Site icon Vistara News

Price hike : ಇಂದಿನಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು?

shoping centre

#image_title

ನವ ದೆಹಲಿ: ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್‌ 1ರಿಂದ ಜಾರಿಯಾಗುತ್ತಿವೆ. ಇದರ ಪರಿಣಾಮ ಏಪ್ರಿಲ್‌ 1ರಿಂದ ಕೆಲವು ವಸ್ತುಗಳು ದುಬಾರಿಯಾಗುತ್ತವೆ. ( Price hike) ಮತ್ತೆ ಕೆಲವು ಅಗ್ಗವಾಗಲಿದೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ 2023ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಆಮದು ಸುಂಕವನ್ನು 2023-24ರ ಬಜೆಟ್‌ನಲ್ಲಿ ಹೆಚ್ಚಿಸಿದೆ. ಜತೆಗೆ ಹೊಸ ನಿಯಮಾವಳಿಗಳೂ ಜಾರಿಯಾಗಲಿವೆ. ಇವೆಲ್ಲವುಗಳ ವಿವರ ಇಲ್ಲಿದೆ.

ಯಾವುದು ದುಬಾರಿ?

ಎಲ್‌ಇಡಿ ಬಲ್ಬ್‌, ಸಿಗರೇಟ್‌, ಖಾಸಗಿ ಜೆಟ್‌, ಹೆಲಿಕಾಪ್ಟರ್‌, ಹೈ-ಎಂಡ್‌ ಎಲೆಕ್ಟ್ರಾನಿಕ್‌ ಉತ್ಪನ್ನಗಳು, ಪ್ಲಾಸ್ಟಿಕ್‌ ವಸ್ತುಗಳು, ಬೆಳ್ಳಿ, ಇಮಿಟೇಶನ್ ಜ್ಯುವೆಲ್ಲರಿ, ‌ಚಿನ್ನದ ಗಟ್ಟಿ, ಪ್ಲಾಟಿನಮ್‌, ಹೈ-ಗ್ಲಾಸ್‌ ಪೇಪರ್‌, ಕಿಚನ್‌ ಚಿಮಿಣಿಗಳು, ವಿಟಮಿನ್‌ಗಳು ದುಬಾರಿಯಾಗಲಿವೆ. ದೇಶೀಯ ವಿಮಾನ ಪ್ರಯಾಣಕ್ಕೆ ಸಂಬಂಧಿಸಿ ಸೆಕ್ಯುರಿಟಿ ಶುಲ್ಕವು 160 ರೂ.ಗಳಿಂದ 200 ರೂ.ಗೆ ಏರಿಕೆಯಾಗಿದೆ.

ಔಷಧಗಳ ದರ ಏರಿಕೆ: ಏ.1ರಿಂದ ಗ್ರಾಹಕರು ಹಲವಾರು ಪೇನ್‌ಕಿಲ್ಲರ್ಸ್‌, ಆಂಟಿ ಬಯೋಟಿಕ್ಸ್‌ ಔಷಧಗಳ ದರ ಏರಿಕೆಯನ್ನು ಎದುರಿಸಲಿದ್ದಾರೆ. ಇವುಗಳ ದರದಲ್ಲಿ 12% ತನಕ ಹೆಚ್ಚಳ ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರವು ಸಗಟು ಹಣದುಬ್ಬರ ಸೂಚ್ಯಂಕವನ್ನು ಆಧರಿಸಿ ದರಗಳನ್ನು ನಿಯಂತ್ರಿಸುತ್ತದೆ.

ಕಾರುಗಳ ದರ ಹೆಚ್ಚಳ: ಟಾಟಾ ಮೋಟಾರ್ಸ್‌, ಹೋಂಡಾ ಕಾರ್ಸ್‌, ಹೀರೋಮೋಟೊಕಾರ್ಪ್‌ ಸೇರಿದಂತೆ ಆಟೊಮೊಬೈಲ್‌ ವಲಯದ ಕಂಪನಿಗಳು ಕಾರುಗಳ ದರಗಳನ್ನು ಏಪ್ರಿಲ್‌ 1 ರಿಂದ ಏರಿಸುತ್ತಿವೆ. BS6 ಮಾಲಿನ್ಯ ನಿಯಂತ್ರಣ ನಿಯಮಗಳ ಎರಡನೇ ಹಂತ ಏ.1ರಿಂದ ಜಾರಿಯಾಗುತ್ತಿದೆ. ಇದರಿಂದ ಎಲ್ಲ ಹೊಸ ವಾಹನಗಳು ಬಿಗಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ಹೊಸ ಕಾರುಗಳು ತುಟ್ಟಿಯಾಗಬಹುದು.

