ಮುಂಬಯಿ: ದೇಶವನ್ನು ತೀವ್ರವಾಗಿ ಕಾಡುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೊ ದರದಲ್ಲಿ (RBI Repo rate hike) ಈ ವರ್ಷ ಮೂರು ಹಂತಗಳಲ್ಲಿ ಒಟ್ಟು ೧.೪೦% ಏರಿಸಿದೆ. ಹಣದುಬ್ಬರದ ನಿಯಂತ್ರಣವೇ ಇದರ ಪ್ರಮುಖ ಉದ್ದೇಶ.
ರೆಪೊ ದರದಲ್ಲಿ ಕಳೆದ ಮೇನಲ್ಲಿ ೦.೪೦% ಜೂನ್ನಲ್ಲಿ ೦.೫೦% ಹಾಗೂ ಇದೀಗ ಆಗಸ್ಟ್ನಲ್ಲಿ ೦.೫೦% ಏರಿಕೆ ಮಾಡಿದೆ. ಪರಿಷ್ಕೃತ ರೆಪೊ ದರ ೫.೪೦% ಆಗಿದೆ. ಅಂದರೆ ಕೋವಿಡ್ ಪೂರ್ವ ಮಟ್ಟಕ್ಕೆ ರೆಪೊ ದರ ಏರಿಕೆಯಾಗಿದೆ.
ಆರ್ಬಿಐನ ೨೦೨೨-೨೩ರ ಸಾಲಿನ ೪ನೇ ಹಣಕಾಸು ನೀತಿ ಪರಾಮರ್ಶೆಯ ಮುಖ್ಯಾಂಶಗಳು
- ಆರ್ಬಿಐನ ಅಲ್ಪಾವಧಿಯ ಸಾಲದ ಬಡ್ಡಿ ದರದಲ್ಲಿ (ರೆಪೊ ದರ) ೦.೫೦% ಏರಿಕೆ, ಪರಿಷ್ಕೃತ ರೆಪೊ ದರ ೫.೪೦%, ಈ ವರ್ಷ ಸತತ ಮೂರನೇ ಬಾರಿಗೆ ಹೆಚ್ಚಳ
- ಬೆಲೆ ಏರಿಕೆಯನ್ನು ಹತ್ತಿಕ್ಕಲು ರೆಪೊ ದರದಲ್ಲಿ ೨೦೨೨ರ ಮೇ ಬಳಿಕ ೧.೪೦% ಏರಿಕೆ.
- ಈ ೨೦೨೨-೨೩ಕ್ಕೆ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ೭.೨%ಕ್ಕೆ ಉಳಿಸಿಕೊಳ್ಳಲಾಗಿದೆ.
- ಜಿಡಿಪಿ ಮುನ್ನೋಟ: ಏಪ್ರಿಲ್-ಜೂನ್- ೧೬.೨%, ಜುಲೈ-ಸೆಪ್ಟೆಂಬರ್-೬.೨%, ಅಕ್ಟೋಬರ್-ಡಿಸೆಂಬರ್-೪.೧%, ಜನವರಿ-ಮಾರ್ಚ್: ೪%
- ೨೦೨೨-೨೩ಕ್ಕೆ ಚಿಲ್ಲರೆ ಹಣದುಬ್ಬರದ ಮುನ್ನೋಟ: ೬.೭%
- ಹಣದುಬ್ಬರದ ಮುನ್ನೋಟ: ಜುಲೈ-ಸೆಪ್ಟೆಂಬರ್ : ೭.೧%, ಅಕ್ಟೋಬರ್-ಡಿಸೆಂಬರ್-೬.೪%, ಜನವರಿ-ಮಾರ್ಚ್: ೫%
- ೨೦೨೨-೨೩ರಲ್ಲಿ ಆಗಸ್ಟ್ ೩ ರ ತನಕ ಅತಿ ಹೆಚ್ಚು ಸಾಂಸ್ಥಿಕ ಹೂಡಿಕೆಯ ಹೊರ ಹರಿವು ಆಗಿದೆ. ಅದರ ಮೊತ್ತ ೧೩.೩ ಶತಕೋಟಿ ಡಾಲರ್ (ಅಂದಾಜು 1.05 ಲಕ್ಷ ಕೋಟಿ ರೂ.)
- ಹಣಕಾಸು ವಲಯದ ಬಂಡವಾಳ ಸ್ಥಿತಿಗತಿ ಉತ್ತಮವಾಗಿದೆ.
- ಭಾರತದ ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದ್ದು, ಜಾಗತಿಕ ಬಿಕ್ಕಟ್ಟಿನ ಪರಿಣಾಮಗಳ ನಿರ್ವಹಣೆಗೆ ಸಹಕರಿಸುತ್ತಿದೆ.
- ಹಣದುಬ್ಬರ ಹತ್ತಿಕ್ಕಲು ರಿಸರ್ವ್ ಬ್ಯಾಂಕ್ ಆದ್ಯತೆ ಕೊಟ್ಟಿದೆ.
- ಡಾಲರ್ ಎದುರು ರೂಪಾಯಿ ಮೌಲ್ಯ ಈ ವರ್ಷ ಆಗಸ್ಟ್ ೪ರ ತನಕ ೪.೭% ಮೌಲ್ಯ ಇಳಿಕೆ ದಾಖಲಿಸಿದೆ.
- ಅನಿವಾಸಿ ಭಾರತೀಯರು (ಎನ್ಆರ್ಐ) ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ಮೂಲಕ (Bharat Bill Payment System) ಭಾರತದಲ್ಲಿನ ತಮ್ಮ ಕುಟುಂಬಗಳ ಬಿಲ್ ಪಾವತಿ, ಶಿಕ್ಷಣ ವೆಚ್ಚ ಭರಿಸಬಹುದು.
- ಖಾದ್ಯ ತೈಲಗಳ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
- ಆರ್ ಬಿಐನ ಮುಂದಿನ ಹಣಕಾಸು ನೀತಿ ಪರಾಮರ್ಶೆ ೨೦೨೨ರ ಸೆಪ್ಟೆಂಬರ್ ೨೮-೩೦ಕ್ಕೆ ನಡೆಯಲಿದೆ.