Site icon Vistara News

RBI Monetary Policy : ಸಾಲಗಾರರಿಗೆ ಶೀಘ್ರದಲ್ಲೇ ಬಡ್ಡಿ ದರ ಇಳಿಕೆಯ ಬಿಗ್‌ ರಿಲೀಫ್ ?

loan emi

ಮುಂಬಯಿ: ಸಾಲಗಾರರಿಗೆ 2023-24ರಲ್ಲಿ ಸಾಲದ ಬಡ್ಡಿ ದರ ಇಳಿಕೆಯ ಸಿಹಿ ಸುದ್ದಿ ಶೀಘ್ರದಲ್ಲಿಯೇ ದೊರೆಯುವ ಸಾಧ್ಯತೆ ಇದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರೀಕ್ಷೆಯಂತೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ರೆಪೊ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಇರಿಸಿದೆ. ಮತ್ತೊಂದು ಕಡೆ ರಿಟೇಲ್‌ ಹಣದುಬ್ಬರ ಕೂಡ ಇಳಿಕೆಯ ಹಾದಿಯಲ್ಲಿದೆ. ಇದು ಗೃಹ ಸಾಲಗಾರರಿಗೆ ದೊಡ್ಡ ರಿಲೀಫ್‌ ಕೊಟ್ಟಿದೆ. ಏಕೆಂದರೆ 2022ರ ಮೇಯಿಂದ 2023ರ ಫೆಬ್ರವರಿ ತನಕ ಕೇವಲ 10 ತಿಂಗಳುಗಳಲ್ಲಿ ಆರ್‌ಬಿಐ ರೆಪೊ ದರದಲ್ಲಿ ಒಟ್ಟು 2.5% ಏರಿಕೆ ಮಾಡಿತ್ತು.

ಆರ್‌ಬಿಐ ಸತತ ಎರಡನೇ ದ್ವೈಮಾಸಿಕದಲ್ಲಿ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಹೀಗಾಗಿ ಶೀಘ್ರದಲ್ಲಿಯೇ ಸಾಲಗಳ ಬಡ್ಡಿ ದರಗಳು ಇಳಿಕೆಯಾಗುವ ಸಾಧ್ಯತೆ ಉಂಟಾಗಿದೆ. ಮುಖ್ಯವಾಗಿ ರೆಪೊ ದರವನ್ನು (repo rate) ಆಧರಿಸಿದ ಗೃಹ ಸಾಲಗಳ ಬಡ್ಡಿಯಲ್ಲಿ ಇಳಿಕೆ ನಿರೀಕ್ಷಿಸಲಾಗಿದೆ.

