ಬೆಂಗಳೂರು: ಸ್ವಂತ ಮನೆ ಹೊಂದಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಆದರೆ ಈ ದುಬಾರಿ ದುನಿಯಾದಲ್ಲಿ ಸ್ವಂತದ್ದೊಂದು ಸೂರು ಕಟ್ಟಿಕೊಳ್ಳುವ ಆಸೆ ದುಬಾರಿಯೇ ಸರಿ. ಅದರಲ್ಲಿಯೂ ಮಧ್ಯಮ ಮತ್ತು ಬಡ ವರ್ಗದ ಕುಟುಂಬದವರಂತೂ ಇದಕ್ಕಾಗಿ ಜೀವಮಾನವಿಡೀ ದುಡಿದಿದ್ದನ್ನು ಮೀಸಲಿಡಬೇಕಾದ ಸ್ಥಿತಿ ಇದೆ. ಆದರೆ ಗೊತ್ತಿರಲಿ ಇಂತಹವರಿಗೆಂದೇ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana-PMAY) ಜಾರಿಗೆ ತಂದಿದೆ. ಅಂದರೆ ಕೇಂದ್ರ ಸರ್ಕಾರ ಈ ಯೋಜನೆ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗಾಗಿ ಮನೆ ನಿರ್ಮಿಸಿ ಕೊಡುತ್ತಿದೆ. ಹಾಗಾದರೆ ಏನಿದು ಯೋಜನೆ? ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಮುಂತಾದ ವಿವರ ಇಲ್ಲಿದೆ (How To Apply For PMAY).
ಏನಿದು ಯೋಜನೆ?
ದೇಶದ ಎಲ್ಲರಿಗೂ ಸೂರು ಒದಗಿಸಬೇಕು ಎನ್ನುವ ಗುರಿಯೊಂದಿಗೆ ಕೇಂದ್ರ ಸರ್ಕಾರ 2015-16ರಲ್ಲಿ ಈ ಯೋಜನೆಯನ್ನು ಪರಿಚಯಿಸಿದೆ. ಈ ಮೂಲಕ ನಗರ ಮತ್ತು ಗ್ರಾಮೀಣದ ಪ್ರದೇಶದ ಬಡ ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿರುವ ಮನೆ ನಿರ್ಮಿಸಿ ಕೊಡಲಾಗುತ್ತದೆ. ಈ ಯೋಜನೆಯಡಿ ವಾರ್ಷಿಕ ಶೇ. 6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ. 10 ವರ್ಷಗಳಲ್ಲಿ ಈ ಯೋಜನೆ ಮೂಲಕ ಸುಮಾರು 4.21 ಮನೆಗಳನ್ನು ನಿರ್ಮಿಸಲಾಗಿದೆ. ಈ ಬಾರಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ 3 ಕೋಟಿ ಮನೆಗಳನ್ನು ನಿರ್ಮಿಸಿ ಕೊಡುವ ತೀರ್ಮಾನವನ್ನು ಈಗಾಗಲೇ ಪ್ರಕಟಿಸಿದೆ. ಮೊದಲ ಸಂಪುಟ ಸಭೆಯಲ್ಲಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮನೆಯಲ್ಲಿ ಏನಿರಲಿದೆ?
ಸರ್ಕಾರ ನಿರ್ಮಿಸಿ ಕೊಡುವ ಈ ಮನೆ ಅಗತ್ಯ ಮೂಲ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಶೌಚಾಲಯ, ಎಲ್‌ಪಿಜಿ ಕನೆಕ್ಷನ್, ವಿದ್ಯುತ್ ಸಂಪರ್ಕ ಮತ್ತು ನೀರಿನ ಸೌಲಭ್ಯ ಹೊಂದಿರುತ್ತದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನಗರ ಮತ್ತು ಗ್ರಾಮೀಣ ಎನ್ನುವ ಎರಡು ವಿಧವಿದೆ.
