ನವ ದೆಹಲಿ: ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆ ಸಂಸ್ಥೆಗಳನ್ನು (PSU) ಮುಚ್ಚುವಂತೆ ಕೇಂದ್ರ ಸರ್ಕಾರ, ಸಂಬಂಧಿಸಿದ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಬಗ್ಗೆ ದಿವಾಳಿ ಪ್ರಕ್ರಿಯೆ ಕುರಿತ ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿ ವಿಲೇವಾರಿ ಮಾಡಬೇಕು. ನಷ್ಟದಲ್ಲಿ ಮುಂದುವರಿದರೆ ಅಂಥ ಕಂಪನಿಗಳನ್ನು ಮುಚ್ಚಿ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಕೇಂದ್ರ ಸರ್ಕಾರ ನಷ್ಟದಲ್ಲಿರುವ ಸಾರ್ವಜನಿಕ ಕಂಪನಿಗಳನ್ನು ಮುಚ್ಚುವ ಮೂಲಕ ಉದ್ದಿಮೆಯಲ್ಲಿ ತನ್ನ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಬಯಸಿದೆ. ಆದ್ದರಿಂದ ನಷ್ಟದಲ್ಲಿರುವ ಸಾರ್ವಜನಿಕ ಕಂಪನಿಗಳು ಐಬಿಸಿ (Insolvency and Bankruptcy Code-IBC) ಕಾಯಿದೆಯ ಅಡಿಯಲ್ಲಿ ನಿರ್ಣಯ ಕೈಗೊಳ್ಳಬೇಕು. ಇದಕ್ಕೂ ಮುನ್ನ ಕ್ಯಾಬಿನೆಟ್‌ನ ಪ್ರಮುಖ ಸಚಿವರುಗಳನ್ನು ಒಳಗೊಂಡಿರುವ ಸಮಿತಿಯ ಅನುಮೋದನೆ ಪಡೆಯಬೇಕು. ನಷ್ಟದಲ್ಲಿರುವ ಸಾರ್ವಜನಿಕ ಕಂಪನಿ ಈ ಸಮಿತಿಯ ಅನುಮೋದನೆ ಗಳಿಸಿದ 9 ತಿಂಗಳಿನೊಳಗೆ ಮುಚ್ಚಲು ಸರ್ಕಾರ ಪರಿಶೀಲಿಸುತ್ತಿದೆ.
ಸಾರ್ವಜನಿಕ ಸಂಸ್ಥೆಗಳು ನಷ್ಟದಲ್ಲಿದ್ದು, ಸ್ಥಗಿತವಾಗಲು ಬಯಸುತ್ತಿದ್ದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿಯೂ ಮನವಿ ಸಲ್ಲಿಸಬಹುದು.