ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ದಿವಾಳಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಅನ್ನು ಅಲ್ಲಿನ ಮತ್ತೊಂದು ಹಳೆಯ, ಬಲಾಢ್ಯ ಬ್ಯಾಂಕ್ ಫಸ್ಟ್ ಸಿಟಿಜನ್ಸ್ ಬ್ಯಾಂಕ್ (first Citizens Bank) ಖರೀದಿಸಿದೆ. ಇದರೊಂದಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲ ಠೇವಣಿಗಳು, ಸಾಲಗಳು ಫಸ್ಟ್ ಸಿಟಿಜನ್ಸ್ ಬ್ಯಾಂಕ್ & ಟ್ರಸ್ಟ್ ಕಂಪನಿಯ ಪಾಲಾಗಿದೆ.
ನಾರ್ತ್ ಕರೊಲಿನಾ ಮೂಲದ ಫಸ್ಟ್ ಸಿಟಿಜನ್ಸ್ ಬ್ಯಾಂಕ್ 1898ರಲ್ಲಿ ಸ್ಥಾಪನೆಯಾಗಿದ್ದು, 7,176 ಉದ್ಯೋಗಿಗಳನ್ನು ಒಳಗೊಂಡಿದೆ. ಒಟ್ಟು 109 ಶತಕೋಟಿ ಡಾಲರ್ (ಅಂದಾಜು 8.93 ಲಕ್ಷ ಕೋಟಿ ರೂ.) ಆಸ್ತಿಯನ್ನು ನಿರ್ವಹಿಸುತ್ತಿದೆ. ಎಸ್‌ವಿಬಿ ಒಟ್ಟು 169 ಶತಕೋಟಿ ಡಾಲರ್ (ಅಂದಾಜು 13.69 ಲಕ್ಷ ಕೋಟಿ ರೂ.) ಆಸ್ತಿಯನ್ನು ಹೊಂದಿದೆ.
ಸ್ಟಾರ್ಟಪ್‌ಗಳಿಗೆ ಸಾಲ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ 2023ರ ಮಾರ್ಚ್ 10ರಂದು ದಿವಾಳಿಯಾಗಿತ್ತು. 1983ರಲ್ಲಿ ಈ ಬ್ಯಾಂಕ್ ಸ್ಥಾಪನೆಯಾಗಿದೆ. ಎಸ್‌ವಿಬಿಯ ಪತನ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತ್ತು.
ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಬ್ಯಾಲೆನ್ಸ್‌ಶೀಟ್‌ನಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ 200 ಕೋಟಿ ಡಾಲರ್ ನಿಧಿಯನ್ನು ಸಂಗ್ರಹಿಸಲು ಉದ್ದೇಶಿಸಿರುವುದಾಗಿ ಘೋಷಿಸಿದ ಬಳಿಕ ಕೇವಲ 48 ಗಂಟೆಗಳಲ್ಲಿ ಹೂಡಿಕೆದಾರರು ಆತಂಕದಿಂದ ವ್ಯಾಪಕವಾಗಿ ಷೇರುಗಳನ್ನು ಮಾರಾಟ ಮಾಡಿದರು. ಹೀಗಾಗಿ ಬ್ಯಾಂಕ್ ಪತನವಾಗಿತ್ತು.