ಈ ಯೋಜನೆಯನ್ನು ಫಲಾನುಭವಿಗಳ ವಾರ್ಷಿಕ ಆದಾಯದ ಆಧಾರದಲ್ಲಿ 4 ವರ್ಗಗಳನ್ನಾಗಿ ವಿಂಗಡಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗ (EWS)- 3 ಲಕ್ಷ ರೂ.ವರೆಗೆ ಆದಾಯ
ಕಡಿಮೆ ಆದಾಯದ ಗುಂಪು (LIG): 3 ಲಕ್ಷ ರೂ.- 6 ರೂ. ಆದಾಯ
ಮಧ್ಯಮ ಆದಾಯದ ಗುಂಪು-1 (MIG-1): 6 ಲಕ್ಷ ರೂ.- 12 ರೂ. ಆದಾಯ
ಮಧ್ಯಮ ಆದಾಯದ ಗುಂಪು-1 (MIG-2): 12 ಲಕ್ಷ ರೂ.- 18 ರೂ. ಆದಾಯ
ಯಾರೆಲ್ಲ ಅರ್ಹರು?
- ಫಲಾನುಭವಿ ಭಾರತದ ನಿವಾಸಿಯಾಗಿರಬೇಕು.
- ಫಲಾನುಭವಿ ಶಾಶ್ವತ ಮನೆ ಹೊಂದಿರಬಾರದು.
- ಫಲಾನುಭವಿ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಫಲಾನುಭವಿಯ ಹೆಸರು ಪಡಿತರ ಚೀಟಿ ಅಥವಾ ಪಿಬಿಎಲ್ ಪಟ್ಟಿಯಲ್ಲಿರಬೇಕು.
- ಫಲಾನುಭವಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರಬೇಕು. ಅಲ್ಲದೆ ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು (ಅಧಾರ್ ಕಾರ್ಡ್, ಲೈಸನ್ಸ್ ಇತ್ಯಾದಿ).
- ಫಲಾನುಭವಿಯ ಕುಟುಂಬದವರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಯೋಜನೆ ವೈಶಿಷ್ಟ್ಯ
- ಈ ಯೋಜನೆ ದೇಶದ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯವಾಗುತ್ತದೆ
- ಈ ಯೋಜನೆಯಡಿ, ಎಲ್ಲ ಫಲಾನುಭವಿಗಳಿಗೆ ವಾರ್ಷಿಕ ಶೇ. 6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ಲಭ್ಯ.
- ನೆಲ ಮಹಡಿಯಲ್ಲಿರುವ ಮನೆಗಳು ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮೀಸಲು.
- ಗೃಹ ನಿರ್ಮಾಣದಲ್ಲಿ ಸುಸ್ಥಿರ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆ.
- ಮನೆ ಅಗತ್ಯ ಮೂಲ ಸೌಕರ್ಯ ಹೊಂದಿದ್ದು, ಹೆಚ್ಚುವರಿ ಕಾಮಗಾರಿ ಬೇಕಾದರೆ ಕೈಗೊಳ್ಳಬಹುದಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ https://pmaymis.gov.in/ಗೆ ಭೇಟಿ ನೀಡಿ
- ಅಥವಾ ಇಲ್ಲಿ ಕ್ಲಿಕ್ ಮಾಡಿ.
- ಹೋಮ್ಪೇಜ್ನಲ್ಲಿ ಕಂಡು ಬರುವ PM Awas Yojana ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿ ನೀಡಿ ಹೆಸರು ನೋಂದಾಯಿಸಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.
ಆಫ್‌ಲೈನ್ ಮೂಲಕವೂ ನೀವು ಅರ್ಜಿ ಸಲ್ಲಿಬಹುದು. ಇದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (Common Service Center) ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ 1800-11-3377, 1800-11-3388 ನಂಬರ್‌ಗೆ ಕರೆ ಮಾಡಿ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ.
- ಅರ್ಜಿದಾರರ ಫೋಟೊ
- ಫಲಾನುಭವಿಯ ಜಾಬ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಸಂಖ್ಯೆ.
- ಬ್ಯಾಂಕ್ ಪಾಸ್ಬುಕ್.
- ಸ್ವಚ್ಛ ಭಾರತ್ ಮಿಷನ್ (SBM) ನೋಂದಣಿ ಸಂಖ್ಯೆ.
- ಮೊಬೈಲ್ ನಂಬರ್.
ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