Site icon Vistara News

RBI Monetary Policy: ಸತತ 8ನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡ ರೆಪೋ ದರ

RBI Monetary Policy

RBI Monetary Policy

ಮುಂಬೈ: ಗೃಹ, ವಾಹನ ಸಾಲ ಸೇರಿ ಹಲವು ರೀತಿಯ ಸಾಲಗಾರರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ (Repo Rate) ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಆರ್‌ಬಿಐ (RBI) ಮುಂದುವರಿಸಿದೆ. ಆರ್‌ಬಿಐ ತನ್ನ ಮೂರು ದಿನಗಳ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯನ್ನು ಜೂನ್ 5ರಂದು ಪ್ರಾರಂಭಿಸಿತ್ತು. ಇಂದು ತನ್ನ ನಿರ್ಧಾರವನ್ನು ಹಂಚಿಕೊಂಡಿದೆ. ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು.

ಶಕ್ತಿಕಾಂತ ದಾಸ್‌ ಮಾತನಾಡಿ, ʼʼಹಣಕಾಸು ನೀತಿ ಸಮಿತಿಯು 4:2 ಬಹುಮತದಿಂದ ರೆಪೊ ದರವನ್ನು ಯಥಾಸ್ಥಿಯಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಇದರ ಪರಿಣಾಮವಾಗಿ, ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (SDF) ದರವು ಶೇ. 6.25 ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರವು ಶೇ. 6.75ರಷ್ಟು ಇರಲಿದೆʼʼ ಎಂದು ತಿಳಿಸಿದ್ದಾರೆ.

ಗೃಹ ಸಾಲದ ಮೇಲೆ ಪರಿಣಾಮ ಬೀರುವುದಿಲ್ಲ

ರೆಪೋ ದರ ಯಥಾಸ್ಥಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ರೆಪೋ ದರವು ಬದಲಾಗದೆ ಉಳಿದಿರುವುದರಿಂದ ಬ್ಯಾಂಕ್‌ಗಳು ಶೀಘ್ರದಲ್ಲೇ ತಮ್ಮ ಸಾಲದ ದರಗಳನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಅಂದರೆ ನಿಮ್ಮ ಇಎಂಐ ಸದ್ಯ ಏರಿಕೆಯಾಗುವುದಿಲ್ಲ. ಇತ್ತ 2025ರ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಆರ್‌ಬಿಐ ನೀಡಿದ್ದರಿಂದ ಹೆಚ್ಚಿಸಿದ್ದರಿಂದ ಸೆನ್ಸೆಕ್ಸ್ 600 ಅಂಕ ಜಿಗಿತ ಕಂಡಿದೆ.

ರೆಪೋ ದರವನ್ನು ಬದಲಾಯಿಸದೆ ಇರಿಸುವುದರಿಂದ ಮನೆ ಖರೀದಿದಾರರು ನಿರಾಳರಾಗಲಿದ್ದಾರೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಆರ್‌ಬಿಐಯ ಹಣಕಾಸು ನೀತಿಯ ಪ್ರಮುಖ ಗುರಿ. ಪ್ರಸ್ತುತ ಹಣದುಬ್ಬರ ದರ ವಿಶೇಷವಾಗಿ ಆಹಾರ ಹಣದುಬ್ಬರ ದರವು ಆರ್‌ಬಿಐಯ ಗುರಿಯಾದ ಶೇ. 4ಕ್ಕಿಂತ ಹೆಚ್ಚಾಗಿದೆ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎಂದು ಆರ್‌ಬಿಐ ಹೇಳಿದೆ.

ರೆಪೋ ದರ ಎಂದರೇನು?

ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವೇ ರೆಪೋದರ ಆಗಿದೆ. ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದನ್ನೇ ರೆಪೋ ರೇಟ್‌ ಎನ್ನುತ್ತಾರೆ. ಕೆಲವೊಮ್ಮೆ, ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್‌ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ, ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ, ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.

ಇದನ್ನೂ ಓದಿ: Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

Exit mobile version