ಇಸ್ಲಮಾಬಾದ್: ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದಲ್ಲಿ ಗೋಧಿ ಸೇರಿದಂತೆ ಆಹಾರ ಧಾನ್ಯಗಳ ತೀವ್ರ ಕೊರತೆ ಸೃಷ್ಟಿಯಾಗಿದೆ. ಗೋಧಿ ಹಿಟ್ಟಿಗೆ ಹಾಹಾಕಾರ ಉಂಟಾಗಿದೆ. (Pakistan flour crisis) ಜನ ದಂಗೆ ಏಳದಂತೆ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯ ಭದ್ರತೆಯಲ್ಲಿ ಗೋಧಿ ಹಿಟ್ಟಿನ ಚೀಲಗಳನ್ನು ಸಾಗಿಸಲಾಗುತ್ತಿದೆ.
ಖೈಬರ್ ಪಂಖ್ತೂನ್‌ಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿಗೆ ಜನ ನೂಕುನುಗ್ಗಲು ಸೃಷ್ಟಿಯಾಗಿದೆ. ನೂಕು ನುಗ್ಗಲಿಗೆ ಪ್ರಾಂತ್ಯವೊಂದರಲ್ಲಿ ಒಬ್ಬ ಬಲಿಯಾಗಿರುವ ಬಗ್ಗೆಯೂ ವರದಿಯಾಗಿದೆ.
ಮಾರುಕಟ್ಟೆಯಲ್ಲಿ ದರ ಸ್ಫೋಟದ ಪರಿಣಾಮ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಪಡೆಯಲು ಸಾವಿರಾರು ಮಂದಿ ಗಂಟೆಗಟ್ಟಲೆ ಸರದಿಯಲ್ಲಿ ಕಾಯುತ್ತಿದ್ದಾರೆ. ತಾಳ್ಮೆ ಕಳೆದುಕೊಂಡ ಜನತೆ ವಾಗ್ವಾದ, ತಳ್ಳಾಟ, ನೂಕುನುಗ್ಗಲು ನಡೆಸುತ್ತಿದ್ದಾರೆ. ಹೀಗಾಗಿ ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಮಿನಿ ಟ್ರಕ್‌ಗಳ ಮೂಲಕ ಗೋಧಿ ಹಿಟ್ಟನ್ನು ವಿತರಿಸಲಾಗುತ್ತಿದೆ.
ಕರಾಚಿಯಲ್ಲಿ ಪ್ರತಿ ಕಿಲೋ ಗೋಧಿ ಹಿಟ್ಟಿನ ದರ 160 ರೂ.ಗೆ ಜಿಗಿದಿದೆ. ಇಸ್ಲಾಮಾಬಾದ್ ಮ್ತು ಪೇಶಾವರದಲ್ಲಿ 10 ಕೆಜಿ ಹಿಟ್ಟಿನ ಚೀಲದ ದರ 1500 ರೂ.ಗೆ ಏರಿದೆ. 20 ಕೆಜಿ ಚೀಲದ ದರ 2,800 ರೂ.ಗೆ ವೃದ್ಧಿಸಿದೆ. ದರ ಪದೇಪದೆ ಜಿಗಿಯುತ್ತಿದೆ.
ಬಲೂಚಿಸ್ತಾನ ಪ್ರಾಂತ್ಯದಲ್ಲಿ ಗೋಧಿಯ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ ಎಂದು ಆಹಾರ ಸಚಿವ ಜಮಾರಕ್ ತಿಳಿಸಿದ್ದಾರೆ. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತೆರಳಬಹುದು ಎಂದು ಎಚ್ಚರಿಸಿದ್ದಾರೆ.
20 ಕೆಜಿ ಗೋಧಿ ಹಿಟ್ಟಿನ ಚೀಲಕ್ಕೆ 3,100 ರೂ.!
ಖೈಬರ್ ಪಂಖ್ತೂನ್‌ಖ್ವಾ ಪ್ರಾಂತ್ಯದಲ್ಲಿ 20 ಕೆ.ಜಿ ಗೋಧಿ ಹಿಟ್ಟಿನ ದರ 3,100 ರೂ.ಗೆ ಜಿಗಿದಿದೆ. ದರ ನಿಯಂತ್ರಣಕ್ಕೆ ಸರ್ಕಾರ ವಿಫಲವಾಗಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ ಎಂದು ವರದಿಯಾಗಿದೆ.