ನವ ದೆಹಲಿ: ರಾಜ್ಯ ಸರ್ಕಾರಗಳು ಒಪ್ಪಿದರೆ ಪೆಟ್ರೋಲಿಯಂ ಮತ್ತು ಅನಿಲವನ್ನು ಜಿಎಸ್‌ಟಿ (GST) ವ್ಯಾಪ್ತಿಗೆ ತರಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಉದ್ಯಮ ವಲಯದ ಮಂಡಳಿ ಪಿಎಚ್‌ಡಿಸಿಸಿಐ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿತ್ತೀಯ ಬಲವರ್ಧನೆಗೆ ಬೇಕಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದರು.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬುದು ಸುದೀರ್ಘ ಕಾಲದ ಬೇಡಿಕೆಯಾಗಿದೆ. ಪೆಟ್ರೋಲ್-ಡೀಸೆಲ್ ಅನ್ನು ಜಿಎಸ್‌ಟಿಗೆ ಒಳಪಡಿಸಿದರೆ, ಇವುಗಳ ದರ ಇಳಿಕೆಯಾಗಲಿದೆ. ಜನ ಸಾಮಾನ್ಯರಿಗೆ, ಉದ್ದಿಮೆ ವಲಯಕ್ಕೂ ಅನುಕೂಲವಾಗಲಿದೆ. ಆದರೆ ಹಲವಾರು ರಾಜ್ಯಗಳು ಈ ಪ್ರಸ್ತಾಪಕ್ಕೆ ಒಪ್ಪುತ್ತಿಲ್ಲ.
ರಾಜಯ ಸರ್ಕಾರಗಳಿಗೆ ಪೆಟ್ರೋಲ್-ಡೀಸೆಲ್ ಮಾರಾಟದ ಮೇಲಿನ ತೆರಿಗೆ ಪ್ರಮುಖ ಆದಾಯ ಮೂಲವಾದ್ದರಿಂದ ಅದನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಮ್ಮತಿಸುತ್ತಿಲ್ಲ. ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳು ಈ ಬಗ್ಗೆ ಒಮ್ಮತಕ್ಕೆ ಬರಬೇಕಾದ ಅಗತ್ಯ ಇದೆ ಎನ್ನುತ್ತಾರೆ ತಜ್ಞರು. ಈ ಹಿಂದೆಯೂ ಕೇಂದ್ರ ವಾಣಿಜ್ಯ ಸಚಿವರು, ರಾಜ್ಯಗಳಲ್ಲಿ ಒಮ್ಮತದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದರು.