Site icon Vistara News

ವಿಸ್ತಾರ Explainer | ಶ್ರೀಲಂಕಾ ಮಾತ್ರವಲ್ಲ, ದಿವಾಳಿಯಂಚಿಗೆ ಡಜನ್‌ಗಟ್ಟಲೆ ರಾಷ್ಟ್ರಗಳ ಪತನ

currency

ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿಯ ದುಸ್ಥಿತಿ ಮತ್ತು ನಾಗರಿಕರ ದಂಗೆ ಸುದ್ದಿಯಲ್ಲಿದೆ. ಪ್ರತಿ ದಿನ ಅಲ್ಲಿ ಪೆಟ್ರೋಲ್-ಡೀಸೆಲ್‌, ಆಹಾರ, ವಸತಿಗೆ ಜನರ ಪರದಾಟ, ರಾಜಕೀಯ ಕಲಹ, ಎಲ್ಲಕ್ಕೂ ಮಿಗಿಲಾಗಿ ನಾಗರಿಕರ ಆಕ್ರೋಶ ಸುದ್ದಿಯಲ್ಲಿದೆ. ಆದರೆ ಶ್ರೀಲಂಕಾ ಮಾತ್ರವಲ್ಲದೆ, ಡಜನ್‌ಗಟ್ಟಲೆ ರಾಷ್ಟ್ರಗಳು ಈಗ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ದಿವಾಳಿಯಾಗುವ ಅಪಾಯವನ್ನು ಎದುರಿಸುತ್ತಿವೆ. ಯುರೋಪಿನ ರಾಷ್ಟ್ರಗಳಲ್ಲೂ ಆರ್ಥಿಕ ಬಿಕ್ಕಟ್ಟಿಗೆ ಸರ್ಕಾರಗಳೇ ಉರುಳುತ್ತಿವೆ. ಪ್ರಧಾನಿ, ಹಣಕಾಸು ಮಂತ್ರಿಗಳು ರಾಜೀನಾಮೆ ಕೊಡುತ್ತಿದ್ದಾರೆ!

ಹೆಚ್ಚುತ್ತಿರುವ ಸಾಲದ ಹೊರೆ, ವಿದೇಶಿ ವಿನಿಮಯ ಸಂಗ್ರಹದ ತೀವ್ರ ಕುಸಿತ, ಭಾರಿ ಹಣದುಬ್ಬರ ಮುಂತಾದ ಆರ್ಥಿಕ ಬಿಕ್ಕಟ್ಟನ್ನು ಡಜನುಗಟ್ಟಲೆ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿವೆ. ಈಗಾಗಲೇ ಕೆಲ ದೇಶಗಳು ದಿವಾಳಿಯಾಗಿವೆ. ಉಳಿದವುಗಳು ಸರದಿಯಲ್ಲಿವೆ. ಶ್ರೀಲಂಕಾ, ರಷ್ಯಾ, ಸುರಿನಾಮ್‌ ಮತ್ತು ಜಾಂಬಿಯಾ ದೇಶಗಳು ಈಗಾಗಲೇ ಸಾಲ ಮರು ಪಾವತಿಸುವಲ್ಲಿ ವಿಫಲವಾಗಿದ್ದು, ದಿವಾಳಿಯ ಅಂಚಿನಲ್ಲಿವೆ. ಅರ್ಜೆಂಟೀನಾ, ಈಕ್ವೆಡಾರ್‌ ಮತ್ತು ಈಜಿಪ್ತ್‌ ಕೂಡ ಭಾರಿ ಸಾಲದ ಹೊರೆಯಿಂದ ಬಳಲುತ್ತಿವೆ.

