ನವ ದೆಹಲಿ: ಭಾರತವು ತನ್ನ ಇಂಧನ ಬೇಡಿಕೆಯ ಅಗತ್ಯಗಳಿಗೆ ಅನುಗುಣವಾಗಿ, ರಷ್ಯಾ ಸೇರಿದಂತೆ ಜಗತ್ತಿನ ನಾನಾ ದೇಶಗಳಿಂದ ಕಚ್ಚಾ ತೈಲ ಆಮದನ್ನು ಮುಂದುವರಿಸಲಿದೆ (Oil from Russia) ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಐರೋಪ್ಯ ಒಕ್ಕೂಟದ 27 ದೇಶಗಳು ಡಿಸೆಂಬರ್ 5ರಿಂದ ರಷ್ಯಾದ ಕಚ್ಚಾ ತೈಲಕ್ಕೆ ಬ್ಯಾರೆಲ್‌ಗೆ 60 ಡಾಲರ್‌ನ ಮಿತಿಯನ್ನು ವಿಧಿಸಿದೆ. ಇರಾನ್ ಮತ್ತು ವೆನಿಜುವೆಲಾ ಹೊರತುಪಡಿಸಿ ಉಳಿದ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಹಡಗು, ವಿಮೆ ಮತ್ತು ಹಣಕಾಸು ವ್ಯವಸ್ಥೆ ಹೊಂದಿರುವವರು ತೈಲ ಖರೀದಿಸಬಹುದು. ಭಾರತವು ರಷ್ಯಾದಿಂದಲೂ ತೈಲ ಖರೀದಿಸುವುದನ್ನು ಮುಂದುವರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಆಮದುದಾರರಿಗೆ ರಷ್ಯಾದಿಂದ ಖರೀದಿಸದಿರಿ ಎಂದು ಯಾರೂ ನಿರ್ಬಂಧ ವಿಧಿಸುತ್ತಿಲ್ಲ. ಭಾರತಕ್ಕೆ ತೈಲ ಪೂರೈಕೆ ಮಾಡುವ ಮೂಲಗಳಲ್ಲಿ ರಷ್ಯಾ ಒಂದು ಮಾತ್ರ. ಒಟ್ಟು 30 ದೇಶಗಳಿಂದ ಭಾರತವು ತೈಲ ಖರೀದಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.