ಎಕ್ಸ್‌ -ರೇ ಮೆಶೀನ್‌ ದುಬಾರಿ: ಸರ್ಕಾರ ಎಕ್ಸ್‌ -ರೇ ಮೆಶೀನ್‌ಗಳ (X-ray machine) ಆಮದು ಸುಂಕದಲ್ಲಿ 2023ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ 15% ಏರಿಸಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಗೆ ಅನುಸಾರವಾಗಿ ಕಸ್ಟಮ್ಸ್‌ ಸುಂಕದಲ್ಲಿ ಬದಲಾವಣೆ ತರಲಾಗಿದೆ. ಪ್ರಸ್ತುತ ಪೋರ್ಟಬಲ್‌ ಎಕ್ಸ್-ರೇ ಮೆಶೀನ್‌ ಮತ್ತು ನಾನ್-ಪೋರ್ಟೆಬಲ್‌ ಎಕ್ಸ್-ರೇ ಮೆಶೀನ್‌ 10% ಆಮದು ಸುಂಕವನ್ನು ಹೊಂದಿವೆ.

ಯಾವುದು ಅಗ್ಗ : ಮೊಬೈಲ್‌ ಫೋನ್‌, ಭಾರತದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್‌ಫೋನ್‌ನ ಬಿಡಿಭಾಗಗಳು, ಟಿ.ವಿ, ಆಟಿಕೆಗಳು, ಸೈಕಲ್‌, ಲಿಥಿಯಂ ಬ್ಯಾಟರಿ, ಎಲ್‌ಇಡಿ ಟಿವಿ, ಎಲೆಕ್ಟ್ರಿಕ್‌ ವಾಹನ, ಕ್ಯಾಮೆರಾ ಲೆನ್ಸ್‌ ಮೇಲಿನ ಸುಂಕ ಇಳಿಕೆಯ ಪರಿಣಾಮ ಇವುಗಳ ದರ ಇಳಿಕೆ ನಿರೀಕ್ಷಿಸಲಾಗಿದೆ.

ಪೇಮೆಂಟ್‌ ಬ್ಯಾಂಕ್‌ ಶುಲ್ಕ: ಅಂಚೆ ಇಲಾಖೆಯು ತನ್ನ ಪೇಮೆಂಟ್‌ ಬ್ಯಾಂಕ್‌ನಲ್ಲಿ 10,000 ರೂ.ಗಿಂತ ಹೆಚ್ಚಿನ ಠೇವಣಿ ಇಡಲು ಹಾಗೂ 25,000 ರೂ.ಗಿಂತ ಹೆಚ್ಚಿನ ವಿತ್‌ ಡ್ರಾವಲ್ಸ್‌ಗೆ ಶುಲ್ಕ ಅನ್ವಯವಾಗಲಿದೆ.

ಗೃಹ ಸಾಲ, ಹಿರಿಯ ನಾಗರಿಕರ ಎಫ್‌ಡಿ ದರದಲ್ಲಿ ಬದಲಾವಣೆ

ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ತಮ್ಮ ಗ್ರಾಹಕರಿಗೆ ನೀಡುವ ಗೃಹ ಸಾಲದ ದರದಲ್ಲಿ ಏರಿಕೆಯಾಗಲಿದೆ. ಹಲವು ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ನೀಡುತ್ತಿರುವ ಹಿರಿಯ ನಾಗರಿಕರ ಠೇವಣಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿವೆ. ಉದಾಹರಣೆಗೆ ಎಸ್‌ಬಿಐನ ವಿ ಕೇರ್‌ ಡೆಪಾಸಿಟ್‌ ಸ್ಕೀಮ್‌ ಯೋಜನೆ ಸ್ಥಗಿತವಾಗಲಿದೆ.

ಆದಾಯ ತೆರಿಗೆ ಇಲಾಖೆಯು ಬುಧವಾರ 2023-24 ಸಾಲಿಗೆ ( ಮೌಲ್ಯ ಮಾಪನಾ ವರ್ಷ-Assessment year 2023-24) ಆದಾಯ ತೆರಿಗೆ ರಿಟರ್ನ್‌ (Income Tax Return -ITR) ಫಾರ್ಮ್‌ಗಳನ್ನು ಬಿಡುಗಡೆಗೊಳಿಸಿದೆ. ಏಪ್ರಿಲ್‌ 1ರಿಂದ ಇದು ಜಾರಿಗೆ ಬರಲಿದೆ. ತೆರಿಗೆದಾರರ ಅನುಕೂಲಕ್ಕಾಗಿ ಎರಡು ತಿಂಗಳು ಮೊದಲೇ ಅಧಿಸೂಚನೆಗೊಳಿಸಲಾಗಿದೆ.‌

ಐಟಿಆರ್‌ ಫಾರ್ಮ್‌ಗಳಲ್ಲಿ ಬದಲಾವಣೆ:

ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್‌ ಫೈಲಿಂಗ್‌ ಅನ್ನು ಸುಲಭವಾಗಿಸಲು ಐಟಿಆರ್‌ ಫಾರ್ಮ್‌ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಗಣನೀಯ ಬದಲಾವಣೆ ಮಾಡಿಲ್ಲ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (Central Board Direct Taxes) ಕಳೆದ ಫೆಬ್ರವರಿ 10ರಂದು ಐಟಿಆರ್‌ ಫಾರ್ಮ್‌ಗಳ (1-6) ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ವೈಯಕ್ತಿಕ ತೆರಿಗೆದಾರರು, ವೃತ್ತಿಪರರು, ಬಿಸಿನೆಸ್‌ ನಡೆಸುವವರಿಗೆ ಐಟಿಆರ್‌ ಅರ್ಜಿ ನಮೂನೆಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಅರ್ಜಿ ನಮೂನೆಗಳು 2023ರ ಏಪ್ರಿಲ್‌ 1ರಿಂದ ಲಭಿಸಲಿವೆ.

ಐಟಿಆರ್‌ ಫಾರ್ಮ್‌ 1 (ಸಹಜ್)‌ ಮತ್ತು ಐಟಿಆರ್‌ ಫಾರ್ಮ್‌ 4 (ಸುಗಮ್)‌ ಭಾರಿ ಸಂಖ್ಯೆಯಲ್ಲಿ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಅನ್ವಯವಾಗುತ್ತದೆ. 50 ಲಕ್ಷ ರೂ. ತನಕ ಆದಾಯ ಇರುವವರು (ವೇತನ, ಒಂದು ವಸತಿ ಪ್ರಾಪರ್ಟಿ, 5,000 ರೂ. ತನಕ ಕೃಷಿ ಮೂಲದ ಆದಾಯ ಇರುವವರು, ಬಡ್ಡಿ ಮತ್ತು ಇತರ ಮೂಲಗಳಿಂದ ಆದಾಯ) ಐಟಿಆರ್-‌1 ಅನ್ನು ಭರ್ತಿ ಮಾಡಬೇಕು. 50 ಲಕ್ಷ ರೂ. ತನಕ ಆದಾಯ ಇರುವ ಕಂಪನಿಗಳು ಐಟಿಆರ್-‌4 ಅನ್ನು ಬಳಸಬೇಕು. ವಸತಿ ಆಸ್ತಿಗಳ ಮೂಲಕ ಆದಾಯ ಗಳಿಸುವವರು ಐಟಿಆರ್-‌2 ಅನ್ನು ಬಳಸಬೇಕು. ವೃತ್ತಿಪರರು ಐಟಿಆರ್-‌3 ಅನ್ನು ಭರ್ತಿಗೊಳಿಸಬೇಕು. ಐಟಿಆರ್-‌5, ಐಟಿಆರ್-‌6 ಅನ್ನು ಎಲ್‌ಎಲ್‌ಪಿಗಳು (ಲಿಮಿಟೆಡ್‌ ಲಾಯಬಿಲಿಟಿ ಪಾರ್ಟನರ್‌ಶಿಪ್)‌ ಮತ್ತು ಬಿಸಿನೆಸ್‌ ನಡೆಸುವವರು ಬಳಸಬಹುದು. ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ಚಾರಿಟೆಬಲ್‌ ಸಂಸ್ಥೆಗಳು ಐಟಿಆರ್‌ ಫಾರ್ಮ್‌ 7 ಅನ್ನು ಬಳಸಬಹುದು.

ಚಿನ್ನಾಭರಣ ಮಾರಾಟಕ್ಕೆ ಹಾಲ್‌ ಮಾರ್ಕ್‌ ಕಡ್ಡಾಯ

ಏಪ್ರಿಲ್‌ 1ರಿಂದ ಹಾಲ್‌ ಮಾರ್ಕ್‌ ಇಲ್ಲದ (Hallmark Unique Identification- HUID) ಆಭರಣಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ತಿಳಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಮಾರ್ಚ್‌ 31ರ ಬಳಿಕ ಹಾಲ್‌ ಮಾರ್ಕ್‌ ರಹಿತ ಚಿನ್ನಾಭರಣಗಳ ಮಾರಾಟಕ್ಕೆ ಅನುಮತಿ ಇರುವುದಿಲ್ಲ ಎಂದು ಇಲಾಖೆ ಹೇಳಿದೆ. ಹೀಗಾಗಿ ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ. ಈ ಹಿಂದೆ 4 ಅಂಕಿಗಳ ಎಚ್‌ಯುಐಡಿ ಬಳಸಲಾಗುತ್ತಿತ್ತು. ಈಗ 4 ಮತ್ತು 6 ಅಂಕಿಗಳನ್ನು ಬಳಸಲಾಗುತ್ತಿದೆ. ಆದರೆ ಮಾರ್ಚ್‌ 31ರ ಬಳಿಕ 6 ಅಂಕಿಗಳ ಕೋಡ್‌ ಮಾತ್ರ ಬಳಕೆಯಾಗಲಿದೆ.

Exit mobile version