Site icon Vistara News

Paytm payments Bank: ಕುಸಿತದ ನಡುವೆಯೇ ₹244 ಕೋಟಿ ಬೆಲೆಯ ಪೇಟಿಎಂ ಷೇರು ಖರೀದಿಸಿದ ಮಾರ್ಗನ್ ಸ್ಟಾನ್ಲಿ

paytm payments bank morgan stanley

ಹೊಸದಿಲ್ಲಿ: ಹಣಕಾಸು ಸೇವೆಗಳ ದೈತ್ಯ ಕಂಪನಿ ಮಾರ್ಗನ್ ಸ್ಟಾನ್ಲಿ (Morgan Stanley), Paytmನ ಮೂಲ ಕಂಪನಿ One97 ಕಮ್ಯುನಿಕೇಷನ್ಸ್‌ನ ₹244 ಕೋಟಿ ಮೌಲ್ಯದ ಷೇರುಗಳನ್ನು ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ಶುಕ್ರವಾರ ಖರೀದಿಸಿ ಗಮನಾರ್ಹ ಹೂಡಿಕೆ ಮಾಡಿದೆ.

ಮಾರ್ಗನ್ ಸ್ಟಾನ್ಲಿ, ಅದರ ಅಂಗಸಂಸ್ಥೆಯಾದ ಮಾರ್ಗನ್ ಸ್ಟಾನ್ಲಿ ಏಷ್ಯಾ (ಸಿಂಗಾಪುರ) Pte- ODI ಮೂಲಕ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) 50 ಲಕ್ಷ ಷೇರುಗಳನ್ನು ಖರೀದಿಸಿತು. ಇದು Paytmನಲ್ಲಿ ಪ್ರತಿಶತ 0.8ರಷ್ಟು ಪಾಲನ್ನು ಪ್ರತಿನಿಧಿಸುತ್ತದೆ. ಪ್ರತಿ ಷೇರಿನ ಸರಾಸರಿ ಬೆಲೆ ₹487.20 ಆಗಿದ್ದು, ಒಟ್ಟು ಡೀಲ್ ಗಾತ್ರ ₹243.60 ಕೋಟಿಯಾಗಿದೆ. ಆದರೆ ಮಾರಾಟಗಾರರ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

Paytm ಷೇರುಗಳ ಬೆಲೆ NSEನಲ್ಲಿ ಶುಕ್ರವಾರ 20 ಪ್ರತಿಶತ ಕುಸಿತವನ್ನು ದಾಖಲಿಸಿತು. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India RBI), Paytmನ ಸಹವರ್ತಿಯಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm payments Bank) ಲಿಮಿಟೆಡ್‌ಗೆ (PPBL) ಠೇವಣಿಗಳನ್ನು ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ನಿರ್ದೇಶಿಸಿದೆ. ಇದರ ನಂತರ ಕಂಪನಿಯ ಷೇರು ಬೆಲೆಗಳು 2 ದಿನಗಳಲ್ಲಿ 36 ಪ್ರತಿಶತದಷ್ಟು ಕುಸಿದಿವೆ. ಮಾರ್ಚ್ 1ರಿಂದ ಪೇಟಿಎಂ ಬ್ಯಾಂಕಿನ ವಿವಿಧ ಖಾತೆಗಳು, ವ್ಯಾಲೆಟ್‌ಗಳು ಮತ್ತು ಸಾಧನಗಳಲ್ಲಿ ಠೇವಣಿ ಹೂಡುವಂತಿಲ್ಲ.

Paytm ಪೇಮೆಂಟ್ಸ್ ಬ್ಯಾಂಕ್‌ನಲ್ಲಿ One97 Communications Ltd (OCL) ಶೇಕಡಾ 49ರಷ್ಟು ಪಾಲನ್ನು ಹೊಂದಿದ್ದರೆ, One97 ಕಮ್ಯುನಿಕೇಶನ್‌ನ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಇತರ ಶೇಕಡಾ 51ರಷ್ಟು ಪಾಲನ್ನು ಹೊಂದಿದ್ದಾರೆ. One97 ಕಮ್ಯುನಿಕೇಷನ್ಸ್‌ನ ಷೇರುಗಳ ದರ NSEನಲ್ಲಿ ನಿನ್ನೆ ₹487.20ಕ್ಕೆ ಇಳಿದಿದೆ.

ಪೇಟಿಎಂ ಬ್ಯಾಂಕ್ ಅನುಮತಿ ರದ್ದು?

ಮುಂದಿನ ತಿಂಗಳ ಆರಂಭದಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿಯನ್ನು ಹಿಂಪಡೆಯಲು ಆರ್‌ಬಿಐ ಚಿಂತನೆ ನಡೆಸುತ್ತಿದೆ ಎಂದು ವರದಿಗಳಿವೆ. ಗ್ರಾಹಕರ ದಾಖಲಾತಿ ನಿಯಮಗಳ ದುರುಪಯೋಗ ಮತ್ತು ಹಣಕಾಸು ವಹಿವಾಟುಗಳನ್ನು ಬಹಿರಂಗಪಡಿಸದಿರುವುದು ಸೇರಿದಂತೆ ವಹಿವಾಟು ನಿಯಮಾವಳಿ ಉಲ್ಲಂಘನೆಗಳು ಪೇಟಿಎಂನಲ್ಲಿ ನಡೆದಿರುವುದನ್ನು ಬ್ಯಾಂಕಿಂಗ್ ವಲಯದ ನಿಯಂತ್ರಕರು ಕಂಡುಕೊಂಡಿದ್ದಾರೆ.

RBI ಠೇವಣಿದಾರರ ರಕ್ಷಣೆಗೆ ಆದ್ಯತೆ ನೀಡುವ ಗುರಿಯನ್ನು ಹೊಂದಿದೆ. ಫೆಬ್ರವರಿ 29ರ ಗಡುವಿನ ನಂತರ Paytmನ ಬೆಳವಣಿಗೆ ಅವಲಂಬಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮುಂದಿನ ಬೆಳವಣಿಗೆಗಳ ಆಧಾರದ ಮೇಲೆ ಆರ್‌ಬಿಐ ನಿಲುವು ಬದಲಾಗಲೂಬಹುದು ಎನ್ನಲಾಗಿದೆ.

ಇದನ್ನೂ ಓದಿ: Paytm Payments Bank: ʼನಿಮ್ಮ ಹಣ ಸೇಫ್‌ʼ ಎಂದ ಪೇಟಿಎಂ ಪಾವತಿ ಬ್ಯಾಂಕ್; ಆದರೆ…

Exit mobile version