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಗಂಭೀರ

ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಶ್ರೀಲಂಕಾದ ಕರೆನ್ಸಿಯ ಮೌಲ್ಯ ಭಾರಿ ಕುಸಿತಕ್ಕೀಡಾಗಿದೆ. ಮಾರ್ಚ್‌ ೯ರಂದು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಶ್ರೀಲಂಕಾ, ದೇಶದ ಕರೆನ್ಸಿಯನ್ನು ಅಪಮೌಲ್ಯಗೊಳಿಸಿತ್ತು. ಆದರೆ ಅದು ನಿರೀಕ್ಷೆಗೂ ಮೀರಿ ಕುಸಿಯಿತು. ಒಟ್ಟು ೩೫ ಶತಕೋಟಿ ಡಾಲರ್‌ (೨.೭೬ ಲಕ್ಷ ಕೋಟಿ ರೂ.) ವಿದೇಶಿ ಮೂಲದ ಸಾಲವನ್ನು ಶ್ರೀಲಂಕಾ ಹೊಂದಿದೆ. ನಾಗರಿಕ ದಂಗೆಯ ಪರಿಣಾಮ ರಾಜಪಕ್ಸ ಸೋದರರ ಸಾರಥ್ಯದಲ್ಲಿದ್ದ ಸರ್ಕಾರ ಪತನವಾಗಿದೆ.

ಪಾಕಿಸ್ತಾನಕ್ಕೆ ಸಾಲದ ಶೂಲ

ಪಾಕಿಸ್ತಾನ ಅತ್ಯಧಿಕ ಸಾಲ ಮತ್ತು ಹಣದುಬ್ಬರಕ್ಕೆ ತತ್ತರಿಸಿದೆ. ಹಣದುಬ್ಬರ ಕಳೆದ ೧೩ ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಜಿಗಿದಿದೆ. ವಿದೇಶಿ ವಿನಿಮಯ ಸಂಗ್ರಹ ೯.೮ ಶತಕೋಟಿ ಡಾಲರ್‌ಗೆ (೭೭,೪೨೦ ಕೋಟಿ ರೂ.) ಕುಸಿದಿದೆ. ಐಎಂಎಫ್‌ನಿಂದ ಸಾಲ ಪಡೆಯಲು ಪೆಟ್ರೋಲ್ ದರವನ್ನು ‌ಪ್ರತಿ ಲೀಟರ್‌ಗೆ ೨೩೩ ಪಾಕಿಸ್ತಾನಿ ರೂಪಾಯಿಗೆ ಏರಿಸಲಾಗಿದೆ. ಆದಾಯದ ೪೦% ಬಡ್ಡಿ ಕಟ್ಟಲು ಬಳಸುತ್ತಿದೆ.

ಅರ್ಜೆಂಟೀನಾ : ಕಳೆದ ೨೦೦೧ರಿಂದಲೇ ಅರ್ಜೆಂಟೀನಾ ತನ್ನ ೮೨ ಶತಕೋಟಿ ಡಾಲರ್‌ (೬.೪೭ ಲಕ್ಷ ಕೋಟಿ ರೂ. ) ಸಾಲವನ್ನು ಮರು ಪಾವತಿಸುವಲ್ಲಿ ವಿಫಲವಾಗಿದೆ. ೨೦೨೦ರಲ್ಲಿ ಸಾಲದ ಪುನಾರಚನೆಯಾಗಿದ್ದು, ೨೦೨೪ರ ತನಕ ಯಾವುದೇ ವಿದೇಶಿ ಸಾಲ ಪಡೆಯುವ ಸ್ಥಿತಿಯಲ್ಲಿ ಇಲ್ಲ. ಹೀಗಿದ್ದರೂ ಐಎಂಎಫ್‌ನಿಂದ ಹೊಸ ಸಾಲ ಪಡೆಯಲು ಅರ್ಜೆಂಟೀನಾ ಯತ್ನಿಸುತ್ತಿದೆ. ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತಿರುವಂತೆ, ಹಣಕಾಸು ಸಚಿವರಾದ ಮಾರ್ಟಿನ್‌ ಗುಜ್‌ಮನ್‌ ರಾಜೀನಾಮೆ ನೀಡಿದ್ದಾರೆ. ಡೀಸೆಲ್‌ ದರ ಹೆಚ್ಚಳದ ವಿರುದ್ಧ ಭಾರಿ ಪ್ರತಿಭಟನೆ ಅರ್ಜೆಂಟೀನಾದಲ್ಲಿ ನಡೆಯುತ್ತಿದೆ.

