Site icon Vistara News

PhonePe : ಫೋನ್‌ಪೇ ಬಳಕೆದಾರರು ಈಗ ವಿದೇಶಗಳಲ್ಲೂ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು: ಕಂಪನಿ ಘೋಷಣೆ

phonepe

ನವ ದೆಹಲಿ: ಫೋನ್‌ಪೇ ( PhonePe) ಬಳಕೆದಾರರು ಯುಪಿಐ ಮೂಲಕ ವಿದೇಶಗಳಲ್ಲಿ ಕೂಡ ಹಣ ಪಾವತಿ ಮಾಡಬಹುದು. ನೀವು ವಿದೇಶಗಳಿಗೆ ಪ್ರಯಾಣ ಮಾಡುವಾಗ ಇದರಿಂದ ಅನುಕೂಲವಾಗಲಿದೆ. ವಿದೇಶಿ ವ್ಯಾಪಾರಿಗಳಿಗೆ ಫೋನ್‌ಪೇನಲ್ಲಿ ಯುಪಿಐ ಮೂಲಕ ಹಣ ಪಾವತಿ ಮಾಡಬಹುದು. ಗ್ರಾಹಕರು ಸಿಂಗಾಪುರ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ಮಾರಿಷಸ್‌, ಭೂತಾನ್‌ ಮತ್ತು ನೇಪಾಳದಲ್ಲಿ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು. ಆದರೆ ಅವರು ಸ್ಥಳೀಯ ಕ್ಯೂಆರ್‌ ಕೋಡ್‌ ಹೊಂದಿರಬೇಕು ಎಂದು ಫೋನ್‌ಪೇ ತಿಳಿಸಿದೆ.

ಎನ್‌ಐಪಿಎಲ್‌ (ಎನ್‌ಪಿಸಿಐ ಇಂಟರ್‌ನ್ಯಾಶನಲ್‌ ಪೇಮೆಂಟ್ಸ್‌ ಲಿಮಿಟೆಡ್)‌ ಸಹಯೋಗದಲ್ಲಿ ಫೋನ್‌ ಪೇ ತನ್ನ ಯುಪಿಐ ಇಂಟರ್‌ನ್ಯಾಶನಲ್‌ ಸೇವೆಯನ್ನು ಆರಂಭಿಸಿದ್ದು, ಶೀಘ್ರದಲ್ಲಿ ಮತ್ತಷ್ಟು ದೇಶಗಳಿಗೆ ವಿಸ್ತರಿಸಲಿದೆ. ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NCPI) ಈ ಹಿಂದೆ ಅಂತಾರಾಷ್ಟ್ರೀಯ ಯುಪಿಐ ಪೇಮೆಂಟ್‌ಗಳಿಗೆ ಬೆಂಬಲ ಸೂಚಿಸಿತ್ತು.

ಕಳೆದ ಆರು ವರ್ಷಗಳಲ್ಲಿ ನಾವು ಯುಪಿಐ ಪೇಮೆಂಟ್‌ಗಳ ಕ್ರಾಂತಿಯಲ್ಲಿ ತೊಡಗಿಸಿಕೊಂಡಿದ್ದೆವು. ಜನರ ದೈನಂದಿನ ಪಾವತಿಗೆ ಇದರಿಂದ ಅನುಕೂಲವಾಗಿದೆ. ಯುಪಿಐ ಇಂಟರ್‌ನ್ಯಾಶನಕ್‌ ಇತರ ಜಗತ್ತಿಗೂ ಯುಪಿಐ ವಿಸ್ತರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಸೌಲಭ್ಯ ಕ್ರಾಂತಿಕಾರಕವಾಗಿ ಸಹಕರಿಸಲಿದೆ. ವಿದೇಶಗಳಿಗೆ ತೆರಳುವ ಭಾರತೀಯರಿಗೆ ಅಲ್ಲಿನ ಅಂಗಡಿಗಳಲ್ಲಿ, ಮಾಲ್‌ಗಳಲ್ಲಿ ಪೇಮೆಂಟ್‌ಗೆ ಅನುಕೂಲವಾಗಲಿದೆ. ಈ ಬದಲಾವಣೆಯಲ್ಲಿ ಫೋನ್‌ಪೇ ಮುಂಚೂಣಿಯಲ್ಲಿರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದು ಫೋನ್‌ಪೇಯ ಸಹ ಸಂಸ್ಥಾಪಕ ರಾಹುಲ್‌ ಚಾರಿ.

ಫೋನ್‌ಪೇ ಬಳಕೆದಾರರು ವಿದೇಶ ಪ್ರವಾಸಕ್ಕೆ ಮುನ್ನ ತಮ್ಮ ಯುಪಿಐ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಯನ್ನು ಯುಪಿಐ ಇಂಟರ್‌ನ್ಯಾಶನಲ್‌ ಸೇವೆಗೆ ಸಕ್ರಿಯಗೊಳಿಸಬಹುದು. ಭಾರತೀಯ ಬ್ಯಾಂಕ್‌ಗಳನ್ನು ಬಳಸಿಕೊಂಡು ಪೇಮೆಂಟ್‌ ಮಾಡಬಹುದು. ಸ್ವೀಕರಿಸುವವರು ಸ್ಥಳೀಯ ಕರೆನ್ಸಿಯಲ್ಲಿ ಪಡೆಯಬಹುದು. ಇದರಿಂದಾಗಿ ಇಂಟರ್‌ನ್ಯಶನಲ್‌ ಕ್ರೆಡಿಟ್‌, ಡೆಬಿಟ್‌ ಮತ್ತು ಫೋರೆಕ್ಸ್‌ ಕಾರ್ಡ್‌ಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ಈ ಫೀಚರ್‌ ಅನ್ನು ಫೋನ್‌ಪೇ ಅನಾವರಣಗೊಳಿಸಿದ್ದು, ಗ್ರಾಹಕರಿಗೆ ಅವರ ಸ್ಮಾರ್ಟ್‌ಫೋನ್‌ನಲ್ಲಿ ಕೆಲ ದಿನಗಳಲ್ಲಿ ಲಭಿಸಲಿದೆ ಎಂದು ಕಂಪನಿ ತಿಳಿಸಿದೆ.

Exit mobile version