Site icon Vistara News

ವಿಸ್ತಾರ Explainer: ವಿದ್ಯುತ್‌ ಘಟಕಗಳಲ್ಲಿ ಇನ್ನು 9 ದಿನಗಳಿಗೆ ಮಾತ್ರ ಕಲ್ಲಿದ್ದಲು ಲಭ್ಯ, ಆಮದಿಗೆ ಕೇಂದ್ರ ಸೂಚನೆ

coal

ನವದೆಹಲಿ: ದೇಶದ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಇನ್ನು ಕೇವಲ 9 ದಿನಗಳಿಗೆ ಮಾತ್ರ ಸಾಕಾಗುವಷ್ಟು ಕಲ್ಲಿದ್ದಲು ಉಳಿದಿದ್ದು, ತೀವ್ರ ವಿದ್ಯುತ್‌ ಬಿಕ್ಕಟ್ಟು ಉಂಟಾಗುವ ಆತಂಕ ಸೃಷ್ಟಿಯಾಗಿದೆ.

ಹೀಗಾಗಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಂತೆ ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಕಲ್ಲಿದ್ದಲು ಗಣಿಗಾರಿಕೆ ಮತ್ತು ಸಂಸ್ಕರಣೆ ಕಂಪನಿಯಾದ ಕೋಲ್ ಇಂಡಿಯಾ ಲಿಮಿಟೆಡ್‌ (CIL), ಕಳೆದ ಬುಧವಾರ 24 ಲಕ್ಷ ಟನ್‌ ಕಲ್ಲಿದ್ದಲು ಆಮದಿಗೆ ಅಂತಾರಾಷ್ಟ್ರೀಯ ಟೆಂಡರ್‌ ಕರೆದಿದೆ. ತಕ್ಷಣಕ್ಕೆ ಸಮಸ್ಯೆ ಬಗೆಹರಿಸಲು ಕಲ್ಲಿದ್ದಲಿನ ಆಮದು ಹೊರತುಪಡಿಸಿ ಬೇರೆ ದಾರಿ ಇಲ್ಲ ಎಂಬಂತಾಗಿದೆ. ಕೋಲ್‌ ಇಂಡಿಯಾ ಎಂದರೆ ಕಡಿಮೆ ಎಂದು ಅಂದುಕೊಳ್ಳಬೇಡಿ. ಜಗತ್ತಿನಲ್ಲೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ಕಂಪನಿಯಿದು. ಇಲ್ಲಿ 2.72 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಭಾರತದ ಕಲ್ಲಿದ್ದಲು ಉತ್ಪಾದನೆಯಲ್ಲಿ 82% ಭಾಗವನ್ನು ಕೋಲ್‌ ಇಂಡಿಯಾ ಏಕಾಂಗಿಯಾಗಿ ಭರಿಸುತ್ತದೆ.

ಅಂಥ ಕೋಲ್‌ ಇಂಡಿಯಾಕ್ಕೂ ಈಗ ದಿಢೀರ್‌ ಬೇಡಿಕೆಯನ್ನು ಪೂರೈಸಲು ಕಲ್ಲಿದ್ದಲು ಆಮದು ಮಾಡಿಕೊಳ್ಳಬೇಕಾದ ಸನ್ನಿವೇಶ ಉಂಟಾಗಿದೆ. ‌ ಆಮದು ಟೆಂಡರ್‌ಗೆ ಬಿಡ್ ಸಲ್ಲಿಸಲು ಜೂನ್‌ 29 ಕೊನೆಯ ದಿನಾಂಕವಾಗಿದೆ. ಅಗತ್ಯಕ್ಕಿರುವ ಶೇ.10 ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಂತೆ ಇಂಧನ ಸಚಿವಾಲಯವು ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಸೂಚಿಸಿದೆ.

ಈ ಸಲದ ಬಿರು ಬೇಸಗೆಯಲ್ಲಿ ವಿದ್ಯುತ್‌ಗೆ ಭಾರಿ ಬೇಡಿಕೆ ಉಂಟಾಗಿದ್ದು, ಪೂರೈಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ.

ಭಾರತದಲ್ಲಿ 2022ರ ಜೂನ್‌ 9ಕ್ಕೆ ದಾಖಲೆಯ 2,10,793 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆ ಉಂಟಾಗಿತ್ತು ಎಂದು ಇಂಧನ ಸಚಿವ ಆರ್‌ಕೆ ಸಿಂಗ್‌ ಗುರುವಾರ ಟ್ವೀಟ್‌ ಮಾಡಿದ್ದರು. ಇದು ದಾಖಲೆಯ ಬೇಡಿಕೆಯಾಗಿದ್ದು, ತಾಪಮಾನದಲ್ಲಿ ಉಂಟಾಗಿರುವ ಏರಿಕೆ ಇದಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ ತಾಪಮಾನದ ಸಮಸ್ಯೆ ಇನ್ನೂ ಕಾಡಲಿದೆ. ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ, ವಿದ್ಯುತ್‌ ಘಟಕಗಳಲ್ಲಿ 23.9 ಟನ್‌ ಕಲ್ಲಿದ್ದಲು ಲಭ್ಯವಿದ್ದು, ಇದು 9 ದಿನಗಳಿಗೆ ಮಾತ್ರ ಸಾಕು.