ಉಕ್ರೇನ್ ಆರ್ಥಿಕತೆಗೂ ದಾಳಿ: ರಷ್ಯಾದ ಅತಿಕ್ರಮಣದ ಬಳಿಕ ಉಕ್ರೇನ್‌ನ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. 2 ಸಾವಿರ ಕೋಟಿ ಡಾಲರ್‌ (೧.೫೮ ಲಕ್ಷ ಕೋಟಿ ರೂ.) ಸಾಲದ ಪುನಾರಚನೆಗೆ ಉಕ್ರೇನ್‌ ಸಿದ್ಧತೆ ನಡೆಸುತ್ತಿದೆ.

ಈಜಿಪ್ತ್:‌ ಈಜಿಪ್ತ್‌ನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ೯೫%ರಷ್ಟು ಸಾಲ ಇದೆ! ಈ ಬೃಹತ್‌ ಸಾಲದ ನಿರ್ವಹಣೆಯಲ್ಲಿ ಈಜಿಪ್ತ್‌ ವಿಫಲವಾಗಿದೆ.

ಕೀನ್ಯಾ: ಕೀನ್ಯಾ ತನ್ನ ಆದಾಯದಲ್ಲಿ ೩೦% ಅನ್ನು ಸಾಲದ ಬಡ್ಡಿ ಕಟ್ಟಲು ಬಳಸುತ್ತಿದೆ. ಅಪಾರ ಮೊತ್ತದ ಸಾಲ ಪತ್ರಗಳನ್ನು ಅಥವಾ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದ್ದ ಕೀನ್ಯಾ, ಸಾಲದ ಹೊರೆಯಿಂದ ಬಳಲುತ್ತಿದೆ.

ಟುನೀಷಿಯಾ: ಆಫ್ರಿಕಾ ಖಂಡದ ಟುನೀಷಿಯಾ ಭಾರಿ ಸಾಲದ ಕೂಪಕ್ಕೆ ಬಿದ್ದಿದೆ. ಟುನೀಷಿಯಾದ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಬಳ ನೀಡಲಾಗುತ್ತಿದೆ. ಆದರೆ ಆರ್ಥಿಕ ಬಿಕ್ಕಟ್ಟಿಗೆ ಇದೂ ಕಾರಣವಾಗಿದೆ. ೨೦೧೧ರಲ್ಲಿ ನಾಗರಿಕ ದಂಗೆ ಸಂಭವಿಸಿದ ಬಳಿಕ ರಾಜಕೀಯ ಪಕ್ಷಗಳಿಗೆ ಉದ್ಯೋಗ ಸೃಷ್ಟಿ ಆದ್ಯತೆ ಆಯಿತು. ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಅಗತ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಮಂದಿಗೆ ಕೆಲಸ ಕೊಡಲಾಯಿತು. ಆದರೆ ಅದುವೇ ಈಗ ಸಮಸ್ಯೆ ಸೃಷ್ಟಿಸಿದೆ. ವೇತನ ವಿತರಣೆಗೆ ಸರ್ಕಾರಕ್ಕೆ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

ಘಾನಾ: ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಘಾನಾದಲ್ಲಿ ಜಿಡಿಪಿಯ ೮೫% ಸಾಲವಿದೆ. ತೆರಿಗೆ ಸಂಗ್ರಹದಲ್ಲಿ ಅರ್ಧದಷ್ಟು ಪಾಲು ಸಾಲದ ಬಡ್ಡಿ ಪಾವತಿಗೆ ಹೋಗುತ್ತದೆ. ಹಣದುಬ್ಬರ ೩೦% ಮೀರಿದೆ.

