Site icon Vistara News

Pakistan inflation : ಹಣದುಬ್ಬರದಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿದ ಪಾಕಿಸ್ತಾನ, ಎಷ್ಟಿದೆ ನೋಡಿ ಬೆಲೆ ಏರಿಕೆ?

Pakistan

ನವ ದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದಲ್ಲಿ ಹಣದುಬ್ಬರ 38% ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಶ್ರೀಲಂಕಾವನ್ನೂ ಹಿಂದಿಕ್ಕಿದೆ. ಶ್ರೀಲಂಕಾದಲ್ಲಿ ಹಣದುಬ್ಬರ 25.2%ಕ್ಕೆ ಇಳಿಕೆಯಾಗಿದೆ. (Pakistan inflation) ಈಗ ಏಷ್ಯಾದಲ್ಲಿಯೇ ಅತಿ ಹೆಚ್ಚು ಹಣದುಬ್ಬರ ಪಾಕಿಸ್ತಾನದಲ್ಲಿದೆ. ಭಾರತದಲ್ಲಿ ಹಣದುಬ್ಬರ 4.7% ಇದೆ. ಪಾಕಿಸ್ತಾನವು ಐಎಂಎಫ್‌ನ ಕಠಿಣ ಷರತ್ತುಗಳನ್ನು ಪೂರೈಸಲು ಹಿಂದೇಟು ಹಾಕುತ್ತಿದೆ. 1957ರಿಂದೀಚೆಗಿನ ಅವಧಿಯಲ್ಲಿಯೇ ಗರಿಷ್ಠ ಹಣದುಬ್ಬರವನ್ನು ಪಾಕಿಸ್ತಾನ ದಾಖಲಿಸಿದೆ.

2023ರ ಏಪ್ರಿಲ್‌ನಲ್ಲಿ ಪಾಕಿಸ್ತಾನವು ಹಣದುಬ್ಬರದಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿದೆ. ಪಾಕಿಸ್ತಾನಕ್ಕೆ ಈ ಹಿಂದೆ ಅಮೆರಿಕ, ಬಳಿಕ ಚೀನಾದಿಂದ ಹಣಕಾಸು ನೆರವು ಲಭಿಸುತ್ತಿತ್ತು. ಇದರೊಂದಿಗೆ ಪಾಕಿಸ್ತಾನ ತನ್ನನ್ನು ಭಾರತದ ಜತೆಗೆ ಹೋಲಿಸುತ್ತಿತ್ತು. ಆದರೆ ಈಗ ಪಾಕ್ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಭಾರತದಲ್ಲಿ ಹಣದುಬ್ಬರರ 4.7%ಕ್ಕೆ ಇಳಿದಿದೆ. ಆಹಾರ ಹಣದುಬ್ಬರ 3.8%ಕ್ಕೆ ತಗ್ಗಿದೆ. ಪಾಕಿಸ್ತಾನದಲ್ಲಿ ಆಹಾರ ಹಣದುಬ್ಬರ 48.7% ಕ್ಕೆ ಏರಿಕೆಯಾಗಿದೆ.

ಪಾಕಿಸ್ತಾನದ ನಾಯಕರು ಚೀನಾದಿಂದ ಹಣಕಾಸು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಐಎಂಎಫ್‌ ಜತೆಗೆ ಮಾತುಕತೆ ಫಲಪ್ರದವಾಗದಿದ್ದರೆ, ಪಾಕಿಸ್ತಾನದ ಆರ್ಥಿಕತೆ ತೀವ್ರ ಬಿಗಡಾಯಿಸಲಿದೆ. ಕಳೆದ 12 ತಿಂಗಳಿನಲ್ಲಿ ಸರಾಸರಿ 29.16% ಹಣದುಬ್ಬರ ಇತ್ತು. ಹಣದುಬ್ಬರ ಜಿಗಿತದ ಪರಿಣಾಮ ಪಾಕಿಸ್ತಾನದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಭಾರಿ ತೊಂದರೆಯಾಗಿದೆ. ಹಣಕಾಸು ನಿರ್ವಹಣೆಯ ಕೊರತೆಯ ಪರಿಣಾಮ ಭಾರಿ ಸವಾಲನ್ನು ಎದುರಿಸುವಂತಾಗಿದೆ.