2022 ಜುಲೈ-ಸೆಪ್ಟೆಂಬರ್‌ನಲ್ಲಿ ಅಂದಾಜು ಕಲ್ಲಿದ್ದಲು ಕೊರತೆ

ಕಲ್ಲಿದ್ದಲು ಪೂರೈಕೆ‌ ನಿರೀಕ್ಷೆ15.47 ಕೋಟಿ ಟನ್
ಕಲ್ಲಿದ್ದಲು ಅಗತ್ಯ19.73 ಕೋಟಿ ಟನ್
ಕೊರತೆ4.25 ಕೋಟಿ ಟನ್

ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲೇ ಆಧಾರ

ದೇಶದಲ್ಲಿ ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲು ಬಹು ಮುಖ್ಯ. ಶೇ.70 ವಿದ್ಯುತ್‌ ಬೇಡಿಕೆಯನ್ನು ಕಲ್ಲಿದ್ದಲು ಉರಿಸಿಯೇ ಭರಿಸಲಾಗುತ್ತದೆ. ದೇಶದ 100ಕ್ಕೂ ಹೆಚ್ಚು ವಿದ್ಯುತ್‌ ಘಟಕಗಳಲ್ಲಿ ಈಗ ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ಸಮಸ್ಯೆ ಗಂಭೀರವಾಗಿದೆ. ಸ್ಟಾಕ್‌ನಲ್ಲಿ ಅಗತ್ಯವಾಗಿ ಇರಲೇಬೇಕಾದ ಮಟ್ಟಕ್ಕಿಂತ ಶೇ.25ರಷ್ಟು ಕಡಿಮೆಯಾಗಿದೆ. ಒಟ್ಟಾರೆ ಲಭ್ಯತೆ ಇನ್ನು 9 ದಿನಗಳಿಗೆ ಸಾಕು. ಏಪ್ರಿಲ್‌ ವೇಳೆಗೇ 173 ಉಷ್ಣ ವಿದ್ಯುತ್‌ ಸ್ಥಾವರಗಳ ಪೈಕಿ 85ರಲ್ಲಿ ದೇಶೀಯ ಕಲ್ಲಿದ್ದಲು ದಾಸ್ತಾನು ಶೇ.25ಕ್ಕಿಂತ ಕೆಳಕ್ಕಿಳಿದಿತ್ತು. 11 ಘಟಕಗಳಲ್ಲಿ ವಿದೇಶಗಳಿಂದ ಆಮದು ಮಾಡಿರುವ ಕಲ್ಲಿದ್ದಲನ್ನು ಬಳಸಲಾಗುತ್ತಿದೆ. ಏಪ್ರಿಲ್‌ ನಲ್ಲಿ ಕೋಲ್‌ ಇಂಡಿಯಾ ತನ್ನ ಕಲ್ಲಿದ್ದಲು ಉತ್ಪಾದನೆಯಲ್ಲಿ 27% ಏರಿಸಿತ್ತು. ಆದರೂ ಸಾಲುತ್ತಿಲ್ಲ.

ಹಲವು ರಾಜ್ಯಗಳಲ್ಲಿ ಲೋಡ್‌ ಶೆಡ್ಡಿಂಗ್:‌

ವಿದ್ಯುತ್‌ ಬೇಡಿಕೆ ಹೆಚ್ಚಳವಾಗಿ ಪೂರೈಕೆ ಕಷ್ಟವಾಗುತ್ತಿರುವುದರಿಂದ ಹಲವು ರಾಜ್ಯಗಳಲ್ಲಿ ಲೋಡ್‌ ಶೆಡ್ಡಿಂಗ್‌ ಶುರುವಾಗಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್‌, ಬಿಹಾರ, ಹರಿಯಾಣ, ಉತ್ತರಾಖಂಡ್‌ನಲ್ಲಿ ಲೋಡ್‌ ಶೆಡ್ಡಿಂಗ್‌ ಜಾರಿಯಲ್ಲಿದೆ.

ಕಲ್ಲಿದ್ದಲು ಕೊರತೆಗೆ ಕಾರಣವೇನು?

