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್ ಇರಲಿದೆ. ಇದು ಹಳೆಯ ಹಾಗೂ ಹೊಸ ಪದ್ಧತಿಗೂ ಅನ್ವಯವಾಗಲಿದೆ
- 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಇರುವವರಿಗೆ ಹೊಸ ತೆರಿಗೆ ಪದ್ಧತಿ ಅನ್ವಯ ಸರ್ಚಾರ್ಜ್ಅನ್ನು ಶೇ.37ರಿಂದ 25ಕ್ಕೆ ಇಳಿಕೆ ಮಾಡಲಾಗಿದೆ
ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್ ಹೀಗಿದೆ
ಆದಾಯ | ವಿಧಿಸುವ ತೆರಿಗೆ |
0-3 ಲಕ್ಷ ರೂ. | ತೆರಿಗೆ ಇರಲ್ಲ |
3-6 ಲಕ್ಷ ರೂ. | 5% |
6-9 ಲಕ್ಷ ರೂ. | 10% |
9-12 ಲಕ್ಷ ರೂ. | 15% |
12-15 ಲಕ್ಷ ರೂ. | 20% |
15 ಲಕ್ಷ ರೂ.ಗಿಂತ ಹೆಚ್ಚು | 30% |
ಹೊಸ ತೆರಿಗೆ ಎಂದರೆ ಇಷ್ಟೇ…
ಹೊಸ ತೆರಿಗೆ ಪದ್ಧತಿಯಲ್ಲಿ ಗರಿಷ್ಠ ಎಂದರೆ, 7.5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ. 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಇನ್ನು, 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಸೇರಿ 7.5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಪಾವತಿಸಬೇಕಿಲ್ಲ. ಆದರೆ, 7.51 ಲಕ್ಷ ರೂ. ಆದಾಯ ನಿಮ್ಮದಿದ್ದರೆ, ನೀವು ಇಡೀ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಹಾಗಾಗಿ, 7.5 ಲಕ್ಷ ರೂ.ಗಿಂತ ಹೆಚ್ಚು ಸಂಬಳ ಇರುವವರು ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಲು ಒಮ್ಮೆ ಯೋಚಿಸಬೇಕು.
ಹಳೆಯ ತೆರಿಗೆಯ ಡಿಡಕ್ಷನ್‌ಗಳು ಏನೇನು?
ಹಳೆಯ ತೆರಿಗೆ ಪದ್ಧತಿಯಲ್ಲಿ ಹಲವು ಡಿಡಕ್ಷನ್‌ಗಳ ಲಾಭ ಪಡೆಯಬಹುದಾದ ಕಾರಣ ಹೆಚ್ಚಿನ ಆದಾಯ ಇರುವವರು ಈಗಲೂ ಇದೇ ಒಳ್ಳೆಯದು ಎಂದು ಅಭಿಪ್ರಾಯಪಡುತ್ತಿದ್ದಾರೆ. ಹಳೆಯ ತೆರಿಗೆ ಪದ್ಧತಿಯ 80C ಅಡಿಯಲ್ಲಿ ಹೂಡಿಕೆ ಮಾಡಿದ್ದರೆ 1.5 ಲಕ್ಷ ರೂ.ವರೆಗೆ ಡಿಡಕ್ಷನ್ ಪಡೆಯಬಹುದು. ಇನ್ನು ಜೀವ ವಿಮಾ ಹೂಡಿಕೆಯಲ್ಲಿ 1.5 ಲಕ್ಷ ರೂ., ಹೆಂಡತಿ-ಮಕ್ಕಳಿಗೆ ಆರೋಗ್ಯ ವಿಮೆ ಮಾಡಿಸಿದ್ದರೆ 25 ಸಾವಿರ ರೂ. ಡಿಡಕ್ಷನ್‌ನ ಲಾಭ ಪಡೆಯಬಹುದು. 60 ವರ್ಷ ದಾಟಿದ ಮನೆಯ ಹಿರಿಯರಿಗೆ ವಿಮೆ ಮಾಡಿಸಿದ್ದರೂ 50 ಸಾವಿರ ರೂ. ಡಿಡಕ್ಷನ್ ಇರಲಿದೆ. ಸ್ಡಾಂಡರ್ಡ್ ಡಿಡಕ್ಷನ್ ಕೂಡ 50 ಸಾವಿರ ರೂ. ಇರಲಿದೆ.
ಇದನ್ನೂ ಓದಿ: Money Guide: ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಎಷ್ಟು ಬಗೆಯ ಫಾರ್ಮ್‌ಗಳಿವೆ? ನಿಮಗೆ ಯಾವುದು ಸೂಕ್ತ? ಚೆಕ್ ಮಾಡಿ
ಜೀವ ವಿಮಾ ತೆರಿಗೆ ನಿಯಮ ಬದಲು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿರುವ ಪ್ರಕಾರ, ಏಪ್ರಿಲ್ 1, 2023ರಂದು ಅಥವಾ ನಂತರ ವಿತರಿಸಲಾದ ಜೀವ ವಿಮಾ ಪಾಲಿಸಿಗಳ ಮೆಚ್ಯೂರಿಟಿ ಆದಾಯ ಮತ್ತು ಒಟ್ಟು ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅದು ತೆರಿಗೆಗೆ ಒಳಪಟ್ಟಿರುತ್ತದೆ. ಸರ್ಕಾರೇತರ ಉದ್ಯೋಗಿಗಳಿಗೆ ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 2022ರಿಂದ 3 ಲಕ್ಷ ರೂ.ಗಳಿಂದ ಈಗ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