ಪಾಕಿಸ್ತಾನದಲ್ಲಿ ಕಳೆದ ಫೆಬ್ರವರಿಯಲ್ಲಿ ಪ್ರತಿ ಲೀಟರ್‌ ಹಾಲಿನ ದರ 210 ರೂ, ಕೋಳಿ ಮಾಂಸ ಕೆ.ಜಿ ದರ 700 ರೂ, ಪೆಟ್ರೋಲ್‌ ದರ ಲೀಟರ್‌ಗೆ 272 ರೂ, ಡೀಸೆಲ್‌ ದರ ಲೀಟರ್‌ಗೆ 282 ರೂ. ಇತ್ತು.

ಪಾಕಿಸ್ತಾನ ಕಳೆದ 75 ವರ್ಷಗಳಲ್ಲಿ ಸಾಲಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (IMF) ಕದವನ್ನು 23 ಸಲ ತಟ್ಟಿದೆ. ಪಾಕಿಸ್ತಾನ ಐಎಂಎಫ್‌ನ ಹಣಕ್ಕಾಗಿ ಯಾವ ಪರಿಯಲ್ಲಿ ಪರದಾಡುತ್ತಿದೆ (Pakistan economic crisis) ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎನ್ನುತ್ತಾರೆ ಹಣಕಾಸು ತಜ್ಞರು. ನಾವು ಐಎಂಎಫ್‌ನ ನಿಷ್ಠಾವಂತ ಗ್ರಾಹಕರಾಗಿ ಬಿಟ್ಟಿದ್ದೇವೆ ಎನ್ನುತಾರೆ ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನದ ಮಾಜಿ ಗವರ್ನರ್‌ ಮುರ್ತಾಜಾ ಸೈಯೀದ್.‌

ಅರ್ಜೆಂಟೀನಾ ಎರಡನೇ ಸ್ಥಾನದಲ್ಲಿದ್ದು 21 ಸಲ ಐಎಂಎಫ್‌ನಿಂದ ಹಣಕಾಸು ನೆರವು ಯಾಚಿಸಿದೆ. ಆದರೆ ಭಾರತ ಕೇವಲ 7 ಸಲ ಐಎಂಎಫ್‌ ನೆರವು ಯಾಚಿಸಿತ್ತು. 1991ರಲ್ಲಿ ನರಸಿಂಹರಾವ್‌ ನೇತೃತ್ವದ ಸರ್ಕಾರ ಆರ್ಥಿಕ ಸುಧಾರಣಾ ನೀತಿಯನ್ನು ಜಾರಿಗೊಳಿಸಿದ ಬಳಿಕ ಒಂದು ಸಲವೂ ಐಎಂಎಫ್‌ ನೆರವನ್ನು ಬಯಸಿಲ್ಲ.

ಪಾಕಿಸ್ತಾನದ ಬಳಿ ಈಗ 3 ಶತಕೋಟಿ ಡಾಲರ್‌ಗಿಂತಲೂ ಕಡಿಮೆ ವಿದೇಶಿ ವಿನಿಮಯ ಸಂಗ್ರಹ ಇದೆ. (24,600 ಕೋಟಿ ರೂ.) ಪಾಕಿಸ್ತಾನ ತನ್ನ ಇತಿಹಾಸದಲ್ಲಿ ಎಂದೂ 21 ಶತಕೋಟಿ ಡಾಲರ್‌ಗಿಂತ (1.72 ಲಕ್ಷ ಕೋಟಿ ರೂ.) ಹೆಚ್ಚು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿಲ್ಲ. ಬಾಂಗ್ಲಾದೇಶ ಕೂಡ 35 ಶತಕೋಟಿ ಡಾಲರ್‌ ( 2.87 ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ. ಭಾರತ 600 ಶತಕೋಟಿ ಡಾಲರ್‌ (49 ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ. ಚೀನಾ 4 ಲಕ್ಷ ಕೋಟಿ ಡಾಲರ್‌ ಅನ್ನು ಹೊಂದಿದೆ.

ಇದನ್ನೂ ಓದಿ: NIA Investigation: ಮೊಹಮ್ಮದ್‌ ಆರೀಫ್‌ಗೆ ಪಾಕ್‌, ತಾಲಿಬಾನ್‌ ಜತೆ ಸಂಪರ್ಕ; ಆಫ್ಘನ್‌ ಉಗ್ರ ಸಂಘಟನೆಗೆ‌ ವಿದೇಶಿ ಫಂಡಿಂಗ್!

Exit mobile version