Site icon Vistara News

Pakistan bankrupt : ಪಾಕಿಸ್ತಾನ ಈಗ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ ಕ್ವಾಜಾ ಆಸಿಫ್

pakistan defence minister asif

ಇಸ್ಲಮಾಬಾದ್:‌ ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ ಎಂದು (Pakistan bankrupt ) ಅಲ್ಲಿನ ರಕ್ಷಣಾ ಸಚಿವ ಕ್ವಾಜಾ ಆಸಿಫ್‌ ಅವರು ಒಪ್ಪಿಕೊಂಡಿದ್ದಾರೆ. ನಾವು ಈಗ ದಿವಾಳಿಯಾಗಿರುವ ದೇಶದಲ್ಲಿ ಜೀವಿಸುತ್ತಿದ್ದೇವೆ. ಇದಕ್ಕೆ ಪ್ರತಿಯೊಬ್ಬರೂ ಹೊಣೆಯಾಗಿದ್ದಾರೆ. ರಾಜಕೀಯ, ಆಡಳಿತ ವ್ಯವಸ್ಥೆ ಮತ್ತು ಸಮಾಜ ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ ಎಂದು ಪಾಕ್‌ ರಕ್ಷಣಾ ಸಚಿವರು ಹೇಳಿದ್ದಾರೆ. ಪಾಕಿಸ್ತಾನದ ಸಮಸ್ಯೆಗೆ ಪಾಕಿಸ್ತಾನವೇ ಪರಿಹಾರ ಕಂಡುಕೊಳ್ಳಬೇಕು. ಇದು ಐಎಂಎಫ್‌ನಿಂದ ಸಿಗದು ಎಂದು ಪಿಎಂಎಲ್‌-ಎನ್‌ ನಾಯಕ ಕ್ವಾಜಾ ಆಸಿಫ್‌ ಹೇಳಿದ್ದಾರೆ.

ಸರ್ಕಾರದ ದುಬಾರಿ ಜಮೀನು ಮತ್ತು ವೆಚ್ಚದಲ್ಲಿ ನಿರ್ಮಾಣವಾಗಿರುವ ಎರಡು ಗಾಲ್ಫ್‌ ಕ್ಲಬ್‌ಗಳನ್ನು ಮಾರಿದರೆ ಐಎಂಎಫ್‌ನ ಸಾಲದಲ್ಲಿ ನಾಲ್ಕನೇ ಒಂದರಷ್ಟನ್ನು ಮರು ಪಾವತಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. 32 ವರ್ಷ ಕಾಲ ಸಂಸತ್ತಿನಲ್ಲಿ ದೇಶದ ರಾಜಕೀಯದ ಪತನವನ್ನು ಕಂಡಿರುವುದಾಗಿ ಆಸಿಫ್‌ ವಿವರಿಸಿದ್ದಾರೆ. ಪ್ರಧಾನಿ ಶೆಹ್ಬಾಜ್‌ ಷರೀಫ್‌ ಅವರು ಸರ್ಕಾರದ ಎಲ್ಲ ಸಂಸ್ಥೆಗಳಲ್ಲಿ ಕಠಿಣ ವೆಚ್ಚ ನಿಯಂತ್ರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಹಣದುಬ್ಬರ ೪೦% ಏರಿದ್ದು, ಜನತೆ ಅಗತ್ಯ ವಸ್ತುಗಳಿಗೆ ಕೂಡ ಪರದಾಡುವಂತಾಗಿದೆ. ಐಎಂಎಫ್‌ನಿಂದ ಸಾಲ ಪಡೆಯಲು ಪಾಕ್‌ ಶತಾಯಗತಾಯ ಯತ್ನಿಸುತ್ತಿದೆ.

ಬೆಲೆ ಏರಿಕೆಯಿಂದ ಜನ ಕಂಗಾಲು:

pakistan economic crisis

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಅಕ್ಷರಶಃ ದರ ಸ್ಫೋಟ ಸಂಭವಿಸಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ದರ 272 ರೂ.ಗೆ ಹಾಗೂ ಡೀಸೆಲ್‌ 280 ರೂ.ಗೆ ಏರಿಕೆಯಾಗಿದೆ. (Pakistan Inflation) ಸೀಮೆ ಎಣ್ಣೆ ಲೀಟರ್‌ಗೆ 202 ರೂ.ಗೆ ವೃದ್ಧಿಸಿದೆ. ಹಾಲಿನ ದರ ಲೀಟರ್‌ಗೆ 210 ರೂ, ಕೋಳಿ ಮಾಂಸ ಪ್ರತಿ ಕೆಜಿಗೆ 780 ರೂ.ಗೆ ದುಬಾರಿಯಾಗಿದೆ.

ಈಗಾಗಲೇ ಅಗತ್ಯ ವಸ್ತುಗಳ ದರದಲ್ಲಿ ಏರಿಕೆಯ ಪರಿಣಾಮ ಕಂಗಾಲಾಗಿರುವ ಜನತೆ ಇದೀಗ ಮತ್ತಷ್ಟು ಚಿಂತಾಜನಕ ಪರಿಸ್ಥಿತಿ ಎದುರಿಸುವಂತಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಪಾಕ್‌ ಸರ್ಕಾರ 18%ಕ್ಕೆ ಏರಿಸಲು ಉದ್ದೇಶಿಸಿದೆ. ತೈಲ ದರ ಏರಿಕೆಯಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹ ಹೆಚ್ಚಿಸಲು ನೆರವಾಗಲಿದೆ.

ಜಿಯೊ ಟಿವಿ ಪ್ರಕಾರ ಪಾಕಿಸ್ತಾನದಲ್ಲಿ ಸೀಮೆ ಎಣ್ಣೆ ದರ ಲೀಟರ್‌ಗೆ 202 ರೂ.ಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ನ ಷರತ್ತುಗಳಿಂದಾಗಿ ಪಾಕಿಸ್ತಾನ ತೆರಿಗೆಗಳನ್ನು ಏರಿಸಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಷರತ್ತುಗಳಿಗೆ ಒಪ್ಪಿದರೆ ಮಾತ್ರ ಮುಂದಿನ ಹಂತದಲ್ಲಿ ಹಣಕಾಸು ನೆರವು ನೀಡುವುದಾಗಿ ಐಎಂಎಫ್‌ ಒತ್ತಡ ಹೇರಿದೆ. ಐಎಂಎಫ್‌ ನೆರವು ನೀಡಿದರೂ, ಪಾಕಿಸ್ತಾನದ ಆರ್ಥಿಕತೆ ಹಳಿಗೆ ಮರಳುವುದು ಕಷ್ಟ. ಸದೃಢ ಆರ್ಥಿಕ ನಿರ್ವಹಣೆ ಈಗ ಎಲ್ಲಕ್ಕಿಂತ ಮುಖ್ಯ ಎಂದು ತಜ್ಞರು ಹೇಳಿದ್ದಾರೆ. ಪಾಕಿಸ್ತಾನ ಕೇವಲ ಮೂರು ವಾರಗಳ ಆಮದಿಗೆ ಅವಧಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ.

Exit mobile version