ಕೋವಿಡ್-‌೧೯ ಹೊಡೆತ ಮತ್ತು ರಷ್ಯಾ-ಉಕ್ರೇನ್‌ ಸಂಘರ್ಷ ಎಫೆಕ್ಟ್

‌ಕೋವಿಡ್‌-೧೯ ಬಿಕ್ಕಟ್ಟು ಮತ್ತು ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ಅಭಿವೃದ್ಧಿಶೀಲ ಮತ್ತು ಹಿಂದುಳಿದ ರಾಷ್ಟ್ರಗಳು ಭಾರಿ ಸಂಕಷ್ಟ ಎದುರಿಸುತ್ತಿವೆ. ಉಕ್ರೇನ್‌ನಲ್ಲಿ ರಷ್ಯಾ ದಾಳಿಯ ಪರಿಣಾಮ ೧.೧ ಕೋಟಿ ಮಂದಿ ಸ್ಥಳಾಂತರವಾಗಿದ್ದಾರೆ. ಲಕ್ಷಗಟ್ಟಲೆ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಐಎಂಎಫ್‌ ತಿಳಿಸಿದೆ. ಜಾಗತಿಕ ಆರ್ಥಿಕತೆಯ ಚೇತರಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬ್ರಿಟನ್ ನಲ್ಲೂ ಬೆಲೆ ಏರಿಕೆಯ ಬಿಸಿ

ಐರೋಪ್ಯ ಒಕ್ಕೂಟದಿಂದ ಹೊರ ಬಂದಿರುವ ಬ್ರಿಟನ್‌ನಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ್ದಾರೆ. ಹೊಸ ಪ್ರಧಾನಿಯ ಆಯ್ಕೆ ಕಸರತ್ತು ಆರಂಭವಾಗಿದೆ. ಈ ನಡುವೆ ಬ್ರಿಟನ್‌ನಲ್ಲಿ ಹಣದುಬ್ಬರ ಕಳೆದ ೪೦ ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಜಾನ್ಸನ್‌ ಅಧಿಕಾರ ಕಳೆದುಕೊಳ್ಳಲು ಹಗರಣಗಳು ಒಂದು ಕಾರಣವಾದರೆ, ಆರ್ಥಿಕತೆ ಹದಗೆಡುತ್ತಿರುವುದು ಮತ್ತೊಂದು ಕಾರಣ.

ಇಟಲಿ ಪ್ರಧಾನಿ ರಾಜೀನಾಮೆ: ಇಟಲಿಯಲ್ಲಿ ಪ್ರಧಾನ ಮಂತ್ರಿ ಮರಿಯೊ ಡ್ರಾಘಿ ರಾಜೀನಾಮೆ ನೀಡಿದ್ದಾರೆ. ೨೦೨೧ರ ಫೆಬ್ರವರಿಯಿಂದ ಮರಿಯೊ ಮೈತ್ರಿಕೂಟ ಸರ್ಕಾರದ ಪ್ರಧಾನಿಯಾಗಿದ್ದರು. ಆದರೆ ಮಿತ್ರಪಕ್ಷ ಬೆಂಬಲ ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಅಧ್ಯಕ್ಷರು ಇನ್ನೂ ರಾಜೀನಾಮೆ ಅಂಗೀಕರಿಸಿಲ್ಲ. ಇಟಲಿ ಕೂಡ ಅತಿಯಾದ ಸಾಲದ ಹೊರೆಯಿಂದ ಬಳಲುತ್ತಿದೆ. ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿದೆ.

ಎಸ್ಟೋನಿಯಾ ಪ್ರಧಾನಿ ರಾಜೀನಾಮೆ: ಯುರೋಪಿನ ಇನ್ನೊಂದು ರಾಷ್ಟ್ರ ಎಸ್ಟೋನಿಯಾದಲ್ಲಿ ಆರ್ಥಿಕ ಹಿಂಜರಿತದ ಭೀತಿ ಉಂಟಾಗಿದೆ. ಹಣದುಬ್ಬರ ೨೨%ಕ್ಕೆ ಏರಿಕೆಯಾಗಿದೆ. ಅಧಿಕ ಇಂಧನ ದರ, ಹಣದುಬ್ಬರ ಸವಾಲಾಗಿ ಪರಿಣಮಿಸಿದೆ. ಎಸ್ಟೋನಿಯಾದಲ್ಲೂ ಪ್ರಧಾನಿ ಕಾಜಾ ಕಾಲ್ಲಾಸ್‌ ರಾಜೀನಾಮೆ ನೀಡಿದ್ದಾರೆ. ಹೊಸ ಸರ್ಕಾರ ರಚನೆಯಾಗಲಿದೆ.

ಪರಿಹಾರವೇನು?

Exit mobile version