Site icon Vistara News

ಓಲಾ ಮತ್ತು ಉಬರ್‌ ವಿಲೀನಕ್ಕೆ ಮಾತುಕತೆ? ವರದಿ ನಿರಾಕರಿಸಿದ ಭವೀಶ್‌ ಅಗ್ರವಾಲ್

ola

ನವ ದೆಹಲಿ: ಓಲಾ ಕ್ಯಾಬ್ಸ್ ಮತ್ತು ಉಬರ್‌ ವಿಲೀನಕ್ಕೆ ಸಂಬಂಧಿಸಿ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ‌ಆದರೆ ಓಲಾದ ಸಂಸ್ಥಾಪಕ ಮತ್ತು ಸಿಇಒ ಭವೀಶ್‌ ಅಗ್ರವಾಲ್‌ ಅವರು ಇಂಥ ವರದಿಗಳನ್ನು ನಿರಾಕರಿಸಿದ್ದಾರೆ.

ಉಬರ್‌ನ ಅಧಿಕಾರಿಗಳನ್ನು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಇತ್ತೀಚೆಗೆ ಭವೀಶ್‌ ಅಗ್ರವಾಲ್ ಭೇಟಿಯಾಗಿ ವಿಲೀನ ಕುರಿತು ಚರ್ಚಿಸಿದ್ದರು ಎಂದು ವರದಿಯಾಗಿತ್ತು. ಆದರೆ ” ಇದು ನಿರಾಧಾರ ವರದಿ. ನಾವು ಲಾಭದಾಯಕವಾಗಿ ವಹಿವಾಟು ನಡೆಸುತ್ತಿದ್ದೇವೆ. ಮತ್ತು ಬೆಳವಣಿಗೆ ಸಾಧಿಸುತ್ತಿದ್ದೇವೆ. ಬೇರೆ ಕಂಪನಿಗಳು ಭಾರತದಿಂದ ನಿರ್ಗಮಿಸಲು ಬಯಸುತ್ತಿದ್ದರೆ ಅದು ಸ್ವಾಗತಾರ್ಹ. ಆದರೆ ನಾವು ಎಂದಿಗೂ ವಿಲೀನವಾಗುವುದಿಲ್ಲʼʼ ಎಂದು ಭವೀಶ್‌ ಅಗ್ರವಾಲ್‌ ಟ್ವೀಟ್‌ ಮಾಡಿದ್ದಾರೆ.

ಉಭಯ ಕಂಪನಿಗಳು ನಾಲ್ಕು ವರ್ಷಗಳ ಹಿಂದೆಯೇ ವಿಲೀನಕ್ಕೆ ಮಾತುಕತೆ ನಡೆಸಿದ್ದವು. ಎರಡೂ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಸಾಫ್ಟ್‌ ಬ್ಯಾಂಕ್‌, ವಿಲೀನಕ್ಕೆ ಒತ್ತಾಯಿಸಿತ್ತು. ಆದರೆ ಮಾತುಕತೆ ಆಗ ಫಲಪ್ರದವಾಗಿರಲಿಲ್ಲ. ಉಭಯ ಕಂಪನಿಗಳೂ ಬೆಳವಣಿಗೆಗೆ ಸಂಬಂಧಿಸಿ ತೊಡಕುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮತ್ತೆ ವಿಲೀನ ಕುರಿತ ಮಾತುಕತೆ ಆರಂಭವಾಗಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಆ್ಯಪ್ ಆಧಾರಿತ ಕ್ಯಾಬ್‌ ಸೇವೆ ಒದಗಿಸುವ ಉದ್ಯಮದಲ್ಲಿ ಕಂಪನಿಗಳು ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ. ಹೀಗಾಗಿ ಓಲಾ ಮತ್ತು ಉಬರ್‌ ಕಳೆದ ಕೆಲ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ನೂರಾರು ಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿವೆ. ಚಾಲಕರ ಇನ್ಸೆಂಟಿವ್‌, ಪ್ರಯಾಣಿಕರಿಗೆ ಕೊಡುವ ಡಿಸ್ಕೌಂಟ್‌ಗೆ ಭಾರಿ ಮೊತ್ತವನ್ನು ಖರ್ಚು ಮಾಡಿದ್ದವು. ಹೀಗಿದ್ದರೂ, ಕೋವಿಡ್-‌೧೯ ಬಿಕ್ಕಟ್ಟಿನ ಬಳಿಕ ಭಾರತದಲ್ಲಿ ಆ್ಯಪ್ ಆಧಾರಿತ ಕ್ಯಾಬ್‌ ಸೇವೆಗೆ ಭಾರಿ ಹೊಡೆತ ಬಿದ್ದಿದೆ. ಕಂಪನಿಗಳೂ ವರ್ಕ್‌ ಫ್ರಮ್‌ ಹೋಮ್‌ ಪದ್ಧತಿಯನ್ನು ಹೆಚ್ಚು ಅಳವಡಿಸಿದ ಪರಿಣಾಮ ಇಂಥ ಕ್ಯಾಬ್‌ಗಳ ಸೇವೆಗೆ ಬೇಡಿಕೆ ತೀವ್ರ ಕುಸಿಯಿತು.

ಓಲಾದಲ್ಲಿ ೧,೦೦೦ ಹುದ್ದೆ ಕಡಿತವಾಗುವ ಸಾಧ್ಯತೆಯೂ ಇದೆ. ಆರಂಭದಲ್ಲಿ ೪೦೦-೫೦೦ ಹುದ್ದೆ ಕಡಿತ ನಿರೀಕ್ಷಿಸಲಾಗಿತ್ತು. ಆದರೆ ೧,೦೦೦ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಉಬರ್‌ ಉಭಯ ಕಂಪನಿಗಳ ವಿಲೀನಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿಲ್ಲ.

ಬೆಂಗಳೂರು ಮೂಲದ ಓಲಾ ಕ್ಯಾಬ್ಸ್‌ ಅನ್ನು ಭವೀಶ್‌ ಅಗ್ರವಾಲ್‌ ಅವರು ೨೦೧೦ರಲ್ಲಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿ ಇದೆ. ೨೦೧೫ರಲ್ಲಿ ಓಲಾ ಬೆಂಗಳೂರಿನ ಟ್ಯಾಕ್ಸಿಫಾರ್‌ಶ್ಯೂರ್‌ ಅನ್ನು ೧,೨೩೭ ಕೋಟಿ ರೂ.ಗೆ ಖರೀದಿಸಿತ್ತು.

Exit mobile version