ನವ ದೆಹಲಿ: ಭಾರತದ ಮೊದಲ ವರ್ಟಿಕಲ್ ಸೀ ಲಿಫ್ಟ್ ರೈಲ್ವೆ ಸೇತುವೆಯು ರಾಮೇಶ್ವರಂನ ಪಂಬಾನ್‌ನಲ್ಲಿ ಶೀಘ್ರ ಸಿದ್ಧವಾಗಲಿದ್ದು, 84% ಕಾಮಗಾರಿ ( Pamban bridge) ಪೂರ್ಣಗೊಂಡಿದೆ. ವಿಶೇಷ ಏನೆಂದರೆ ಈ ಸೇತುವೆ ಸಮುದ್ರದ ಮೇಲೆ ರಚನೆಯಾಗಿದ್ದು, ಲಿಫ್ಟ್‌ನಂತೆ ಮೇಲೇರಬಲ್ಲುದು. ಅಡ್ಡ ಬರುವ ಹಡಗುಗಳಿಗೆ ಚಲಿಸಲು ಹಾದಿ ಮಾಡಿಕೊಡಬಲ್ಲುದು. ಈ ವಿಶಿಷ್ಟ ಸೇತುವೆಯ ವಿಡಿಯೊವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವಿಟರ್ ಮೂಲಕ ಶೇರ್ ಮಾಡಿದ್ದಾರೆ.
ಹಳಿಯನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಅಸೆಂಬ್ಲಿಂಗ್ ಪ್ಲಾಟ್‌ಫಾರ್ಮ್ ಕೂಡ ಮುಕ್ತಾಯದ ಹಂತದಲ್ಲಿದೆ. ಈ ವರ್ಟಿಕಲ್ ಲಿಫ್ಟ್ ಬ್ರಿಡ್ಜ್ ಚಲಿಸುವ ಸೇತುವೆಯಾಗಿದ್ದು, ರೈಲ್ವೆ ಮಾರ್ಗದ ಅಡ್ಡಲಾಗಿ ಹಡಗು ಬಂದಾಗ, ಸೇತುವೆಯೇ ಲಂಬವಾಗಿ ಮೇಲಕ್ಕೆ ಏರಲಿದೆ. ಹಡಗು ಚಲಿಸಿದ ಬಳಿಕ ವರ್ಟಿಕಲ್ ಲಿಫ್ಟ್‌ನಲ್ಲಿ ಸೇತುವೆ ಯಥಾಸ್ಥಿತಿಗೆ ಕೆಳಗಿಳಿಯಲಿದೆ. ಭಾರತದಲ್ಲಿ ಇಂಥ ಮಾದರಿಯ ಮೊದಲ ರೈಲ್ವೆ ಸೇತುವೆ ಇದಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಪರಂಪರೆ ಮತ್ತು ತಂತ್ರಜ್ಞಾನದ ಸಮಾಗಮ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಣ್ಣಿಸಿದ್ದಾರೆ.