Site icon Vistara News

NR Narayana Murthy: 4 ತಿಂಗಳ ಮೊಮ್ಮಗನಿಗೆ ನಾರಾಯಣಮೂರ್ತಿಯಿಂದ 240 ಕೋಟಿ ರೂ. ಷೇರುಗಳ ಗಿಫ್ಟ್!

Narayana Murthy

Narayana Murthy reacts to being asked how AI will hurt job prospects

ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕ (Infosys co-founder) ಎನ್.ಆರ್.ನಾರಾಯಣಮೂರ್ತಿ (NR Narayana Murthy)ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರಹ್‌ ರೋಹನ್ ಮೂರ್ತಿ (Ekagrah Rohan Murty)ಗೆ 240 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಮೂಲಕ ಏಕಾಗ್ರಹ್‌ ಇನ್ಫೋಸಿಸ್‌ನ 15 ಲಕ್ಷ ಷೇರುಗಳನ್ನು ಅಂದರೆ ಕಂಪನಿಯಲ್ಲಿ ಶೇಕಡಾ 0.04ರಷ್ಟು ಪಾಲನ್ನು ಹೊಂದಿದಂತಾಗಿದೆ ಎಂದು ಎಕ್ಸ್‌ಚೇಂಜ್‌ ಫೈಲಿಂಗ್ ಬಹಿರಂಗಪಡಿಸಿದೆ. ಈ ವ್ಯವಹಾರವನ್ನು ʼಆಫ್-ಮಾರ್ಕೆಟ್ʼನಲ್ಲಿ ನಡೆಸಲಾಯಿತು ಎಂದು ಫೈಲಿಂಗ್ ತಿಳಿಸಿದೆ. ನಾರಾಯಣಮೂರ್ತಿ ಅವರು ಈಗ ಇನ್ಫೋಸಿಸ್‌ನ ಆಡಳಿತ ನಿರ್ವಹಣೆಯಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಅದರ ಪ್ರಮುಖ ಷೇರುಪಾಲುದಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇನ್ಫೋಸಿಸ್​ನಲ್ಲಿ ಮೂರ್ತಿ ಅವರ ಬಳಿ 1.51 ಕೋಟಿ ಷೇರುಗಳಿದ್ದವು. ಈಗ ಮೊಮ್ಮಗನಿಗೆ 15 ಲಕ್ಷ ಷೇರುಗಳನ್ನು ಕೊಟ್ಟ ಬಳಿಕ ಅವರ ಬಳಿ ಉಳಿರುವ ಷೇರುಗಳ ಸಂಖ್ಯೆ 1.36 ಕೋಟಿ. ಈ ಮೂಲಕ ಇನ್ಫೋಸಿಸ್​ನಲ್ಲಿ ಅವರು ಹೊಂದಿದ್ದ ಶೇ. 0.40ರಷ್ಟು ಷೇರುಪಾಲು ಶೇ. 0.36ಕ್ಕೆ ಇಳಿದಿದೆ.

ನಾರಾಯಣಮೂರ್ತಿ-ಸುಧಾ ಮೂರ್ತಿ ದಂಪತಿಯ ಪುತ್ರ ರೋಹನ್‌ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್‌ ದಂಪತಿಗೆ ಕಳೆದ ವರ್ಷ ನವೆಂಬರ್‌ 10ರಂದು ಬೆಂಗಳೂರಿನಲ್ಲಿ ಏಕಾಗ್ರಹ್‌ ಜನಿಸಿದ್ದ. ಮೂರ್ತಿ ಕುಟುಂಬವು ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಅರ್ಜುನನ ಅಚಲ ಏಕಾಗ್ರತೆಯಿಂದ ಪ್ರೇರಿತವಾಗಿ ಮೊಮ್ಮಗನಿಗೆ ಏಕಾಗ್ರಹ್‌ ಎಂದು ಹೆಸರಿಟ್ಟಿತ್ತು. ಇನ್ನು ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿ ಮತ್ತು ಬ್ರಿಟನ್‌ ಪ್ರಧಾನಮಂತ್ರಿ ರಿಷಿ ಸುನಕ್‌ ದಂಪತಿಗೆ ಕೃಷ್ಣ ಮತ್ತು ಅನೌಷ್ಕಾ ಎನ್ನುವ ಇಬ್ಬರು ಮಕ್ಕಳಿದ್ದಾರೆ.

ವಿವಾದ ಹುಟ್ಟು ಹಾಕಿದ್ದ ಹೇಳಿಕೆ

ಕಳೆದ ವರ್ಷ ನಾರಾಯಣ ಮೂರ್ತಿ ಅವರು ಕೆಲಸದ ಅವಧಿಯ ಕುರಿತು ನೀಡಿದ್ದ ಹೇಳಿಕೆ ಚರ್ಚೆ ಹುಟ್ಟು ಹಾಕಿತ್ತು. ʼʼಕಳೆದ ಎರಡು ಮೂರು ದಶಕಗಳಲ್ಲಿ ಅಗಾಧ ಪ್ರಗತಿ ಸಾಧಿಸಿರುವ ಭಾರತವು, ಪ್ರಪಂಚದ ಆರ್ಥಿಕತೆಯ ರಾಷ್ಟ್ರಗಳೊಂದಿಗೆ ಸ್ಪರ್ಧಿಸಬೇಕಾದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕುʼʼ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Narayana Murthy: ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ!

ಅವರ ಈ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಅಪ್‌ಗ್ರ್ಯಾಡ್‌ ಚೇರ್ಮನ್‌ ರೋನಿ ಸ್ಕ್ರ್ಯೂವಾಲಾ, ಹೈ-ಕಾಮ್‌ ನೆಟ್‌ವರ್ಕ್‌ನ ಸಿಇಒ ಸುಖಬೀರ್‌ ಸಿಂಗ್‌ ಭಾಟಿಯಾ, ಶ್ರೀ ಸಿಮೆಂಟ್‌ ಚೇರ್ಮನ್‌ ಹರಿ ಮೋಹನ್‌ ಬಂಗೂರ್‌ ಸೇರಿ ಹಲವು ಉದ್ಯಮಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವುದನ್ನು ಒಪ್ಪಿರಲಿಲ್ಲ. “ನಾವು ಎಷ್ಟು ಗಂಟೆ ಕೆಲಸ ಮಾಡುತ್ತೇವೆ ಎನ್ನುವುದಕ್ಕಿಂತ, ಎಷ್ಟು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ. ಕೆಲಸ ಮಾಡುವುದು ಅವರ ಇಚ್ಛೆಗೆ ಬಿಟ್ಟಿದ್ದು. ಯಾರೂ ಇದನ್ನು ಹೇರಬಾರದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ನಾರಾಯಣ ಮೂರ್ತಿ ಅವರ ಸಲಹೆಗೆ ಸಹಮತ ಸೂಚಿಸಿದ್ದರು. ಒಟ್ಟಿನಲ್ಲಿ ಅವರ ಹೇಳಿಕೆ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿತ್ತು.

Exit mobile version