ಭಾರತ ತನ್ನ 70% ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲನ್ನು ಅವಲಂಬಿಸಿದೆ. ಇದರಲ್ಲಿ 12% ಆಮದು ಮಾಡಿಕೊಳ್ಳುವ ಕಲ್ಲಿದ್ದಲು ಬೇಕು. ರಷ್ಯಾ-ಉಕ್ರೇನ್‌ ಸಮರದ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ಪೂರೈಕೆ ಅಸ್ತವ್ಯಸ್ತವಾಗಿದೆ. ಆಮದು ತುಟ್ಟಿಯಾಗಿದೆ. 2022-23ರಲ್ಲಿ ಭಾರತದ ಕಲ್ಲಿದ್ದಲು ಆಮದು ವೆಚ್ಚದಲ್ಲಿ 35% ಏರಿಕೆಯನ್ನು ನಿರೀಕ್ಷಿಸಲಾಗಿದೆ.

ದೇಶದಲ್ಲಿ ಕಳೆದ ಮಾರ್ಚ್‌ ಬಳಿಕ ಭಾರಿ ಉಷ್ಣ ಹವೆಯಿಂದ, ಬಿಸಿ ಗಾಳಿಯಿಂದಾಗಿ ವಿದ್ಯುತ್‌ ಬಳಕೆ ಮತ್ತು ಡಿಮಾಂಡ್‌ ದಿಢೀರ್‌ ಹೆಚ್ಚಳವಾಗಿದೆ. ಇದರಿಂದ ಮಾರ್ಚ್‌ ಮಧ್ಯಭಾಗದಲ್ಲಿ ವಿದ್ಯುತ್‌ ಬೇಡಿಕೆಯನ್ನು 199 ಗಿಗಾ ವ್ಯಾಟ್‌ಗೆ ಹೆಚ್ಚಿಸಿತ್ತು. ಹೀಗಾಗಿ ಕಲ್ಲಿದ್ದಲು ಕೊರತೆಯಾಗಿದೆ.

ಕೋಲ್‌ ಇಂಡಿಯಾಕ್ಕೆ ಬರಬೇಕಿರುವ ಬಾಕಿ 12,300 ಕೋಟಿ ರೂ.

ಕೋಲ್‌ ಇಂಡಿಯಾಕ್ಕೆ ವಿದ್ಯುತ್‌ ಉತ್ಪಾದನಾ ಕಂಪನಿಗಳಿಂದ ಕಲ್ಲಿದ್ದಲು ಪೂರೈಕೆ ವಿಚಾರದಲ್ಲಿ ಬರಬೇಕಿರುವ ಬಾಕಿ ಮೊತ್ತವೇ 12,300 ಕೋಟಿ ರೂ.ಗೆ ಏರಿಕೆಯಾಗಿದೆ. ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ ವಿದ್ಯುತ್‌ ವಿತರಣೆ ಕಂಪನಿಗಳು (discoms) ನೀಡಬೇಕಿರುವ ಬಾಕಿ 1.1 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಡಿಸ್ಕಾಂಗಳು 5 ಲಕ್ಷ ಕೋಟಿ ರೂ. ನಷ್ಟದಲ್ಲಿವೆ. ಈ ಪೇಮೆಂಟ್‌ ಬಿಕ್ಕಟ್ಟನ್ನು ಬಗೆಹರಿಸಬೇಕಾಗಿದೆ ಎನ್ನುತ್ತಾರೆ ತಜ್ಞರು.

ಸರಕಾರ ಏನು ಮಾಡುತ್ತಿದೆ?

ಕಳೆದ ಏಪ್ರಿಲ್‌ ಮೊದಲಾರ್ಧದಲ್ಲಿ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ 14.2% ಏರಿಕೆ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ.

ರಾಜ್ಯಗಳಿಗೆ ಕಳೆದ ಮೇ 31ರ ತನಕ ರೈಲುಗಳ ಮೂಲಕ ಹೆಚ್ಚುವರಿ 87.5 ಲಕ್ಷ ಟನ್‌ ಕಲ್ಲಿದ್ದಲು ಪೂರೈಕೆ ಮಾಡಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ.

ದೀಘಕಾಲೀನ ಪರಿಹಾರವೇನು?

ಪರಿಸರಸ್ನೇಹಿಯಾಗಿರುವ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದನೆಯನ್ನು ವ್ಯಾಪಕವಾಗಿ ಹೆಚ್ಚಿಸಬೇಕು. ಈಗಾಗಲೇ ಈ ನಿಟ್ಟಿನಲ್ಲಿ ಭಾರತ ತನ್ನ ಪ್ರಯತ್ನವನ್ನು ಮುಂದುವರಿಸಿದೆ. 2022ರ ಏಪ್ರಿಲ್‌-ಮೇ ಅವಧಿಯಲ್ಲಿ ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ, ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದನಯ ಕೊಡುಗೆ 10.2% ರಿಂದ 14.1% ಕ್ಕೆ ಹೆಚ್ಚಳವಾಗಿದೆ.

Exit mobile version