ಇಸ್ಲಾಮಾಬಾದ್: ಪಾಕಿಸ್ತಾನ ಕಳೆದ 75 ವರ್ಷಗಳಲ್ಲಿ ಸಾಲಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (IMF) ಕದವನ್ನು 23 ಸಲ ತಟ್ಟಿದೆ. ಪಾಕಿಸ್ತಾನ ಐಎಂಎಫ್‌ನ ಹಣಕ್ಕಾಗಿ ಯಾವ ಪರಿಯಲ್ಲಿ ಪರದಾಡುತ್ತಿದೆ (Pakistan economic crisis) ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎನ್ನುತ್ತಾರೆ ಹಣಕಾಸು ತಜ್ಞರು. ನಾವು ಐಎಂಎಫ್‌ನ ನಿಷ್ಠಾವಂತ ಗ್ರಾಹಕರಾಗಿ ಬಿಟ್ಟಿದ್ದೇವೆ ಎನ್ನುತಾರೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಮಾಜಿ ಗವರ್ನರ್ ಮುರ್ತಾಜಾ ಸೈಯೀದ್.
ಅರ್ಜೆಂಟೀನಾ ಎರಡನೇ ಸ್ಥಾನದಲ್ಲಿದ್ದು 21 ಸಲ ಐಎಂಎಫ್‌ನಿಂದ ಹಣಕಾಸು ನೆರವು ಯಾಚಿಸಿದೆ. ಆದರೆ ಭಾರತ ಕೇವಲ 7 ಸಲ ಐಎಂಎಫ್ ನೆರವು ಯಾಚಿಸಿತ್ತು. 1991ರಲ್ಲಿ ನರಸಿಂಹರಾವ್ ನೇತೃತ್ವದ ಸರ್ಕಾರ ಆರ್ಥಿಕ ಸುಧಾರಣಾ ನೀತಿಯನ್ನು ಜಾರಿಗೊಳಿಸಿದ ಬಳಿಕ ಒಂದು ಸಲವೂ ಐಎಂಎಫ್ ನೆರವನ್ನು ಬಯಸಿಲ್ಲ.
ಪಾಕಿಸ್ತಾನದ ಬಳಿ ಈಗ 3 ಶತಕೋಟಿ ಡಾಲರ್‌ಗಿಂತಲೂ ಕಡಿಮೆ ವಿದೇಶಿ ವಿನಿಮಯ ಸಂಗ್ರಹ ಇದೆ. (24,600 ಕೋಟಿ ರೂ.) ಪಾಕಿಸ್ತಾನ ತನ್ನ ಇತಿಹಾಸದಲ್ಲಿ ಎಂದೂ 21 ಶತಕೋಟಿ ಡಾಲರ್‌ಗಿಂತ (1.72 ಲಕ್ಷ ಕೋಟಿ ರೂ.) ಹೆಚ್ಚು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿಲ್ಲ. ಬಾಂಗ್ಲಾದೇಶ ಕೂಡ 35 ಶತಕೋಟಿ ಡಾಲರ್ (೨.೮೭ ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ.
ಭಾರತ 600 ಶತಕೋಟಿ ಡಾಲರ್ (49 ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ. ಚೀನಾ ೪ ಲಕ್ಷ ಕೋಟಿ ಡಾಲರ್ ಅನ್ನು ಹೊಂದಿದೆ.