ಕೊಲಂಬೊ: ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಪೆಟ್ರೋಲ್ ದರ ಮಂಗಳವಾರ ಪ್ರತಿ ಲೀಟರ್‌ಗೆ 420 ರೂ.ಗೆ ಜಿಗಿದಿದೆ.
ಪಟ್ರೋಲ್ ದರದಲ್ಲಿ ಶೇ.24.3 ಮತ್ತು ಡೀಸೆಲ್ ದರದಲ್ಲಿ ಶೇ.38.4ಹೆಚ್ಚಳವಾಗಿದೆ. ವಿದೇಶಿ ವಿನಿಮಯ ಸಂಗ್ರಹದ ತೀವ್ರ ಕೊರತೆಯಿಂದ ಲಂಕಾ ಬಳಲುತ್ತಿದೆ.
ಕಳೆದ ಏಪ್ರಿಲ್ 19 ರ ಬಳಿಕ ಎರಡನೇ ಬಾರಿಗೆ ಪೆಟ್ರೋಲ್ ದರ ಏರಿಕೆಯಾಗಿದೆ. ಈಗ ಲಂಕೆಯಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಒಕ್ಟೇನ್ 92 ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 338 ರೂ.ಗಳಿಂದ 420 ರೂಪಾಯಿಗೆ (1.17ಡಾಲರ್) ಜಿಗಿದಿದೆ. ಡೀಸೆಲ್ ದರ 400 ರೂಪಾಯಿಗೆ (1.11ಡಾಲರ್) ಏರಿಕೆಯಾಗಿದೆ. ಇದುವರೆಗಿನ ಗರಿಷ್ಠ ದರ ಇದಾಗಿದೆ.
ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ಈ ದರ ಏರಿಕೆಯ ನಿರ್ಧಾರವನ್ನು ಕೈಗೊಂಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ಬೆನ್ನಲ್ಲೇ ಸಾರಿಗೆ ದರದ ಪರಿಷ್ಕರಣೆಗೆ ಸಚಿವ ಸಂಪುಟ ಸಮ್ಮತಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕೊರತೆ ಉಂಟಾಗಿದ್ದು, ಜನರ ಸರದಿ ಕಂಡು ಬರುತ್ತಿದೆ. ಈ ನಡುವೆ ರಿಕ್ಷಾ ಚಾಲಕರು ಮೊದಲ ಒಂದು ಕಿ.ಮೀಗೆ 90 ರೂ. ಹಾಗೂ ಎರಡನೇ ಕಿ.ಮೀಗಳಿಂದ 80 ರೂ. ಶುಲ್ಕವನ್ನು ಗ್ರಾಹಕರಿಂದ ಪಡೆಯುತ್ತಿದ್ದಾರೆ. 1948 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿದ ನಂತರ ಇದುವರೆಗಿನ ಕಾಲಘಟ್ಟದಲ್ಲಿ ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ದ್ವೀಪರಾಷ್ಟ್ರ ಎದುರಿಸುತ್ತಿದೆ. ಬಹುತೇಕ ಎಲ್ಲ ಅಗತ್ಯ ವಸ್ತುಗಳಿಗೆ ಹಾಹಾಕಾರ ಉಂಟಾಗಿದೆ. ಡಾಲರ್ ಕೊರತೆಯಿಂದ ಆಮದು ತುಟ್ಟಿಯಾಗುತ್ತಿದೆ. ಹಣದುಬ್ಬರ ಶೇ.40ಕ್ಕೆ ಜಿಗಿದಿದೆ. ಆಹಾರ, ಇಂಧನ, ಔಷಧಗಳ ಕೊರತೆ ಉಲ್ಬಣಿಸಿದೆ.
ಮನೆಯಿಂದ ಕೆಲಸಕ್ಕೆ ಉತ್ತೇಜನ
ತೈಲ ದರ ಏರಿಕೆ ಮತ್ತು ಇಂಧನ ಕೊರತೆಯನ್ನು ಎದುರಿಸುವ ನಿಟ್ಟಿನಲ್ಲಿ ಮನೆಯಿಂದಲೇ ಕೆಲಸಗಳನ್ನು ಮಾಡಲು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜಯಶೇಖರ ಸರಕಾರಿ ಉದ್ಯೋಗಿಗಳಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: Explainer: ಶ್ರೀಲಂಕಾದಲ್ಲಿ ಮತ್ತೆ ಎಮರ್ಜೆನ್ಸಿ, ಹಸಿವು, ಪ್ರತಿಭಟನೆ, ಹಾಹಾಕಾರ