ಒಬ್ಬ ಗೃಹಸಾಲಗಾರ 20 ವರ್ಷ ಅವಧಿಗೆ 40 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾನೆ. ಸಾಲದ ಬಡ್ಡಿ ದರ 7% ಆಗಿತ್ತು ಹಾಗೂ ಅದರಲ್ಲಿ 2.5% ಏರಿಕೆ ಆಗಿದೆ ಎಂದಿಟ್ಟುಕೊಳ್ಳಿ. ಆಗ ಒಟ್ಟು ಬಡ್ಡಿ ದರ ಪಾವತಿಯು 34.43 ಲಕ್ಷ ರೂ.ಗಳಿಂದ 49.48 ಲಕ್ಷ ರೂ.ಗೆ ಏರಿಕೆಯಾಗುತ್ತದೆ. ಕಡಿಮೆ ಅವಧಿಯಲ್ಲಿ 44% ಹೆಚ್ಚಳವಾದಂತಾಗುತ್ತದೆ. ಸಾಲದ ಮರು ಪಾವತಿಯ ಅವಧಿಯಲ್ಲಿ 10 ವರ್ಷ ಏರಿಸಿದರೂ, 20ರಿಂದ 30 ವರ್ಷಕ್ಕೆ ವೃದ್ಧಿಸಿದರೂ, ಇಎಂಐನಲ್ಲಿ 2,622 ರೂ. ಏರಿಕೆಯಾಗುತ್ತದೆ. ಅಂದರೆ 31,012 ರೂ.ಗಳಿಂದ 33,634 ರೂ.ಗೆ ವೃದ್ಧಿಸುತ್ತದೆ. ಇದರ ಪರಿಣಾಮ ಒಟ್ಟು ಬಡ್ಡಿ ಮೊತ್ತ 34.42 ಲಕ್ಷ ರೂ.ಗಳಿಂದ 81.08 ಲಕ್ಷ ರೂ.ಗೆ ಏರುತ್ತದೆ. ಹೀಗಾಗಿ ಇಎಂಐ ಮತ್ತು ಅವಧಿ ಎರಡನ್ನೂ ಹೆಚ್ಚಿಸಿದರೆ ಕೊಡಬೇಕಿರುವ ಬಾಕಿ ಮೊತ್ತದಲ್ಲಿ 136% ಏರಿಕೆಯಾದಂತಾಗುತ್ತದೆ. ಹೀಗಾಗಿ ಸಾಲಗಾರರು ಸಾಲದ ಅವಧಿಯನ್ನು ಏರಿಸುವುದಕ್ಕಿಂತ ಇಎಂಐನಲ್ಲಿ ಹೆಚ್ಚಳ ಮಾಡುವುದು ಸೂಕ್ತ ಎನ್ನುತ್ತಾರೆ ಹಣಕಾಸು ಸಲಹೆಗಾರರು.

ಬಡ್ಡಿ ದರಗಳು ಯಾವಾಗ ಇಳಿಕೆಯಾಗಲಿದೆ?

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ರಿಟೇಲ್‌ ಹಣದುಬ್ಬರವನ್ನು 2-6% ರ ಶ್ರೇಣಿಯಲ್ಲಿ ಉಳಿಸಿಕೊಳ್ಳುವ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಪೂರೈಕೆಯ ಸರಣಿಯಲ್ಲಿ ಅಡಚಣೆ ಉಂಟಾಗಿದ್ದರಿಂದ ಹಣದುಬ್ಬರ ಏರಿತ್ತು. ಇದನ್ನು ಹತೋಟಿಗೆ ತರಲು ಆರ್‌ಬಿಐ ಬಡ್ಡಿ ದರವನ್ನು ಏರಿಸಿತ್ತು. ಇದೀಗ ರಿಟೇಲ್‌ ಹಣದುಬ್ಬರ ತಗ್ಗಿರುವುದರಿಂದ ಬಡ್ಡಿ ದರ ಇಳಿಕೆಗೆ ಹಾದಿ ಸುಗಮವಾಗುತ್ತಿದೆ. ಆರ್‌ಬಿಐ ಅಂದಾಜಿನ ಪ್ರಕಾರ 2023-24ರಲ್ಲಿ ರಿಟೇಲ್ ಹಣದುಬ್ಬರ ಸರಾಸರಿ 5.1% ರಲ್ಲಿ ಇರಬಹುದು. ತಜ್ಞರ ಪ್ರಕಾರ 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ಬಡ್ಡಿ ದರಗಳು ಇಳಿಕೆಯಾಗಲಿವೆ. ಜಾಗತಿಕ ಮಟ್ಟದಲ್ಲಿ ಬಡ್ಡಿ ದರಗಳು ಇಳಿಕೆಯಾದರೆ, ಆರ್‌ಬಿಐ ಅದನ್ನು ಅನುಸರಿಸಲಿದೆ. ಆಗ ರೆಪೊ ದರ ಕಡಿಮೆಯಾಗಿ ಬ್ಯಾಂಕ್‌ಗಳಲ್ಲೂ ಸಾಲದ ಬಡ್ಡಿ ದರ ಇಳಿಕೆಯಾಗಲಿದೆ.

ಇದನ್ನೂ ಓದಿ: HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಬಡ್ಡಿ ಇಳಿಕೆ, ಸಾಲಗಾರರಿಗೆ ನಿರಾಳ

Exit mobile version